ಇ-ವಿಧಾನ ಯೋಜನೆ ಜಾರಿಗೆ ತರುವಲ್ಲಿ ಸರ್ಕಾರ ವಿಫಲವಾಗಿದೆ: ಸ್ಪೀಕರ್ ವಿಶ್ವೇಶ್ವರ ಹೆಗ್ಡೆ ಕಾಗೇರಿ

ಬೆಂಗಳೂರು,ಆ.9 – ರಾಜ್ಯ ವಿಧಾನಮಂಡಲವನ್ನು ಕಾಗದ ರಹಿತಗೊಳಿಸುವ ಇ-ವಿಧಾನ ಯೋಜನೆ ಜಾರಿಗೆ ತರುವಲ್ಲಿ ಸರ್ಕಾರ ಬಹುತೇಕ ವಿಫಲವಾಗಿದೆ.
ಇತ್ತೀಚೆಗೆ ಇ-ವಿಧಾನ ಕಾರ್ಯರೂಪಕ್ಕೆ ಬರದಿರುವ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗ್ಡೆ ಕಾಗೇರಿ ಬೇಸರ ವ್ಯಕ್ತಪಡಿಸಿದ್ದರು.

2014ರಲ್ಲಿ ರಾಜ್ಯದ ವಿಧಾನಮಂಡಲವನ್ನು ಕಾಗದ ರಹಿತವಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯ ಆರಂಭವಾಗಿತ್ತು. ಆ ವೇಳೆ ಹಿಮಾಚಲ ಪ್ರದೇಶ ವಿಧಾನಸಭೆಯನ್ನು ಡಿಜಿಟಲೀಕರಣ ಮಾಡಲಾಗಿತ್ತು. ಇದೇ ಮಾದರಿಯಲ್ಲಿ ರಾಜ್ಯ ವಿಧಾನಸಭೆ, ವಿಧಾನರಿಷತ್‍ನಲ್ಲಿ ಕಾಗದ ರಹಿತ ವ್ಯವಸ್ಥೆ ಜಾರಿಗೆ ತರುವ ಪ್ರಸ್ತಾಪ ಬಂದಿತ್ತು.

ಈ ಸಂಬಂಧ ವಿಧಾನಸಭೆ ಸಚಿವಾಲಯದ ಉನ್ನತಾಧಿಕಾರಿಗಳು ಹಾಗೂ ಐಟಿ ತಜ್ಞರು 2015ರಂದು ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿ ಅಧ್ಯಯನ ಕೈಗೊಂಡು ಬಂದಿದ್ದರು.

ಬೆಳಗಾವಿ ಸುವರ್ಣಸೌಧ ಕಟ್ಟಡ ಸೇರಿ ಉಭಯ ಸದನಗಳನ್ನ ಇ-ವಿಧಾನ ಮಂಡಲವಾಗಿಸಲು ಸುಮಾರು 69 ಕೋಟಿ ರೂ. ವೆಚ್ಚದ ಅಂದಾಜು ಮಾಡಲಾಗಿತ್ತು.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವಾಲಯ ಒನ್ ನೇಷನ್ ಒನ್ ಅಪ್ಲಿಕೇಷನ್ ಹೆಸರಿನಡಿ ನ್ಯಾಷನಲ್ ಇ-ವಿಧಾನ್ ಅಪ್ಲಿಕೇಷನ್ ಸಿದ್ಧಪಡಿಸಿದೆ. ಇದರ ವೆಬ್‍ಸೈಟ್‍ಗೆ ಕರ್ನಾಟಕವೂ ಸೇರ್ಪಡೆಗೊಂಡಿದೆ.

ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಶನ್ (ನೆವ) ಇದರ ಅನುಷ್ಠಾನದ ಜವಾಬ್ದಾರಿ ಹೊಂದಿತ್ತು.ಕೇಂದ್ರ ಸರ್ಕಾರವೇ ಶೇ.60ರಷ್ಟು ವೆಚ್ಚ ಭರಿಸುವ ಹೊಣೆ ಹೊತ್ತಿತ್ತು. ಈ ಸಂಬಂಧ 2018ರಲ್ಲಿ ರಾಜ್ಯದ ಸಿಬ್ಬಂದಿಗೆ ತರಬೇತಿಯನ್ನು ನೀಡಲಾಗಿತ್ತು. ಆದರೆ ಇಷ್ಟು ವರ್ಷ ಕಳೆದರೂ ಶೀಘ್ರ ಯೋಜನೆ ಜಾರಿಗೆ ಬರುವ ಯಾವುದೇ ಲಕ್ಷಣ ಕಾಣುತ್ತಿಲ್ಲ.

ಇ-ವಿಧಾನ ಅನುಷ್ಠಾನ ಮರೀಚಿಕೆ:
ಯೋಜನೆಯ ವೆಚ್ಚ ಭರಿಸುವಿಕೆಯ ಗೊಂದಲ, ಆರ್ಥಿಕ ಇಲಾಖೆಯ ಅನುಮತಿ ವಿಳಂಬ, ಅಂದಾಜು ವೆಚ್ಚದ ಏರಿಕೆಯಲ್ಲೇ ಇ-ವಿಧಾನ ಯೋಜನೆ ಹಳ್ಳ ಹಿಡಿದಿದೆ.

ಯೋಜನೆ ಅನುಷ್ಠಾನದ ಮೊದಲ ಹಂತದಲ್ಲಿ ಸಾಫ್ಟ್‍ವೇರ್‍ಗೆ 39.20 ಕೋಟಿ ರೂ., ಹಾರ್ಡ್‍ವೇರ್, ನೆಟ್‍ವರ್ಕಿಂಗ್‍ಗೆ 124 ಕೋಟಿ ರೂ. ಸೇರಿ ಒಟ್ಟು 163 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.

ಯೋಜನೆ ಅನುಷ್ಠಾನದ 2ನೇ ಹಂತದಲ್ಲಿ ಸಾಫ್ಟ್‍ವೇರ್‍ಗಾಗಿ 63.15 ಲಕ್ಷ ರೂ. ಎಂದು ವಿಧಾನಸಭೆ ಸಚಿವಾಲಯ ಅಂದಾಜಿಸಿತ್ತು. ಅದೇ ಹಾರ್ಡ್‍ವೇರ್, ನೆಟ್‍ವರ್ಕಿಂಗ್‍ಗೆ ಸುಮಾರು 51.57 ಕೋಟಿ ರೂ. ಅಂದಾಜಿಸಿತ್ತು.

ವಿಧಾನಸಭೆ ಸಚಿವಾಲಯ ಕಿಯೋನಿಕ್ಸ್ ಮೂಲಕ 254 ಕೋಟಿ ರೂ. ಮೊತ್ತದ ಕಾರ್ಯಯೋಜನೆ ಸಿದ್ಧಪಡಿಸಿತ್ತು. ಅಂದರೆ ಯೋಜನೆ ಜಾರಿಗೆ ಸುಮಾರು 69 ಕೋಟಿ ರೂ. ಅಂದಾಜು ವೆಚ್ಚ 254 ಕೋಟಿ ರೂ.ಗೆ ಏರಿಕೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಯಿತು.

ಒಲವು ತೋರದ ಆರ್ಥಿಕ ಇಲಾಖೆ : ವೆಚ್ಚದಲ್ಲಿನ ಏರಿಕೆ, ಆರ್ಥಿಕ ಸಂಕಷ್ಟ ಹಿನ್ನೆಲೆ ಆರ್ಥಿಕ ಇಲಾಖೆಯೂ ಇ-ವಿಧಾನ ಯೋಜನೆಗಾಗಿನ ಹಣ ಬಿಡುಗಡೆಗೆ ಅನುಮತಿ ನೀಡಿಲ್ಲ. ಕರ್ನಾಟಕ ವಿಧಾನಸಭೆ ಅಂದಾಜು ವೆಚ್ಚವನ್ನು ಏರಿಕೆ ಮಾಡಿರುವ ಕಾರಣ ಆರ್ಥಿಕ ಇಲಾಖೆ ಇನ್ನೂ ಅನುಮತಿ ನೀಡಿಲ್ಲ.

ಇತ್ತ ಯೋಜನಾ ವೆಚ್ಚದಲ್ಲಿ ಭಾರೀ ಏರಿಕೆಯಾಗಿರುವ ಸಂಬಂಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರ್ಥಿಕ ಇಲಾಖೆಗೆ ಪತ್ರ ಬರೆದು ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದರು.

ವೆಚ್ಚ ಸಂಬಂಧ ಗೊಂದಲ, ಏರಿಕೆ ಬಗ್ಗೆ ಆರ್ಥಿಕ ಇಲಾಖೆ ಕೇಳಿದ ಸ್ಪಷ್ಟೀಕರಣಕ್ಕೂ ವಿಧಾನಸಭೆ ಸಚಿವಾಲಯ ಅಧಿಕಾರಿಗಳು ಉತ್ತರ ಕೊಡಲು ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಸರ್ಕಾರ, ಆಡಳಿತವರ್ಗದ ನಿರಾಸಕ್ತಿ : ಇ-ವಿಧಾನ ಯೋಜನೆ ಜಾರಿಗೆ ಸರ್ಕಾರ ಹಾಗೂ ಆಡಳಿತ ವರ್ಗದ ನಿರಾಸಕ್ತಿಯೇ ಪ್ರಮುಖ ಕಾರಣವಾಗಿದೆ. ಯೋಜನೆ ಜಾರಿಗೆ ಬೇಕಾಗಿರುವ ಇಚ್ಛಾಶಕ್ತಿ ಅಧಿಕಾರಿಗಳಿಗೂ ಇಲ್ಲ. ಇತ್ತ ಸರ್ಕಾರಕ್ಕೂ ಇಲ್ಲವಾಗಿದೆ. ಈ ಬಗ್ಗೆ ಸ್ವತಃ ಸ್ಪೀಕರ್ ಕಾಗೇರಿ ಅವರೇ ಒಪ್ಪಿಕೊಂಡಿದ್ದಾರೆ.

ಕೇಂದ್ರ ಸರ್ಕಾರ ನೀಡುವ ಅನುದಾನವನ್ನೇ ಬಳಸಿ ಕಡಿಮೆ ವೆಚ್ಚದಲ್ಲಿ ಇ-ವಿಧಾನ ಅನುಷ್ಠಾನಕ್ಕೆ ತರಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

ಇತ್ತ ಕರ್ನಾಟಕ ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಮಟ್ಟದ ಸಹಕಾರ ಇಲ್ಲ ಎಂಬ ನೆಪ ಹೇಳಿ ತಾವೇ ವೆಚ್ಚ ಭರಿಸಿ, ತಮ್ಮದೇ ಕಿಯೋನಿಕ್ಸ್ ಅಥವಾ ಇ-ಆಡಳಿತ ಇಲಾಖೆಯಿಂದ ಇ-ವಿಧಾನ ತಂತ್ರಾಂಶ ಅಭಿವೃದ್ಧಿಪಡಿಸಲು ಮುಂದಾಗಿದೆ.

ಆದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಸದ್ಯ ಆರ್ಥಿಕ ಇಲಾಖೆ ಯೋಜನೆ ಜಾರಿಗೆ ಬೇಕಾಗಿರುವ ಅಂದಾಜು 69 ಕೋಟಿ ರೂ.ಗೆ ಅನುಮೋದನೆ ನೀಡುವುದು ಅಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ