ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬೇಕು: ರಾಜ್ಯದ ಮಠಾಧೀಶರು ಒಕ್ಕೋರಲ ನಿರ್ಣಯ, ಹೈಕಮಾಂಡ್‍ಗೆ ರವಾನೆ

ಬೆಂಗಳೂರು,ಜು.25- ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸಬೇಕೆಂದು ಒಕ್ಕೋರಲ ನಿರ್ಣಯವನ್ನು ರಾಜ್ಯದ ಮಠಾಧೀಶರು ಹೈಕಮಾಂಡ್‍ಗೆ ರವಾನಿಸಿದರು.

ಅರಮನೆ ಮೈದಾನದಲ್ಲಿ ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು, ಬಾಳೆಹೊಸೂರು ದಿಂಗಾಲೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ತಿಪಟೂರು ಷಡಕ್ಷರಿ ಮಠದ ಶ್ರೀ ರುದ್ರಮುನಿ ಮಹಾಸ್ವಾಮೀಜಿ, ಧಾರವಾಡ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಬೆಂಗಳೂರಿನ ಸರ್ಪಭೂಷಣ ಮಠದ ಶ್ರೀ ಮಲ್ಲಿಕಾರ್ಜುನ ದೇವರು ಸೇರಿದಂತೆ ನೂರಾರು ಮಠಗಳ ಪೀಠಾಧ್ಯಕ್ಷರು ಇಂದು ಅರಮನೆ ಮೈದಾನದಲ್ಲಿ ದುಂಡು ಮೇಜಿನ ಪರಿಷತ್ ನಡೆಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದು. ಸಮರ್ಥ , ದಕ್ಷತೆ ಹಾಗೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಅವರಿಗೆ ಅವಧಿ ಪೂರ್ಣಗೊಳಿಸುವವರೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.

ಇದು ಮಠಾಧೀಶರ ಶಕ್ತಿಪ್ರದರ್ಶನವಲ್ಲ. ಜಾತಿ ಸಮಾವೇಶವಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಮಕ್ಕಳು ಆಯೋಜಿಸಿರುವ ಕಾರ್ಯಕ್ರಮವಲ್ಲ. ಸ್ವಯಂ ಮಠಾಧೀಶರು ವೈಯಕ್ತಿಕವಾಗಿ ಕೈಗೊಂಡ ನಿಲುವು ಇದಾಗಿದೆ.

ರಾಜ್ಯದ ಎಲ್ಲಾ ಮಠಾಧೀಶರು ಸೇರಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಇಲ್ಲಿ ರಾಜಕಾರಣಿಗಳಿಗೆ ಅವಕಾಶವಿಲ್ಲ. ಮಠಾಧೀಶರು ಕಾಲಕಾಲದಲ್ಲಿ ಕೈಗೊಂಡಿರುವ ಕ್ರಮ, ನೀಡಿದ ಸಲಹೆಗಳನ್ನು ಉಲ್ಲೇಖಿಸುತ್ತಿದ್ದೇವೆ. ಇದರಲ್ಲಿ ಯಾವುದೇ ಸ್ವಾರ್ಥ ಇಲ್ಲ ಎಂದು ಮಠಾಧೀಶರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಬಾಳೆಹೊಸೂರು ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಸ್ವಪಕ್ಷದವರಿಂದ ಹಾಗೂ ಜಾತಿ ವಾದಿಗಳಿಂದ ಯಡಿಯೂರಪ್ಪನವರ ವಿರುದ್ಧ ಕುತಂತ್ರ ನಡೆಯುತ್ತಿದೆ. ಅಂಥವರ ವಿರುದ್ಧ ಹೈಕಮಾಂಡ್ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕುತಂತ್ರಿಗಳನ್ನು ಹೈಕಮಾಂಡ್ ನಿಯಂತ್ರಿಸಬೇಕಿತ್ತು. ಆ ಕ್ರಮ ವಹಿಸದ ಕಾರಣ ಮಠಾಧೀಶರಾದ ನಾವು ಮುಂದೆ ಬರಬೇಕಾಯಿತು ಎಂದು ಹೇಳಿದರು.

ನಿರಪರಾಧಿಗಳಿಗೆ ಯಾವುದೇ ರೀತಿ ತೊಂದರೆಯಾಗಬಾರದು. ಸ್ವಪಕ್ಷದವರ, ಜಾತಿವಾದಿಗಳ ಕುತಂತ್ರಕ್ಕೆ ಬಲಿಯಾಗಬಾರದು. ಈ ನಿಟ್ಟಿನಲ್ಲಿ ಹೈಕಮಾಂಡ್ ಚಿಂತನೆ ನಡೆಸಬೇಕು ಎಂದರು.

ಮಠಾಧೀಶರು ರಾಜಕಾರಣದಲ್ಲಿ ಮೂಗು ತೂರಿಸಬಾರದು ಎಂದು ಹಲವರು ಹೇಳುತ್ತಾರೆ. ನಾವು ಆ ಕೆಲಸ ಮಾಡುತ್ತಿಲ್ಲ. ಮೈಸೂರು ಮಹಾರಾಜರ ಕಾಲದಿಂದಲೂ ಹಿಡಿದು ಸ್ವಾತಂತ್ರ ಪೂರ್ವ ಹಾಗೂ ಸ್ವಾತಂತ್ರ್ಯ ನಂತರದ ಕಾಲದಲ್ಲೂ ಮಠಮಾನ್ಯಗಳು ಉತ್ತಮ ಕೆಲಸ ಮಾಡುತ್ತಿವೆ.

ತಪ್ಪು ಮಾಡಿದಾಗ, ಅನ್ಯಾಯವಾದಾಗ ನಾವು ಜಾಗೃತಿ ಮೂಡಿಸಬೇಕಾಗಿದೆ. ಇದರಲ್ಲಿ ಯಾವುದೇ ಸ್ವಾರ್ಥ ಇಲ್ಲ ಎಂದು ಅವರು ಹೇಳಿದರು.

ನಾವು ಯಾವುದೇ ಪಕ್ಷದ ಪರವಾಗಿ ಇಲ್ಲ. ರಾಜಕೀಯ ಪಕ್ಷಗಳು ಹುಟ್ಟುವ ಪೂರ್ವದಲ್ಲೇ ಮಠಮಾನ್ಯಗಳು ಹುಟ್ಟಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿವೆ. ಅದರ ಪರಂಪರೆ ಮುಂದುವರೆದಿದೆ.

ಬಿ.ಎಸ್.ಯಡಿಯೂರಪ್ಪನವರು ಮಠಮಾನ್ಯಗಳಿಗೆ ಹೆಚ್ಚು ಅನುದಾನ ನೀಡಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ.

ಅನಾವಶ್ಯಕವಾಗಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು ಸೂಕ್ತವಲ್ಲ ಎಂಬ ಒಕ್ಕೋರಲ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇವೆ ಎಂದು ಹೇಳಿದರು.

ಮುರುಘಾ ಮಠದ ಶ್ರೀ ಮುರುಘಾ ಶರಣರು, ಶ್ರೀ ರುದ್ರಮುನಿ ಶ್ರೀಗಳು ಮಾತನಾಡಿ, ಯಡಿಯೂರಪ್ಪನವರಿಗೆ ಬೆಂಬಲ ವ್ಯಕ್ತಪಡಿಸಿದರು.

ಕೊರೊನಾ ಮೂರನೇ ಅಲೆಯ ಬಗ್ಗೆ ಜಾಗೃತಿ ಮೂಡಿಸುವುದು, ಸಂಕಷ್ಟದ ಸಮಯದಲ್ಲಿ ತಂದೆತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಆಶ್ರಯ ನೀಡುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ದುಂಡು ಮೇಜಿನ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಶಿರಸಿ ಬಣ್ಣದಮಠದ ಶ್ರೀ ಶಿವಲಿಂಗಸ್ವಾಮೀಜಿ, ಪುಷ್ಪಗಿರಿ ಮಹಾಸಂಸ್ಥಾನದ ಶ್ರೀ ಸೋಮಶೇಖರ ಸ್ವಾಮೀಜಿ, ಶಿವಗಂಗೆ ಮೇಲನಗವಿಮಠದ ಶ್ರೀ ಮಲಯ ಶಾಂತಮುನಿ ಶಿವಾಚಾರ್ಯರು, ನುಲಿಯ ಚಂದಯ್ಯ ಪೀಠದ ಶ್ರೀ ಋಷಬೇಂದ್ರ ಸ್ವಾಮೀಜಿ, ಶಿವಗಂಗೆ ಶ್ರೀ ಜ್ಞಾನಾನಂದಪುರಿ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ