ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಇದೀಗ ನೂತನ ಸಚಿವರಿಗೆ ಖಾತೆ ಹಂಚುವುದೇ ದೊಡ್ಡ ಸವಾಲು!

ಬೆಂಗಳೂರು,ಆ.5- ಸಾಕಷ್ಟು ಸರ್ಕಸ್ ನಡೆಸಿ ಅಳೆದು ತೂಗಿ ಸಚಿವ ಸಂಪುಟ ರಚನೆ ಮಾಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಇದೀಗ ನೂತನ ಸಚಿವರಿಗೆ ಖಾತೆ ಹಂಚುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಕೆಲವು ಸಚಿವರು ಪ್ರಭಾವಿ ಖಾತೆಗಳ ಮೇಲೆ ಕಣ್ಣಿಟ್ಟಿರುವುದು ಹಾಗೂ ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪನವರ ಸಂಪುಟದಲ್ಲಿ ಸಚಿವರಾಗಿದ್ದ ಕೆಲವರು ಅದೇ ಖಾತೆಯಲ್ಲೇ ಮುಂದುವರೆಸುವಂತೆ ಪಟ್ಟು ಹಿಡಿದಿರುವುದರಿಂದ ಸಿಎಂಗೆ ಖಾತೆ ಹಂಚಿಕೆಯೇ ಸವಾಲಾಗಿದೆ.

ಮುಖ್ಯಮಂತ್ರಿ ನಂತರ ಅತ್ಯಂತ ಮಹತ್ವದ ಖಾತೆ ಎನಿಸಿರುವ ಗೃಹ ಖಾತೆಯನ್ನು ನಿಭಾಯಿಸಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಹಿರಿಯ ಸಚಿವರಾದ ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ, ಮುರುಗೇಶ್ ನಿರಾಣಿ ಸೇರಿದಂತೆ ಮತ್ತಿತರರಿಗೆ ಗೃಹ ಖಾತೆಯನ್ನು ನೀಡುವುದಾಗಿ ಸ್ವತಃ ಸಿಎಂ ಅವರೇ ಹೇಳಿದ್ದಾರೆ.

ಆದರೆ ಸದಾ ಒಂದಿಲ್ಲೊಂದು ವಿವಾದಕ್ಕೆ ಸಿಲುಕಬೇಕಾದ ಕಾರಣಕ್ಕಾಗಿ ಗೃಹ ಖಾತೆ ಈಗ ಯಾರಿಗೂ ಬೇಡವಾದ ಒಲ್ಲದ ಕೂಸಾಗಿದೆ. ಮೂಲಗಳ ಪ್ರಕಾರ ಆರ್.ಅಶೋಕ್ ಈ ಹಿಂದೆ ಗೃಹ ಸಚಿವರಾಗಿ ಅನುಭವ ಇರುವ ಕಾರಣ ಕೊನೆ ಕ್ಷಣದಲ್ಲಿ ಅವರಿಗೆ ದಕ್ಕಬಹುದು. ಬೆಂಗಳೂರು ನಗರಾಭಿವೃದ್ಧಿ, ಉಸ್ತುವಾರಿಯನ್ನು ನೀಡುವ ಸಾಧ್ಯತೆ ಇದೆ.

ಗೃಹ ಖಾತೆ ನಂತರ ಅತ್ಯಂತ ಸಂಪನ್ಮೂಲ ಖಾತೆಗಳೆಂದೇ ಹೇಳಲಾಗುತ್ತಿರುವ ಇಂಧನ, ಲೋಕೋಪಯೋಗಿ, ಜಲಸಂಪನ್ಮೂಲ, ಸಾರಿಗೆ, ಕಂದಾಯ, ಬೆಂಗಳೂರು ನಗರಾಭಿವೃದ್ಧಿ ,ವಸತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾತ್‍ರಾಜ್ ಸೇರಿದಂತೆ ಕೆಲವು ಖಾತೆಗಳ ಮೇಲೆ ಪ್ರಭಾವಿ ಸಚಿವರು ಕಣ್ಣಿಟ್ಟಿದ್ದಾರೆ.

ಬಿಎಸ್‍ವೈ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಜೊತೆಗೆ ಲೋಕೋಪಯೋಗಿ ಸಚಿವರಾಗಿದ್ದ ಗೋವಿಂದ ಕಾರಜೋಳ ಪುನಃ ಅದೇ ಖಾತೆ ನೀಡುವಂತೆ ಸಿಎಂ ಬಳಿ ಮನವಿ ಮಾಡಿದ್ದಾರೆ.

ವಸತಿ ಸಚಿವರಾಗಿದ್ದ ಸೋಮಣ್ಣ ಅವರು ಕಂದಾಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾಗಿದ್ದ ಮುರುಗೇಶ್ ನಿರಾಣಿ ಇಂಧನ ಜೊತೆಗೆ ಬೃಹತ್ ನೀರಾವರಿ ಹಾಗೂ ಗ್ರಾಮೀಣ ಅಭಿವೃದ್ಧಿ ಪಂಚಾಯತ್‍ರಾಜ್ ಇಲಾಖೆ ಮೇಲೆ ಕಣ್ಣಿಟ್ಟಿದ್ದಾರೆ.

ಕೆ.ಎಸ್.ಈಶ್ವರಪ್ಪ ಅವರು ಬೃಹತ್ ನೀರಾವರಿ ಇಲಾಖೆ ಮೇಲೆ ಒಲವು ಹೊಂದಿದ್ದರೆ, ಅರಗ ಜ್ಞಾನೇಂದ್ರ ಕಂದಾಯ ಖಾತೆ ಕೇಳಿದ್ದಾರೆ ಎನ್ನಲಾಗುತ್ತಿದೆ.

ಸಹಕಾರ ಸಚಿವರಾಗಿದ್ದ ಎಸ್.ಟಿ.ಸೋಮಶೇಖರ್, ನಗರಾಭಿವೃದ್ಧಿ ಸಚಿವರಾಗಿದ್ದ ಭೆರತಿ ಬಸವರಾಜ್ ಬಹುತೇಕ ಅದೇ ಖಾತೆಯಲ್ಲಿ ಮುಂದುವರೆದರೆ ಈಗಾಗಲೇ ಪ್ರಭು ಚವ್ಹಾಣ್ ತಮಗೆ ಈಗಾಗಲೇ ಪಶು ಸಂಗೋಪನಾ ಖಾತೆಯನ್ನೇ ಕೇಳಿದ್ದಾರೆ.

ರಾಜ್ಯದಲ್ಲಿ ಮತ್ತೆ ಕೊರೊನಾ ಮೂರನೇ ಅಲೆ ಅಪ್ಪಳಿಸಬಹುದೆಂದು ತಜ್ಞರು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವ ಕಾರಣಕ್ಕಾಗಿಯೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯನ್ನು ಸುಧಾಕರ್‍ಗೆ, ಶ್ರೀರಾಮುಲುಗೆ ಸಮಾಜಕಲ್ಯಾಣ, ಮುಜರಾಯಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯನ್ನು ಕೋಟಾ ಶ್ರೀನಿವಾಸ್ ಪೂಜಾರಿಗೆ ನೀಡುವ ಸಂಭವವಿದೆ.

ಸಂಪುಟದಲ್ಲಿ ಏಕೈಕ ಮಹಿಳಾ ಸಚಿವರಾಗಿರುವ ಶಿಶಕಲಾ ಜೊಲ್ಲೆಗೆ ಪುನಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಿಗಲಿದೆ. ಉಳಿದಂತೆ ಉಮೇಶ್ ಕತ್ತಿಗೆ ಆಹಾರ ಮತ್ತು ನಾಗರಿಕ ಪೂರೈಕೆ, ಕೆ.ಗೋಪಾಲಯ್ಯ ಅವರಿಗೆ ಅಬಕಾರಿ, ಡಾ.ಅಶ್ವಥ್ ನಾರಾಯಣ ಅವರಿಗೆ ಉನ್ನತ ಶಿಕ್ಷಣ, ಐಟಿ-ಬಿಟಿ, ಜೆ.ಸಿ.ಮಾಧುಸ್ವಾಮಿಗೆ ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ, ಮೊದಲ ಬಾರಿಗೆ ಸಂಪುಟಕ್ಕೆ ಸೇರ್ಪಡೆಯಾಗಿರುವ ಬಿ.ಸಿ.ನಾಗೇಶ್ ಇಲ್ಲವೇ ವಿ.ಸುನೀಲ್‍ಕುಮಾರ್‍ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಿಗುವ ನಿರೀಕ್ಷೆಯಿದೆ.

ಯಾವುದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವ ಸಂಭವವಿದೆ.

ಸಚಿವರು-ಕ್ಷೇತ್ರ-ಸಂಭಾವ್ಯ ಖಾತೆ
1. ಬಸವರಾಜ ಬೊಮ್ಮಾಯಿ-ಮುಖ್ಯಮಂತ್ರಿ, ಹಣಕಾಸು, ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ, ಗುಪ್ತಚರ, ಇಂಧನ, ಬೃಹತ್ ನೀರಾವರಿ, ಸಣ್ಣ ನೀರಾವರಿ
2. ವಿ ಸೋಮಣ್ಣ- ವಸತಿ
3. ಶಂಕರ್ ಪಾಟೀಲ್ ಮುನೇನಕೊಪ್ಪ- ಮೂಲಭೂತ ಸೌಕರ್ಯ ಹಾಗೂ ಕಾರ್ಯಕ್ರಮಗಳ ಅನುಷ್ಠಾನ
4. ಜೆ.ಸಿ,ಮಾಧುಸ್ವಾಮಿ-ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ
5. ಮುರುಗೇಶ್ ನಿರಾಣಿ-ಬೃಹತ್ ಮತ್ತು ಮಧ್ಯಮ ಕೈಗಾರಿಕೆ
6. ಸಿ. ಸಿ ಪಾಟೀಲ- ವಾರ್ತಾ
7. ಬಿ.ಸಿ ಪಾಟೀಲ್-ಕೃಷಿ
8. ಉಮೇಶ್ ಕತ್ತಿ- ಆಹಾರ ಮತ್ತು ನಾಗರಿಕ ಪೂರೈಕೆ
9. ಶಶಿಕಲಾ ಜೊಲ್ಲೆ- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ
10. ಆರ್.ಅಶೋಕ-ಗೃಹ, ಬೆಂಗಳೂರುನಗರಾಭಿವೃದ್ಧಿ ಉಸ್ತುವಾರಿ
11. ಎಸ್.ಟಿ.ಸೋಮಶೇಖರ್-ಸಹಕಾರ
12. ಡಾ. ಸಿ. ಎನ್.ಅಶ್ವಥ ನಾರಾಯಣ- ಉನ್ನತ ಶಿಕ್ಷಣ, ಐಟಿ-ಬಿಟಿ
13. ಆರಗ ಜ್ಞಾನೇಂದ್ರ- ಅರಣ್ಯ
14. ಕೆ.ಗೋಪಾಲಯ್ಯ-ಅಬಕಾರಿ
15. ಡಾ. ಸುಧಾಕರ್-ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ
16. ಕೆ. ಸಿ.ನಾರಾಯಣ ಗೌಡ-ಕ್ರೀಡೆ, ಯುವಜನ, ಕೌಶಲ್ಯಾಭಿವೃದ್ಧಿ
17. ಬೈರತಿ ಬಸವರಾಜ್-ನಗರಾಭಿವೃದ್ಧಿ
18: ಕೆ.ಎಸ್.ಈಶ್ವರಪ್ಪ-ಗ್ರಾಮೀಣಾಭಿವೃದ್ಧಿ
19. ಗೋವಿಂದ ಕಾರಜೋಳ-ಲೋಕೋಪಯೋಗಿ
20. ಹಾಲಪ್ಪ ಆಚಾರ್- ತೋಟಗಾರಿಕೆ
21. ಆನಂದ್ ಸಿಂಗ್-ಪ್ರವಾಸೋದ್ಯಮ
22. ಕೋಟಾ ಶ್ರೀನಿವಾಸ ಪೂಜಾರಿ- ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ
23. ಪ್ರಭು ಚೌವಾಣ್- ಪಶು ಸಂಗೋಪನೆ
24.ಸುನಿಲ್‍ಕುಮಾರ್- ಪ್ರಾಥಮಿಕ ಶಿಕ್ಷಣ
25 ಬಿ. ಸಿ.ನಾಗೇಶ್- ಕನ್ನಡ ಮತ್ತು ಸಂಸ್ಕೃತಿ
26. ಎಸ್.ಅಂಗಾರ- ಬಂದರು ಮತ್ತು ಮೀನುಗಾರಿಕೆ
27. ಬಿ.ಶ್ರೀರಾಮುಲು- ಸಮಾಜ ಕಲ್ಯಾಣ
28. ಶಿವರಾಂ ಹೆಬ್ಬಾರ್- ಕಾರ್ಮಿಕ
29. ಎಂ. ಟಿ.ಬಿ.ನಾಗರಾಜ್-ಸಾರಿಗೆ
10. ಮುನಿರತ್ನ- ಪರಿಸರ ಮತ್ತು ಪ್ರವಾಸೋದ್ಯಮ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ