ಲೋಕಸಭಾ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಸಂಕಲ್ಪ ಪತ್ರ ಹೆಸರಿನ ಚುನಾವಣಾ ಪ್ರಣಾಳಿಕೆ-2019ನ್ನು ಬಿಡುಗಡೆಮಾಡಿದೆ.

ನವದೆಹಲಿಯ ಬಿಜೆಪಿ ಕೇಂದ್ರ ಕಛೇರಿಯಲ್ಲಿ 35 ಪುಟಗಳ 75 ಭರವಸೆಗಳೊಂದಿಗಿನ ಸಂಕಲ್ಪ ಪತ್ರ ಹೆಸರಿನ ಬಹುನಿರೀಕ್ಷಿತ ಚುನಾವಣಾ ಪ್ರಣಾಳಿಕೆಯನ್ನು ಗೃಹ ಸಚಿವ ರಾಜನಾಥ್ ಸಿಂಗ್ ಬಿಡುಗಡೆಮಾಡಿದರು. ಪ್ರಣಾಳಿಕೆಯನ್ನು 12 ಭಾಗಗಳಾಗಿ ವಿಂಗಡಿಸಲಾಗಿದ್ದು ಸಂಕಲ್ಪದ ಭಾರತ, ಸಶಕ್ತ ಭಾರತ ಅದರ ಧ್ಯೇಯವಾಕ್ಯವಾಗಿದೆ.

ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ರಾಜನಾಥ್ ಸಿಂಗ್, ಬಿಜೆಪಿ ಸಂಕಲ್ಪ ಪತ್ರದಲ್ಲಿ ನೀಡಿರುವ ಎಲ್ಲಾ ಭರವಸೆಗಳು ಮತ್ತು ಆಶೋತ್ತರಗಳೊಂದಿಗೆ ನಾವು ನವ ಭಾರತದ ನಿರ್ಮಾಣಕ್ಕಾಗಿ ಮುಂದಿನ ಹೆಜ್ಜೆ ಇಡುತ್ತೇವೆ. ಪ್ರಸ್ತುತ, ಭಾರತ ವಿಶ್ವದಲ್ಲಿ ಆರ್ಥಿಕತೆಯಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ ಬದಲಾಗಿದ್ದು ನಮಗೆಲ್ಲ ಹೆಮ್ಮೆಯ ವಿಷಯ, ಈ ನಿಟ್ಟಿನಲ್ಲಿ ವಿಶ್ವದಲ್ಲಿ ಆರ್ಥಿಕವಾಗಿ ಪ್ರಬಲ ಹೊಂದುತ್ತಿರುವ ಮೊದಲ ಮೂರು ದೇಶಗಳ ಸಾಲಿನಲ್ಲಿ ಭಾರತ ಸ್ಥಾನ ಪಡೆಯಬೇಕೆಂಬುದು ನಮ್ಮ ಗುರಿಯಾಗಿದೆ ಎಂದರು.

ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಸಚಿವರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಣಾಳಿಕೆಯ ಪ್ರಮುಖ ಅಂಶಗಳು:
* ಮುಂದಿನ 5 ವರ್ಷದಲ್ಲಿ ದೇಶದ ಸಮಗ್ರ ಅಭಿವೃದ್ಧಿ ಸಂಕಲ್ಪದೊಂದಿಗೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗಾಗಿ 25 ಲಕ್ಷ ಕೋಟಿ ರೂ. ಮೀಸಲು
* ಕಿಸಾನ್ ಸಮ್ಮಾನ್ ಯೋಜನೆಯನ್ನು ವಿಸ್ತರಣೆ
* ಉಗ್ರವಾದದ ವಿರುದ್ಧ ನಮ್ಮದು ‘ಝೀರೋ ಟಾಲರೆನ್ಸ್’ .
* ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ
* ಆದಷ್ಟು ಬೇಗ ರಾಮಮಂದಿರ ನಿರ್ಮಾಣ ಮಾಡುತ್ತೇವೆ
* ಸಣ್ಣ ರೈತರಿಗೆ ಪೆನ್ಶನ್ ಸ್ಕೀಂ ಜಾರಿಗೆ ತರುತ್ತೇವೆ
* 60 ವರ್ಷ ಪೂರೈಸಿದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪಿಂಚಣಿ ಸೌಲಭ್ಯ
* ಶೂನ್ಯ ಬಡ್ಡಿದರದಲ್ಲಿ ಸೂಕ್ತ ಕಾಲಕ್ಕೆ ಮರುಪಾವತಿ ಮಾಡುವ ಷರತ್ತಿನ ಮೇಲೆ 1 ಲಕ್ಷದವರೆಗೆ ಅಲ್ಪಾವಧಿಯ ಹೊಸ ಕೃಷಿ ಸಾಲ.
* ರೈತರಿಗೆ ಬಡ್ಡಿ ರಹಿತ ಕಿಸಾನ್ ಕ್ರೆಡಿಟ್ ಕಾರ್ಡ್ ಭರವಸೆ
* ಮೂಲಸೌಕರ್ಯ ಅಭಿವೃದ್ಧಿಗೆ 100 ಲಕ್ಷ ಕೋಟಿ ಮೀಸಲು
* ಸಂವಿಧಾನದ 35ಎ ವಿಧಿ ರದ್ದು
* ಜಮ್ಮು-ಕಾಶ್ಮೀರದಲ್ಲಿನ ಆರ್ಟಿಕಲ್ 370 ರದ್ದು
* 2022ರ ವೇಳೆಗೆ ರೈತರ ಆದಾಯ ದ್ವಿಗುಣ ಭರವಸೆ
* ಸರ್ವರಿಗೂ ಶಿಕ್ಷಣದ ಆದ್ಯತೆ
* ರೈತರಿಗೆ ಬಡ್ಡಿರಹಿತ ಕೃಷಿ ಸಾಲದ ಭರವಸೆ
* ಅಕ್ರಮ ವಲಸಿಗರ ಮೇಲೆ ಕಠಿಣ ಕ್ರಮ
* ಕಾಶ್ಮೀರಿ ಪಂಡಿತರಿಗೆ ಮರಳಿ ನೆಲೆಯೊದಗಿಸಲು ಪಣ
* ಎಲ್ಲರಿಗೂ ಶುದ್ಧ ಕುಡಿಯೋ ನೀರು ಪೂರೈಸುವ ಭರವಸೆ
* ಸ್ವಚ್ಛ ಭಾರತ್ ಮಿಷನ್​ನಡಿ ಕಸ ವಿಲೇವಾರಿಗೆ ಕ್ರಮ
* 75 ಮೆಡಿಕಲ್, ಪೋಸ್ಟ್ ಮೆಡಿಕಲ್ ಸ್ಥಾಪನೆಗೆ ಕ್ರಮ
* ಅಪೌಷ್ಟಿಕತೆ ತೊಲಗಿಸಲು ಕ್ರಮ ಕೈಗೊಳ್ಳುತ್ತೇವೆ
* ಆಧುನಿಕ ಉಪಕರಣಗಳನ್ನು ನೀಡುವ ಮೂಲಕ ಭಾರತೀಯ ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸುವುದು ಸೇರಿದಂತೆ ವಿವಿಧ ಭರವಸೆಗಳನ್ನು ನೀಡಲಾಗಿದೆ.
* ದೇಶದ ಎಲ್ಲ ಬಡವರಿಗೂ ಎಲ್​ಪಿಜಿ ಪೂರೈಕೆ ಆಶ್ವಾಸನೆ
* 75 ಪಿಜಿ ಕಾಲೇಜುಗಳ ನಿರ್ಮಾಣದ ಭರವಸೆ
* 60 ವರ್ಷ ಮೇಲ್ಪಟ್ಟ ರೈತರಿಗೆ ಪೆನ್ಶನ್ ಸ್ಕೀಮ್
* ಬಾಕಿ ಇರುವ ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸುತ್ತೇವೆ
* ರೈಲ್ವೆ ಟ್ರ್ಯಾಕ್​​ ವಿದ್ಯುದ್ದೀಕರಣಕ್ಕೆ ಕ್ರಮ ಕೈಗೊಳ್ಳುತ್ತೇವೆ
* ಸ್ವಚ್ಛ ಗಂಗಾ ಮಿಷನ್-2022ರೊಳಗೆ ಪೂರ್ಣಗೊಳಿಸುತ್ತೇವೆ

Lok Sabha elections 2019,BJP, Manifesto

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ