ಐಜ್ವಾಲ್:ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ಅವರು ಮಿಜೋರಾಂ ಕಾಂಗ್ರೆಸ್ ಸರ್ಕಾರವು ಭ್ರಷ್ಟ ಸರ್ಕಾರವಾಗಿದ್ದು ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.
ಇಲ್ಲಿನ ಆರ್.ಡೆಂಗ್ತೊಮಾ ಒಳಾಂಗಣ ಕ್ರೀಡಾಂಗಣದಲ್ಲಿ ಅವರು ಚುನಾವಣಾ ಪ್ರಚಾರ ಭಾಷಣದಲ್ಲಿ ಪಾಲ್ಗೊಂಡು ಮಾತನಾಡಿದರು.
ಮುಖ್ಯಮಂತ್ರಿ ಲಾಲ್ ತನ್ ಹಾವ್ಲಾ ಭ್ರಷ್ಟ ಮತ್ತು ವಂಶಾಡಳಿತವನ್ನು ಸ್ಥಾಪಿಸಲು ಯತ್ನಿಸುತ್ತಿದ್ದಾರೆ.ತಮ್ಮ ಸೋದರನನ್ನೇ ರಾಜ್ಯದ ಮುಂದಿನ ಮುಖ್ಯಮಂತ್ರಿ ಯನ್ನಾಗಿ ಕೂರಿಸಲು ಅವರು ಯತ್ನಿಸುತ್ತಿದ್ದಾರೆ ಎಂದು ಷಾ ಆರೋಪಿಸಿದರು.
ಮಿಜೋ ರಾಷ್ಟ್ರೀಯ ರಂಗ ಸೇರಿದಂತೆ ಬಿಜೆಪಿಯು ಯಾವುದೇ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.ಎಲ್ಲಾ 40 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಲಿದ್ದು ಭ್ರಷ್ಟಾಚಾರ ಮುಕ್ತ ಮತ್ತು ಇಂಧನ ಹಾಗೂ ಆಹಾರವಸ್ತುಗಳಲ್ಲಿ ಸ್ವಾವಲಂಬಿ ಸರ್ಕಾರವನ್ನು ನೀಡುವ ವಿಶ್ವಾಸದೊಂದಿಗೆ ಸ್ಪರ್ಧಿಸುತ್ತಿದೆ.
ಮಿಜೋರಾಂ ಸೇರಿದಂತೆ ಎಲ್ಲಾ ಎಂಟು ಈಶಾನ್ಯ ರಾಜ್ಯಗಳನ್ನೂ ಕಾಂಗ್ರೆಸ್ ಆಡಳಿತ ಮುಕ್ತಗೊಳಿಸಲು ಬಿಜೆಪಿ ಎಲ್ಲ ರೀತಿಯ ತಂತ್ರಗಾರಿಕೆಯನ್ನೂ ಬಳಸಲಿದೆ.ಸ್ವತಃ ಮುಖ್ಯಮಂತ್ರಿಯೇ ಹೆದ್ದಾರಿ ಮತ್ತು ರಸ್ತೆಗಳ ಖಾತೆಯನ್ನು ಹೊಂದಿದ್ದರೂ ರಾಜ್ಯದ ರಸ್ತೆಗಳ ಸ್ಥಿತಿ ಅತ್ಯಂತ ಶೋಚನೀಯವಾಗಿವೆ.ಕೇಂದ್ರ ಸರ್ಕಾರವು ಮಿಜೋರಾಂ ರಾಜ್ಯಕ್ಕೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದರೂ ರಾಜ್ಯ ಸರ್ಕಾರ ಜನರ ಹಿತದ ಸಲುವಾಗಿ ಅಭಿವೃದ್ಧಿ ಯೋಜನೆ ಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದೂ ಷಾ ದೂರಿದರು.
ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಶಾಸಕ ಹಾಗೂ ಮಾಜೀ ಮಂತ್ರಿ ಡಾ.ಬಿ.ಡಿ.ಚಕ್ಮಾ ಅವರನ್ನು ಷಾ ಅವರು ಇದೇ ಸಂದರ್ಭದಲ್ಲಿ ಪಕ್ಷಕ್ಕೆ ಬರಮಾಡಿಕೊಂಡರು.
ಅಸಾಂ ಹಣಕಾಸು ಸಚಿವರೂ ಮಿಜೋರಾಂ ಚುನಾವಣಾ ಉಸ್ತುವಾರಿಗಳೂ ಆದ ಹಿಮಂತ ಬಿಸ್ವಾಸ್ ಶರ್ಮಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಮಲಾಲ್,ಹಾಗೂ ಪಕ್ಷದ ವರಿಷ್ಠರು ಉಪಸ್ಥಿತರಿದ್ದರು. ಇದೇ ವೇಳೆ ಷಾ ಅವರು ಪಕ್ಷದ ಕಚೇರಿ ”ಅಟಲ್ ಭವನ್”ಉದ್ಘಾಟಿಸಿದರು.
BJP,Amith shah,mijoram