ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ನಾಳೆ ಬಂದ್-ಬಂದ್‍ಗೆ 700ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳ ಬೆಂಬಲ

ಬೆಂಗಳೂರು, ಫೆ.12-ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಸರೋಜಿನಿ ಮಹಿಷಿ ವರದಿ ಕೂಡಲೇ ಜಾರಿಯಾಗಬೇಕು ಎಂದು ಒತ್ತಾಯಿಸಿ ನಾಳೆ ಕರೆ ನೀಡಲಾಗಿರುವ ಬಂದ್‍ಗೆ 700ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಬೆಂಬಲ ಘೋಷಿಸಿವೆ.

ನಗರದ ಆನಂದ್‍ರಾವ್ ವೃತ್ತದಲ್ಲಿ ಕಳೆದ 100 ದಿನಗಳಿಂದಲೂ ನಿರಂತರವಾಗಿ ಧರಣಿ ನಡೆಸುತ್ತಿದ್ದ ಕನ್ನಡ ಪರ ಸಂಘಟನೆಗಳು ಸರ್ಕಾರದ ಗಮನ ಸೆಳೆಯುವ ಸಲುವಾಗಿ ಬಂದ್‍ಗೆ ಕರೆ ನೀಡಿವೆ.

ಕೆಲವು ಸಂಘಟನೆಗಳು ಬಂದ್‍ಗೆ ಬೆಂಬಲ ನೀಡದೆ ತಟಸ್ಥವಾಗಿ ಉಳಿದಿವೆ. ಆದರೆ 700ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದ್ದು, ದಲಿತ ಸಂಘಟನೆಗಳು, ರೈತ ಸಂಘಟನೆಗಳು, ಮಹಿಳಾ ಹೋರಾಟಗಾರ್ತಿಯರು, ಓಲಾ, ಊಬರ್ ಟ್ಯಾಕ್ಸಿ ಡ್ರೈವರ್ಸ್ ಅಸೋಸಿಯೇಷನ್, ಆಟೋ ಚಾಲಕರ ಸಂಘ, ಖಾಸಗಿ ವಾಹನ ಮಾಲೀಕರ ಸಂಘ, ಸರ್ಕಾರಿ ವಾಹನ ಚಾಲಕರ ಸಂಘ ಸೇರಿದಂತೆ ಹಲವಾರು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್‍ಗಳು ಬಂದ್ ವೇಳೆ ಎಂದಿನಂತೆ ಸಂಚರಿಸಲಿವೆ ಎಂದು ಸಾರಿಗೆ ನಿಗಮಗಳು ಸ್ಪಷ್ಟಪಡಿಸಿವೆ. ಶಾಲಾ-ಕಾಲೇಜುಗಳಿಗೂ ರಜೆ ನೀಡಲಾಗಿಲ್ಲ. ಹಾಲು, ಮೊಸರು ಉತ್ಪನ್ನಗಳ ಮಾರಾಟ ಸಂಸ್ಥೆಗಳು, ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಸೇವೆ, ಔಷಧಿ ಅಂಗಡಿಗಳು, ಪೆಟ್ರೋಲ್ ಬಂಕ್‍ಗಳು, ಸಿನಿಮಾ ಮಂದಿರಗಳು, ಮಾರುಕಟ್ಟೆಗಳು ಎಂದಿನಂತೆ ಕರ್ತವ್ಯ ನಿರ್ವಹಿಸಲಿವೆ ಎಂದು ಹೇಳಲಾಗುತ್ತಿದೆ. ಆದರೆ ಕೊನೆ ಕ್ಷಣದಲ್ಲಿನ ಪರಿಸ್ಥಿತಿ ಆಧರಿಸಿ ಎಲ್ಲಾ ಸೇವೆಗಳು ಏರುಪೇರಾಗುವ ಸಾಧ್ಯತೆ ಇದೆ.

ಸರೋಜಿನಿ ಮಹಿಷಿ ವರದಿ ಆಧರಿಸಿ ಕನ್ನಡಿಗರಿಗೆ ಉದ್ಯೋಗ ನೀಡಲು ಕಾನೂನು ರೂಪಿಸಬೇಕು ಎಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ. ಆದರೆ ಇದಕ್ಕೆ ಕೆಲವು ಸಂಘಟನೆಗಳು ಕೈಜೋಡಿಸಿಲ್ಲ. ತಮ್ಮದೇ ಹಾದಿಯಲ್ಲಿ ಪ್ರತ್ಯೇಕ ಹೋರಾಟಕ್ಕೆ ಮುಂದಾಗಿವೆ.

ಕನ್ನಡ ಸಂಘಟನೆಗಳ ನಡುವೆಯೇ ಬಂದ್ ವಿಷಯದಲ್ಲಿ ದ್ವಂದ್ವಗಳಿವೆ. ಶತಾಯಗತಾಯ ಬಂದ್ ನಡೆದೇ ನಡೆಯುತ್ತದೆ ಎಂದು ಈಗಾಗಲೇ ನಿರಂತರವಾಗಿ ಧರಣಿ ನಡೆಸುತ್ತಿರುವ ಸಂಘಟನೆಗಳ ಮುಖಂಡ ನಾಗೇಶ್ ಎಚ್ಚರಿಕೆ ನೀಡಿದ್ದಾರೆ.

ನಾವು ಏಕಾಏಕಿ ಬಂದ್ ಆಚರಿಸುತ್ತಿಲ್ಲ. ಈ ಮೊದಲು ಧರಣಿ ನಡೆಸಿದಾಗ 48 ದಿನ ಗಡುವು ನೀಡಿದ್ದೆವು. ಸರ್ಕಾರ ಗಂಭೀರವಾಗಿ ಪರಿಗಣಿಸದೆ ಇದ್ದುದರಿಂದ ಬಂದ್‍ಗೆ ಕರೆ ನೀಡಬೇಕಾಯಿತು ಎಂದಿದ್ದಾರೆ.

ನಾಳೆ ಬಿಎಂಟಿಸಿ ಬಸ್‍ಗಳು ರಸ್ತೆಗಿಳಿಯುವುದಿಲ್ಲ. ಖಾಸಗಿ ಟ್ಯಾಕ್ಸಿ ಸೇವೆಗಳು ಇರುವುದಿಲ್ಲ. ಸಾರ್ವಜನಿಕರು ಮನೆಯಿಂದ ಬರಬೇಕಾದರೆ ಯೋಚನೆ ಮಾಡಿ ಬನ್ನಿ. ಗಾರ್ಮೆಂಟ್ಸ್ ನೌಕರರು, ರೈತ ಸಂಘಟನೆಗಳು ಎಲ್ಲರೂ ಬೆಂಬಲ ನೀಡಿದ್ದಾರೆ.

ಕರವೇ ಅಧ್ಯಕ್ಷ ನಾರಾಯಣಗೌಡ, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರ ಜೊತೆ ಮಾತನಾಡಿದ್ದೇನೆ. ನಾರಾಯಣಗೌಡರಿಗೆ 10ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದೇನೆ. ವಾಟಾಳ್ ಅವರ ಕಾಲಿಗೆ ಬಿದ್ದಿದ್ದೇನೆ. ಆದರೂ ಬಂದ್‍ಗೆ ಬೆಂಬಲ ಕೊಡುವುದಿಲ್ಲ ಎಂದಿದ್ದಾರೆ ಎಂದರು.

ನಾಳೆ ಬಂದ್ ಆಚರಣೆ ನಂತರವೂ ನಮ್ಮ ಧರಣಿ ಸತ್ಯಾಗ್ರಹ ಮುಂದುವರೆಯಲಿದೆ. ಮತ್ತೂ 100 ದಿನ ಸಮಯ ಕೊಡುತ್ತೇವೆ. ಸರ್ಕಾರ ಜನರನ್ನು ಯಮಾರಿಸುವ ಪ್ರಯತ್ನ ಮಾಡುತ್ತಿದೆ. ಮುಖ್ಯಮಂತ್ರಿಯವರೇ ಕನ್ನಡಿಗರಿಗೆ ಶೇ.75ರಷ್ಟು ಉದ್ಯೋಗ ಸಿಗಬೇಕು ಎಂದು ಹೇಳಿದ್ದಾರೆ.

ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ನಾವು ಬಂದ್‍ಗೆ ಬೆಂಬಲ ನೀಡುತ್ತಿದ್ದೇವೆ. ಎಲ್ಲಾ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಬೇಕು ಎಂದ ಅವರು, ನಾಳೆ ಸಿಎಂ ಜೊತೆ ಬಜೆಟ್ ಪೂರ್ವ ಸಭೆ ಇದೆ ಅದು ಮುಗಿದ ಬಳಿಕ ಬಂದ್‍ನಲ್ಲಿ ಭಾಗವಹಿಸುವುದಾಗಿ ತಿಳಿಸಿದರು.

ನಾವು ಬಂದ್‍ಗೆ ಕರೆ ನೀಡಿದ ಮೇಲೆ ಸುತ್ತೋಲೆ ಹೊರಡಿಸಿದ್ದಾರೆ. ಆದರೆ ಇದ್ಯಾವುದೂ ಫಲಪ್ರದ ಅಲ್ಲ, ಕನ್ನಡಿಗರಿಗೆ ಉದ್ಯೋಗ ಕೊಡುವುದಾಗಿ ಆದೇಶ ಹೊರಡಿಸಿ ಈಗಲೇ ನಾವು ಬಂದ್ ಕೈ ಬಿಡುತ್ತೇವೆ ಎಂದು ಸವಾಲು ಹಾಕಿದರು.

ಓಲಾ, ಊಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ ಮಾತನಾಡಿ, ಖಾಸಗಿ ಟ್ಯಾಕ್ಸಿಗಳು ರಸ್ತೆಗಿಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ