ಹೊಸದಿಲ್ಲಿ: ಕಾವೇರಿ ನದಿ ಪಾತ್ರದ ಕೆಳದಂಡೆಯ ರಾಜ್ಯಗಳ(ತಮಿಳುನಾಡು, ಪುದುಚ್ಚೇರಿ) ಅನುಮತಿ ಇಲ್ಲದೆ ಮೇಕೆದಾಟು ಯೋಜನೆಯನ್ನು ಕರ್ನಾಟಕ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಇದರಿಂದ ಬೆಂಗಳೂರು ಮತ್ತು ರಾಮನಗರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಗೆ ಸಂಕಷ್ಟ ಉಂಟಾಗಿದೆ.
ಲೋಕಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ವೇಳೆಯಲ್ಲಿ ಮೇಕೆದಾಟು ಯೋಜನೆ ಕುರಿತು ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಈ ವಿಷಯವನ್ನು ಸ್ಪಷ್ಟಪಡಿಸಿದರು. ಅಲ್ಲದೆ ಕಾವೇರಿ ನೀರು ನಿರ್ವಹಣಾ ಪ್ರಾಕಾರವೇ (ಸಿಡಬ್ಲ್ಯೂಎಂಎ ) ಅಂತಿಮವಾಗಿ ಈ ಯೋಜನೆಗೆ ಒಪ್ಪಿಗೆ ನೀಡಬೇಕಿದೆ ಎಂದರು. ಕಾವೇರಿ ನೀರು ನಿರ್ವಹಣಾ ಕುರಿತು ಕರ್ನಾಟಕ ಸಲ್ಲಿಸಿರುವ ಸಮಗ್ರ ಯೋಜನಾ ವರದಿಗೂ(ಡಿಪಿಎಆರ್) ಪ್ರಾಧಿಕಾರದ ಒಪ್ಪಿಗೆ ಅಗತ್ಯ ಎಂದು ಶೆಖಾವತ್ ಈ ಸಂದರ್ಭದಲ್ಲಿ ಹೇಳಿದರು.
ಕರ್ನಾಟಕ ತನ್ನ ಪಾಲಿನ ಕಾವೇರಿ ನೀರನ್ನು ಕುಡಿಯುವ ಮತ್ತು ವಿದ್ಯುತ್ ಉತ್ಪಾದನೆಗೆ ಬಳಸಲು ಮೇಕೆದಾಟು ಯೋಜನೆ ಕೈಗೊಳ್ಳಲಿದೆ. ಇದರಿಂದ ಕಾವೇರಿ ನದಿ ನೀರು ಹಂಚಿಕೆ ಕುರಿತ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ನ ತೀರ್ಮಾನ ಉಲ್ಲಂಘನೆಯಾಗದು. ಅಲ್ಲದೆ, ಕಾವೇರಿ ನ್ಯಾಯಾೀಕರಣದಲ್ಲೂ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲು ತಮಿಳು ನಾಡಿನ ಅನುಮತಿಯ ಬಗ್ಗೆ ಉಲ್ಲೇಖಿಸಲಾಗಿಲ್ಲ . ಹೀಗಿರುವಾಗ ಕರ್ನಾಟಕವೇಕೆ ತಮಿಳುನಾಡಿನ ಸಮ್ಮತಿ ಪಡೆಯಬೇಕು ಎಂದು ಪ್ರಜ್ವಲ್ ರೇವಣ್ಣ ಕೇಂದ್ರದ ಗಮನಸೆಳೆದರು.
ಪ್ರಾಕಾರದ ಅನುಮತಿ ಕಡ್ಡಾಯ
ಅಂತರ್ ರಾಜ್ಯ ನದಿ ನೀರು ಹಂಚಿಕೆ ಕಾಯ್ದೆಯಲ್ಲಿರುವಂತೆ ಯಾವುದೇ ಯೋಜನೆ ಕೈಗೊಳ್ಳಲು ನದಿ ಪಾತ್ರದ ಜನರ ಅನುಮತಿ ಪಡೆಯುವುದು ಅಗತ್ಯ ಎಂದು ತಿಳಿಸಲಾಗಿದೆ. ಡಿಪಿಆರ್ ಸಲ್ಲಿಸುವಾಗಲೇ ಈ ನಿಬಂಧನೆಯನ್ನು ಸ್ಪಷ್ಟವಾಗಿ ತಿಳಿಸಲಾಗಿತ್ತು. ಅಲ್ಲದೆ, ಸಿಡಬ್ಲ್ಯೂಎಂಎಯಲ್ಲಿ ನಾಲ್ಕು ರಾಜ್ಯಗಳಿದ್ದು, ಇದರ ಅನುಮತಿ ಇಲ್ಲದೆ ಯೋಜನೆ ಕೈಗೊಳ್ಳಲು ನಿಯಮದ ಪ್ರಕಾರ ಸಾಧ್ಯವಿಲ್ಲ ಎಂದು ಶೆಖಾವತ್ ತಿಳಿಸಿದರು.
ಡಿಪಿಆರ್ಗೆ ಕೇಂದ್ರ ಸರ್ಕಾರದಿಂದ ತಾತ್ವಿಕ ಒಪ್ಪಿಗೆ ನೀಡಲಾಗಿದೆಯಾದರೂ, ಇದೇ ವೇಳೆ ಕಾವೇರಿ ನದಿ ಪಾತ್ರದ ರಾಜ್ಯಗಳ ಅನುಮತಿಯೂ ಅಗತ್ಯ. ಅಲ್ಲದೆ, ಡಿಪಿಆರ್ಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿಯನ್ನೂ ನೀಡಲಾಗಿಲ್ಲ ಎಂದು ಶೆಖಾವತ್ ಹೇಳಿದರು.
ಇದೇ ವೇಳೆ ಕರ್ನಾಟಕ ಅರ್ಜಿ ಸಲ್ಲಿಸಿ 6 ತಿಂಗಳೊಳಗೆ ಕೇಂದ್ರ ಅನುಮತಿ ನೀಡದಿದ್ದಲ್ಲಿ ಅದನ್ನೇ ತಾತ್ವಿಕ ಒಪ್ಪಿಗೆ ಎಂದು ಭಾವಿಸಬಹುದೇ ಎಂದು ಸಂಸದ ಪ್ರಜ್ವಲ್ ರೇವಣ್ಣ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕೇಂದ್ರ ಸಚಿವರು, ಒಂದೊಮ್ಮೆ ಯೋಜನೆಗೆ ಕೇಂದ್ರ ತಾತ್ವಿಕ ಅನುಮತಿ ದೊರೆತಿದೆ ಎಂದು ಕರ್ನಾಟಕ ಭಾವಿಸಿದರೂ ಅದನ್ನು ಸಿಡಬ್ಲ್ಯೂಎಂಎಯ ಗಮನಕ್ಕೆ ತಂದು ಪ್ರಾಕಾರದಿಂದಲೂ ಅನುಮತಿ ಪಡೆಯುವುದು ಕಡ್ಡಾಯ ಎಂದು ತಿಳಿಸಿದರು.
ಕರ್ನಾಟಕ ತನ್ನ ಪಾಲಿನ ಕಾವೇರಿ ನೀರನ್ನು ಕುಡಿಯುವ ಮತ್ತು ವಿದ್ಯುತ್ ಉತ್ಪಾದನೆಗೆ ಬಳಸಲು ಮೇಕೆದಾಟು ಯೋಜನೆ ಕೈಗೊಳ್ಳಲಿದೆ. ಇದರಿಂದ ಕಾವೇರಿ ನದಿ ನೀರು ಹಂಚಿಕೆ ಕುರಿತ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ನ ತೀರ್ಮಾನ ಉಲ್ಲಂಘನೆಯಾಗದು.
ಪ್ರಜ್ವಲ್ ರೇವಣ್ಣ, ಸಂಸದ
ಅಂತರ್ ರಾಜ್ಯ ನದಿ ನೀರು ಹಂಚಿಕೆ ಕಾಯ್ದೆಯಲ್ಲಿರುವಂತೆ ಯಾವುದೇ ಯೋಜನೆ ಕೈಗೊಳ್ಳಲು ನದಿ ಪಾತ್ರದ ಜನರ ಅನುಮತಿ ಪಡೆಯುವುದು ಅಗತ್ಯ ಎಂದು ತಿಳಿಸಲಾಗಿದೆ. ಡಿಪಿಆರ್ ಸಲ್ಲಿಸುವಾಗಲೇ ಈ ನಿಬಂಧನೆಯನ್ನು ಸ್ಪಷ್ಟವಾಗಿ ತಿಳಿಸಲಾಗಿತ್ತು.
ಗಜೇಂದ್ರ ಸಿಂಗ್ ಶೆಖಾವತ್, ಕೇಂದ್ರ ಜಲಶಕ್ತಿ ಸಚಿವ