ಹೊಸದಿಲ್ಲಿ: ಈ ಬಾರಿಯ ಸಂಸತ್ ಬಜೆಟ್ ಅವೇಶನವು ಶುಕ್ರವಾರ ಪ್ರಾರಂಭವಾಗಲಿದ್ದು, ಪ್ರಸ್ತುತ ದೇಶದಲ್ಲಿ ಮೂರು ಹೊಸ ಕೃಷಿ ಕಾಯ್ದೆಗಳನ್ನು ವಿರೋಸಿ ನಡೆಯುತ್ತಿರುವ ರೈತ ಆಂದೋಲನದ ಹಿನ್ನೆಲೆ ಅವೇಶನವು ಮಹತ್ವ ಪಡೆದುಕೊಳ್ಳಲಿದೆ.
ಬೆಳಗ್ಗೆ ಉಭಯ ಸದನಗಳ ಜಂಟಿ ಸಭೆಯನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಭಾಷಣದೊಂದಿಗೆ ಅವೇಶನ ಆರಂಭವಾಗಲಿದ್ದು, ಬಳಿಕ ಫೆಬ್ರವರಿ 1ರಂದು ನಡೆಯಲಿರುವ ಕೇಂದ್ರ ಬಜೆಟ್ ಮಂಡನೆಯಾಗಲಿದೆ.
ಕಾಗದ ರಹಿತ ಬಜೆಟ್‍ನ ಹಿನ್ನೆಲೆ ಎಲ್ಲ ದಾಖಲೆಗಳು ಮತ್ತು ಆರ್ಥಿಕ ಸಮೀಕ್ಷೆಯ ದೃಢೀಕೃತ ಪ್ರತಿಗಳನ್ನು ಸದನ ಪರಿಶೀಲಿಸಿದ ಬಳಿಕ ಅವುಗಳನ್ನು ಆನ್‍ಲೈನ್‍ನಲ್ಲಿ ಲಭ್ಯವಾಗಿಸಲಾಗುತ್ತದೆ ಎಂದು ಲೋಕಸಭಾ ಸಚಿವಾಲಯ ತಿಳಿಸಿದೆ.
ಕಳೆದ ಬಾರಿಯಂತೆಯೇ ಈ ಬಾರಿಯೂ ಕೋವಿಡ್-19 ಶಿಷ್ಟಾಚಾರಗಳು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಅನ್ವಯವಾಗಲಿವೆ. ಅದರಂತೆ ಸದನದ ಕಲಾಪಗಳು ಪ್ರತಿ 5 ಗಂಟೆಗಳ ಪಾಳಿಗಳಲ್ಲಿ ನಡೆಯಲಿವೆ. ಮೇಲ್ಮನೆಯ ಕಲಾಪವು ಬೆಳಗ್ಗೆ ಮತ್ತು ಕೆಳ ಮನೆಯ ಕಲಾಪ ಸಂಜೆ ನಡೆಯಲಿವೆ.