ಕಾಂಗ್ರೆಸ್ ಮುಖಂಡರಾದ ಎ.ಮಂಜು, ಕೆ.ಎನ್.ರಾಜಣ್ಣ, ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಬಿಜೆಪಿಯತ್ತ…?

ಬೆಂಗಳೂರು, ಜು.24-ಸಮ್ಮಿಶ್ರ ಸರ್ಕಾರದ ವಿರುದ್ಧ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವ ಕಾಂಗ್ರೆಸ್ ಮುಖಂಡರಾದ ಎ.ಮಂಜು, ಕೆ.ಎನ್.ರಾಜಣ್ಣ, ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಮುಂತಾದವರು ಬಿಜೆಪಿಯತ್ತ ಮುಖ ಮಾಡಿದ್ದಾರೆಯೇ…? ಅಂತಹ ಒಂದು ಅನುಮಾನ ರಾಜಕೀಯ ವಲಯದಲ್ಲಿ ಮೂಡತೊಡಗಿದೆ.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು, ಲೋಕಸಭೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂಬ ಹಿನ್ನೆಲೆಯಲ್ಲಿ ಜೆಡಿಎಸ್‍ನೊಂದಿಗೆ ಮೈತ್ರಿ ಸಾಧಿಸಿ ಸಮ್ಮಿಶ್ರ ಸರ್ಕಾರ ರಚನೆ ಮಾಡಲಾಗಿತ್ತು. ಆದರೆ ಸರ್ಕಾರದ ವಿರುದ್ಧ ಹಾಗೂ ಕಾಂಗ್ರೆಸ್ ಮುಖಂಡರ ವಿರುದ್ಧದ ಹೇಳಿಕೆಗಳನ್ನು ನೀಡಿ ಇರಿಸು-ಮುರಿಸು ಉಂಟು ಮಾಡುತ್ತಿರುವ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ, ತುಮಕೂರಿನ ಪ್ರಭಾವಿ ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ, ಹಾಸನದ ಕಾಂಗ್ರೆಸ್ ಮುಖಂಡ ಎ.ಮಂಜು ಬಿಜೆಪಿಯತ್ತ ತಮ್ಮ ಚಿತ್ತ ಹರಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ಈ ಮೂವರು ನಾಯಕರು ಪರ್ಯಾಯ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಅತೃಪ್ತಿ, ಅಸಮಾಧಾನದಿಂದ ಯಾವುದೇ ಹಿರಿಯ ನಾಯಕರು ಹೇಳಿಕೆ ನೀಡಿದರೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವುದು ಸಹಜ. ಅವರ ಮನವೊಲಿಸಬೇಕಾಗಿರುವುದು ನಾಯಕರ ಲಕ್ಷಣವಾಗಿರುತ್ತದೆ. ಆದರೆ ಯಾವುದೇ ರೀತಿಯ ಪ್ರಯತ್ನಗಳನ್ನು ಮಾಡದೆ, ಏಕಾಏಕಿ ನೋಟೀಸ್ ನೀಡಿರುವುದನ್ನು ಗಮನಿಸಿದರೆ ಅಸಮಾಧಾನಗೊಂಡಿರುವವರನ್ನು ಮತ್ತಷ್ಟು ರೊಚ್ಚಿಗೇಳಿಸಿದಂತೆ ಕಂಡು ಬಂದಿದೆ.

ಹಾಸನದಲ್ಲಿ ಮಾಜಿ ಸಚಿವ ಎ.ಮಂಜು ಅವರು ಮೈತ್ರಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಮಂಡ್ಯವನ್ನು ಜೆಡಿಎಸ್‍ಗೆ ಬಿಟ್ಟುಕೊಡುವುದಾದರೆ, ಹಾಸನವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡಲಿ ಎಂದು ಹೇಳಿದ್ದಾರೆ.

ಕಳೆದ ಬಾರಿ ಸಚಿವರಾದಾಗಲೂ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಅಭ್ಯರ್ಥಿಯಾಗಿದ್ದರು. ಪ್ರಸ್ತುತ ಹಾಸನದಲ್ಲಿ ಬಿಜೆಪಿ ಪ್ರಭಾವಿ ನಾಯಕರಿಲ್ಲ. ಹಾಗಾಗಿ ಬಿಜೆಪಿ ಪಕ್ಷ ಇವರನ್ನು ತನ್ನತ್ತ ಸೆಳೆದು ಲೋಕಸಭೆ ಚುನಾವಣಾ ಕಣಕ್ಕಿಳಿಸುವ ತಂತ್ರ ಹೆಣೆದಿದೆ ಎಂದು ಹೇಳಲಾಗಿದ್ದು, ಈ ಸಂಬಂಧ ಅವರೊಂದಿಗೆ ಬಿಜೆಪಿ ನಾಯಕರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಹಾಸನ ಜೆಡಿಎಸ್ ಪಕ್ಷದ ಪ್ರಭಾವ ಹೊಂದಿರುವ ಕ್ಷೇತ್ರ. ಇಲ್ಲಿ ಎ.ಮಂಜು ಅವರಿಂದಲೇ ಕಾಂಗ್ರೆಸ್ ತನ್ನ ವರ್ಚಸ್ಸು ವೃದ್ಧಿಸಿಕೊಂಡಿದೆ. ಅವರು ಬಿಜೆಪಿಯತ್ತ ಮುಖ ಮಾಡಿದರೆ ಕಾಂಗ್ರೆಸ್ ಗೌಣವಾಗುತ್ತದೆ.
ತುಮಕೂರಿನಲ್ಲೂ ಕೆ.ಎನ್.ರಾಜಣ್ಣ ಪ್ರಭಾವಿ ನಾಯಕರಾಗಿದ್ದಾರೆ. ಮಾಜಿ ಸಂಸದರಾಗಿರುವ ಜಿ.ಎಸ್.ಬಸವರಾಜ್ ಅವರ ಮಗ ಶಾಸಕರಾಗಿರುವುದರಿಂದ ಈ ಕ್ಷೇತ್ರಕ್ಕೆ ಕೆ.ಎನ್.ರಾಜಣ್ಣ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಿದರೆ ಹೇಗೆ ಎಂಬ ಮಾತು ಕೇಳಿ ಬರುತ್ತಿದೆ. ಹಾಗಾಗಿ ಅವರೊಂದಿಗೆ ಬಿಜೆಪಿ ನಾಯಕರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ರಾಜಣ್ಣ ಅವರು ಬಿಜೆಪಿಯತ್ತ ಮುಖ ಮಾಡಿದರೆ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‍ಗೆ ತೀವ್ರ ನಷ್ಟವಾಗುತ್ತದೆ.
ನನ್ನ ಕಣಕಣದಲ್ಲೂ ಕಾಂಗ್ರೆಸ್ ಇದೆ, ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯುವುದಿಲ್ಲ. ನೋಟೀಸ್ ನೀಡಲಿ ಅದಕ್ಕೆ ನಾನು ಉತ್ತರ ನೀಡುತ್ತೇನೆ ಎಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಹೇಳಿದ್ದಾರೆ.
ಪ್ರಸ್ತುತ ಸನ್ನಿವೇಶದಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಬಿಜೆಪಿ ಸೇರಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರನ್ನು ಬಿಜೆಪಿಗೆ ಸೆಳೆಯಲು ಆ ಪಕ್ಷದ ಮುಖಂಡರು ಪ್ರಯತ್ನ ನಡೆಸಿದ್ದಾರೆ. ಈ ಪ್ರಯತ್ನ ಫಲಪ್ರದವಾದರೆ ಪ್ರಭಾವಿ ಲಿಂಗಾಯತ ಮುಖಂಡರೊಬ್ಬರು ಬಿಜೆಪಿ ತೆಕ್ಕೆಗೆ ಸೇರಿದಂತಾಗುತ್ತದೆ.
ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಸರ್ಕಾರ ರಚಿಸಲು ಚಾತಕ ಪಕ್ಷಿಯಂತೆ ಬಿಜೆಪಿ ಕಾಯುತ್ತಿರುವುದು ಒಂದೆಡೆಯಾದರೆ, ಅತೃಪ್ತ ನಾಯಕರು, ಮಾಜಿ ಶಾಸಕರು, ಸಚಿವರನ್ನು ಸೆಳೆದು ಲೋಕಸಭೆ ಚುನಾವಣೆಯಲ್ಲಿ ತನ್ನ ಬಲ ಹೆಚ್ಚಿಸಿಕೊಳ್ಳಲು ಬಿಜೆಪಿ ಮತ್ತೊಂದು ಕಾರ್ಯತಂತ್ರ ಹೆಣೆಯುತ್ತಿದೆ. ಈ ಮೂವರಲ್ಲದೆ ಇನ್ನೂ ಅನೇಕ ನಾಯಕರನ್ನು ತನ್ನ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ಮುಂದುವರೆಸಿದೆ ಎಂದು ತಿಳಿದುಬಂದಿದೆ.

Congress leaders A Manju, KN Rajanna, former speaker KB Koliwada,BJP

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ