ಗದಗ:ಮೇ-5: ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಗದಗಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದೇ ಮೊದಲ ಬಾರಿಗೆ ಮಹದಾಯಿ ವಿಚಾರ ಪ್ರಸ್ತಾಪಿಸಿದ್ದು ವಿಶೇಷ. ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
2007ರಲ್ಲಿ ಮೆಡಂ ಸೋನಿಯಾ ಅವರು ಏನ್ ಹೇಳಿದ್ರೂ ಎಂಬುದು ನಿಮಗೆ ಬಹುಶ ಗೊತ್ತಿರಲಿಕ್ಕಿಲ್ಲ. ಯಾಕಂದರೆ ಆ ಸಮಯದಲ್ಲಿ ನೀವೂ ಪಕ್ಷದಲ್ಲಿ ಇರಲಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಕರ್ನಾಟಕಕ್ಕೆ ಮಹದಾಯಿ ಒಂದು ಹನಿ ನೀರು ಸಿಗದಂತೆ ಮಾಡುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಅವತ್ತು ಸೋನಿಯಾ ಗಾಂಧಿ ಹೇಳಿದ್ದರು ಎಂದು ಗುಡುಗಿದರು.
ಗೋವಾದಲ್ಲಿ ಚುನಾವಣೆ ಸೋತ ನಂತರ, ಕಾಂಗ್ರೆಸ್ ಮಹದಾಯಿ ವಿಷಯದಲ್ಲಿ ಕರ್ನಾಟಕದ ಜನತೆಯ ಮುಂದೆ ನಾಟಕವಾಡುತ್ತಿದೆ. ಆದ ಕಾರಣ ಇಲ್ಲೂ ಕೂಡ ಕಾಂಗ್ರೆಸ್ ಸೋತು ಹೋಗಲಿದೆ. ಮಹದಾಯಿ ವಿಚಾರವನ್ನು ನಾವು ಮಾತುಕತೆ ಮುಖಾಂತರ ಪರಿಹರಿಸಲು ಬದ್ಧರಾಗಿದ್ದೇವೆ ಎಂದರು.
ಮುಖ್ಯಮಂತ್ರಿಗಳೇ, ಇಲ್ಲಿನ ರೈತರನ್ನು ಹಾದಿತಪ್ಪಿಸುವ ಬದಲು ಮಹದಾಯಿ ವಿಚಾರವಾಗಿ ನಿಮ್ಮ ನಿಲುವೇನು ಎಂಬುದನ್ನು ಸೋನಿಯಾ ಗಾಂಧಿಯವರ ಜತೆ ಮಾತನಾಡಿ ಸ್ಪಷ್ಟಪಡಿಸಿ. ಕರ್ನಾಟಕದ ರೈತರ, ಯುವಕರ ಹಾದಿತಪ್ಪಿಸಬೇಡಿ ಎಂದು ಮೋದಿ ಹೇಳಿದರು.
ಎರಡು ರಾಜ್ಯಗಳ ಮಧ್ಯೆ ಮಹದಾಯಿ ಗೊಂದಲ ಉದ್ಭವವಾಗಲು ಕಾರಣವಾಗಿದ್ದು ಕಾಂಗ್ರೆಸ್ ಪಕ್ಷದ ನಿರ್ಧಾರ. 2007ರಲ್ಲಿ ಗೋವಾ ಜನರ ಮನವೊಲಿಸುವ ಉದ್ದೇಶದಿಂದ ಸೋನಿಯಾ ಗಾಂಧಿ ಕರ್ನಾಟಕದ ಜನರಿಗೆ ಮೋಸ ಮಾಡಿದರು ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಸಮೃದ್ಧ ಕೆರೆಗಳು ನೀರಿಲ್ಲದ್ದೆ ಬರಿದಾಗಿವೆ. ನೀರಿಗಾಗಿ ಹಾಹಾಕಾರ ಸ್ಥಿತಿ ನಿರ್ಮಾಣವಾಗಿದೆ. ಕೆರೆಗಳ ಪುನಶ್ಚೇತನಕ್ಕೆ ಕಾಂಗ್ರೆಸ್ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ. ಕೆರೆಗಳು ಬರಿದಾಗಿ ಒಣಗುವುದನ್ನೇ ಕಾಯುತ್ತಿದ್ದಾರೆ. ಬಿಲ್ಡರ್ ಗಳಿಗೆ ಮಾರಾಟ ಮಾಡಲು ಹೊರಟ್ಟಿದ್ದಾರೆ. ಕಾಂಗ್ರೆಸ್ಸಿಗರು ಸುಳ್ಳು ಹೇಳಿ, ಜನರ ಕಣ್ಣಿಗೆ ಮಣ್ಣೆರಚುವುದರಲ್ಲಿ ನಿಸ್ಸೀಮರು. ಕಾಂಗ್ರೆಸ್ ಅಧಿಕಾರಕ್ಕಾಗಿ ಜನರನ್ನು ಮರುಳು ಮಾಡುತ್ತಿದೆ ಎಂದು ಪ್ರಧಾನಿ ಆರೋಪಿಸಿದರು.
karnataka assembly election,PM Modi,Gadag