ಭಾರತದಲ್ಲಿ ತಯಾರಿಸಲಾಗಿರುವ ಕೋವಿಡ್-19 ಎರಡು ಲಸಿಕೆಗಳಿಂದ ವಿಶ್ವದ ಮನುಕುಲವನ್ನು ಸಂರಕ್ಷಿಸಲು ಭಾರತ ಸಜ್ಜಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ

ಭಾರತದಲ್ಲಿ ತಯಾರಿಸಲಾಗಿರುವ ಕೋವಿಡ್-19 ಎರಡು ಲಸಿಕೆಗಳಿಂದ ವಿಶ್ವದ ಮನುಕುಲವನ್ನು ಸಂರಕ್ಷಿಸಲು ಭಾರತ ಸಜ್ಜಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಮೇಡ್ ಇನ್ ಇಂಡಿಯಾದ ಉತ್ಪನ್ನಗಳು ಮತ್ತು ಪರಿಹಾರಗಳಿಂದ ಇಡೀ ವಿಶ್ವಕ್ಕೆ ಪ್ರಯೋಜನ ಲಭಿಸಲಿದೆ ಎಂದು ಅವರು 16ನೇ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮ ಉದ್ದೇಶಿಸಿ ಮಾಡಿದ ವರ್ಚುವಲ್ ಭಾಷಣದಲ್ಲಿ ತಿಳಿಸಿದರು. ಅನಿವಾಸಿ ಭಾರತೀಯರು ಕೋವಿಡ್-19 ವಿರುದ್ಧದ ಹೋರಾಟಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅವರು ಪಿಎಂ-ಕೇರ್ ನಿಧಿಗೆ ನೀಡಿರುವ ಕೊಡುಗೆ ದೇಶದ ಆರೋಗ್ಯ ಸೇವಾ ವಲಯವನ್ನು ಬಲಪಡಿಸಿದೆ ಎಂದು ತಿಳಿಸಿದರು. ಬ್ರಾಂಡ್ ಇಂಡಿಯಾ ಬಲಪಡಿಸಲು ಅನಿವಾಸಿ ಭಾರತೀಯರು ನಿರ್ಣಾಯಕ ಪಾತ್ರ ವಹಿಸಬೇಕು. ಪ್ರವಾಸಿ ಭಾರತೀಯರು ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಬಳಸಬೇಕು. ಇದರಿಂದ ಜಾಗತಿಕ ಮಟ್ಟದಲ್ಲಿ ಭಾರತೀಯ ಉತ್ಪನ್ನಗಳ ಬಗ್ಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಯುವ ಸಮುದಾಯ ದೇಶದ ಸಂಸ್ಕøತಿ ಮತ್ತು ಹಿರಿಮೆಯನ್ನು ಜಗತ್ತಿಗೆ ತಿಳಿಸಲು ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದರು. ಶಿಕ್ಷಣ ಕ್ಷೇತ್ರದಿಂದ ಹಿಡಿದು ಉದ್ಯಮ ವಲಯದವರೆಗೆ ಭಾರತದಲ್ಲಿ ರಚನಾತ್ಮಕ ಸುಧಾರಣೆಗಳನ್ನು ತರುವ ಮೂಲಕ ಆಮೂಲಾಗ್ರ ಬದಲಾವಣೆಗೆ ನಾಂದಿ ಹಾಡಲಾಗಿದೆ. ದೇಶದಲ್ಲಿ ತಯಾರಿಕೆ ಅಥವಾ ಉತ್ಪಾದನೆ ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರವು ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕಧನ ಆರಂಭಿಸಿದೆ. ಇದು ಅಲ್ಪಾವಧಿಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಮಾತನಾಡಿ, ಕೋವಿಡ್ ಸೋಂಕು ದೇಶಕ್ಕೆ ಹಲವು ಪಾಠಗಳನ್ನು ಕಲಿಸಿತು. ಅದರಲ್ಲೂ ಮುಖ್ಯವಾಗಿ, ಸ್ವಾವಲಂಬಿ ಬದುಕು ಅಗತ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟಿತು ಎಂದರು. ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಭಾರತ ಸ್ವಂತ ಲಸಿಕೆ ತಯಾರಿಸಿಕೊಳ್ಳುವದರ ಜೊತೆಗೆ ವಿಶ್ವದ ಇತರೆ ರಾಷ್ಟ್ರಗಳಿಗೆ ಪೂರೈಸಲು ಮುಂದಾಗಿದೆ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿ ಸುರಿನಾಮ್ ರಾಷ್ಟ್ರದ ಅಧ್ಯಕ್ಷ ಚಂದ್ರಿಕಾ ಪೆರ್ಸಾದ್ ಸಂತೋಖಿ ಮಾತನಾಡಿ, ಸುರಿನಾಮ್ ಭಾರತದೊಂದಿಗೆ ದೀರ್ಘ ಬಾಂಧವ್ಯ ಹಂಚಿಕೊಂಡಿದೆ. ಉಭಯ ರಾಷ್ಟ್ರಗಳು ಪುರಾತನ, ಪರಂಪರೆ, ಸಂಸ್ಕøತಿ ಮತ್ತು ಆಚರಣೆಗಳನ್ನು ನಿರ್ವಹಿಸುತ್ತಾ ಬಂದಿವೆ. ಈ ನಿಟ್ಟಿನಲ್ಲಿ ಎರಡೂ ರಾಷ್ಟ್ರಗಳು ವ್ಯಾಪಾರ ವಹಿವಾಟುಗಳನ್ನು ಬಲಪಡಿಸಲು ಆದ್ಯತೆಯ ಗಮನ ನೀಡಬೇಕಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ