ಮೈತ್ರಿ ಮೂಲಕ ಸರ್ಕಾರ ರಚನೆಗೆ ಪಿಡಿಪಿ ಹಾಗೂ ನ್ಯಾಷನಲ್ ಕಾನ್ಫರೆಸ್ ಪಕ್ಷಕ್ಕೆ ಪಾಕ್ ನಿಂದ ನಿರ್ದೇಶನ: ಬಿಜೆಪಿ ಆರೋಪ

ಶ್ರೀನಗರ: ಪಿಡಿಪಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪರಸ್ಪರ ಮೈತ್ರಿ ಮೂಲಕ ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚಿಸುವಂತೆ ಪಾಕಿಸ್ತಾನದಿಂದ ಸೂಚನೆ ಬಂದಿದ್ದು, ಈ ಹಿನ್ನಲೆಯಲ್ಲಿ ಪರಸ್ಪರ ಬದ್ಧ ವೈರಿಗಳಾಗಿದ್ದ ಎರಡು ಪಕ್ಷಗಳು ಸರ್ಕಾರ ರಚನೆಗೆ ಮುಂದಾಗಿದ್ದವು ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಮ್ ಮಾಧವ್ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ರಾಮ್ ಮಾಧವ್, ಮೈತ್ರಿ ಸರ್ಕಾರ ರಚನೆ ಮಾಡುವಂತೆ ಪಾಕಿಸ್ತಾನದಿಂದ ನಿರ್ದೇಶನ ಬಂದಿದ್ದರಿಂದಲೇ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಕೈ ಜೋಡಿಸಿ ಸರ್ಕಾರ ರಚನೆಗೆ ಮುಂದಾಗಿದ್ದವು ಎಂದು ಹೇಳಿದ್ದಾರೆ.

ಅಲ್ಲದೆ ಈ ಹಿಂದೆ ಇದೇ ಪಿಡಿಪಿ ಮತ್ತು ಎನ್ ಸಿ ಪಕ್ಷಗಳು ಪಾಕಿಸ್ತಾನದ ನಿರ್ದೇಶನದಂತೆಯೇ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಬಹಿಷ್ಕರಿಸಿದ್ದವು. ಈ ಹಿಂದೆ ಬಂದ ನಿರ್ದೇಶನದಂತೆ ಈಗಲೂ ಈ ಪಕ್ಷಗಳಿಗೆ ಪಾಕಿಸ್ತಾನದಿಂದ ನಿರ್ದೇಶನ ಬಂದಿರಬೇಕು ಎಂದು ಆರೋಪ ಮಾಡಿದ್ದಾರೆ.

ಅಪವಿತ್ರ ಮೈತ್ರಿ ಮೂಲಕ ಸರಕಾರ ರಚಿಸುವುದಕ್ಕೆ ಅವಕಾಶ ನೀಡಬಾರದೆಂದು ರಾಜ್ಯಪಾಲರು ಕ್ರಮ ಕೈಗೊಂಡಿದ್ದಾರೆ. ಕಾಶ್ಮೀರ ವಿಧಾನಸಭೆ ವಿಸರ್ಜನೆ ಮಾಡಿರುವ ರಾಜ್ಯಪಾಲರ ಕ್ರಮ ಸಮರ್ಥನೀಯವಾಗಿದೆ ಎಂದು ರಾಮ್ ಮಾಧವ್ ತಿಳಿಸಿದ್ದಾರೆ.

ಈ ನಡುವೆ ಕಾಶ್ಮೀರ ವಿಧಾನಸಭೆಯನ್ನು ವಿಸರ್ಜಿಸಿದ ರಾಜ್ಯಪಾಲ ನಿರ್ಧಾರಕ್ಕೆ ಅಚ್ಚರಿ ವ್ಯಕ್ತಪಿಡಿಸಿರುವ ಪಿಡಿಪಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು, ನಿರ್ಧಾರದ ಹಿಂದೆ ಷಡ್ಯಂತ್ರವಡಗಿದ್ದು, ಉದ್ದೇಶ ಪೂರ್ವಕವಾಗಿಯೇ ರಾಜಭವನದ ಫ್ಯಾಕ್ಸ್ ಯಂತ್ರ ಕೆಲಸ ಮಾಡದಂತೆ ಮಾಡಿ ಮುಫ್ತಿ ಮೆಹಬೂಬಾ ಅವರ ಫ್ಯಾಕ್ಸ್ ರಾಜ್ಯಪಾಲರಿಗೆ ತಲುಪದಂತೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.

Instructions From Pak,jammu-kashmir,BJP,Ram Madhav

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ