ಬೆಂಗಳೂರು, ಆ.3- ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕನ್ನು ತಹಬದಿಗೆ ತರಲು ಇನ್ನಿಲ್ಲದ ಹರಸಾಹಸ ಪಡುತ್ತಿರುವ ಬಿಬಿಎಂಪಿ ಇಂದಿನಿಂದ ಟೈಟ್ ನೈಟ್ ಕಫ್ರ್ಯೂ ಜಾರಿಗೆ ಮುಂದಾಗಿದೆ.
ಇಲ್ಲಿಯವರೆಗೆ ನೈಟ್ ಕಫ್ರ್ಯೂ ಜಾರಿಯಲ್ಲಿದ್ದರೂ ಯಾರೂ ಪಾಲನೆ ಮಾಡುತ್ತಿರಲಿಲ್ಲ. ಪೊಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿಗಳೂ ತಲೆಕೆಡಿಸಿಕೊಂಡಿರಲಿಲ್ಲ.
ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಸೋಂಕು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ನಗರದಲ್ಲೂ ಕಳೆದ ಕೆಲವು ದಿನಗಳಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಇಂದಿನಿಂದಲೇ ಟೈಟ್ ನೈಟ್ ಕಫ್ರ್ಯೂ ಜಾರಿಗೆ ತೀರ್ಮಾನಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ನೈಟ್ ಕಫ್ರ್ಯೂ ಜಾರಿಯಲ್ಲಿರಲಿದೆ. ಕಫ್ರ್ಯೂ ಉಲ್ಲಂಘಿಸಿ ಓಡಾಡುವವರ ವಿರುದ್ಧ ದಂಡ ಪ್ರಯೋಗಿಸಲು ಬಿಬಿಎಂಪಿ ಹಾಗೂ ಪೊಲೀಸರು ಸಜ್ಜಾಗಿದ್ದಾರೆ.
ವಿನಾಕಾರಣ ರಾತ್ರಿ ವೇಳೆ ಓಡಾಡುವವರ ಮೇಲೆ ಬಲಪ್ರಯೋಗ ಮಾಡುವುದಲ್ಲದೆ ಬೇಕಾಬಿಟ್ಟಿ ಓಡಾಡುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ.
ನೈಟ್ ಕಫ್ರ್ಯೂ ಕಟ್ಟುನಿಟ್ಟಿನ ಜಾರಿಗೆ ಪೊಲೀಸರು ಮತ್ತು ಮಾರ್ಷಲ್ಗಳು ರಾತ್ರಿ ವೇಳೆ ರೋಡಿಗಿಳಿಯಲಿರುವುದರಿಂದ ಕಫ್ರ್ಯೂ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡಿದರೆ ಭಾರೀ ತೊಂದರೆ ಎದುರಿಸಬೇಕಾಗುತ್ತದೆ.
ವಿನಾಯಿತಿ: ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳು, ಅಗತ್ಯ ವಸ್ತುಗಳ ಸರಬರಾಜು, ವೈದ್ಯಕೀಯ ಸೇವೆಗಳ ವಾಹನಗಳಿಗೆ ರಿಯಾಯಿತಿ ನೀಡಲಾಗುವುದು.
ನೈಟ್ಶಿಫ್ಟ್ ಕೆಲಸ ಮಾಡುವ ಸಿಬ್ಬಂದಿಗಳು ತಮ್ಮ ಸಂಸ್ಥೆಯ ಐಡಿ ಕಾರ್ಡ್ ತೋರಿಸಿ ಓಡಾಡಲು ಅವಕಾಶ ಕಲ್ಪಿಸಲಾಗಿದೆ. ಇದರ ಜತೆಗೆ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವವರಿಗೆ ಅನುಮತಿ ನೀಡಲಾಗಿದೆ.
ನೈಟ್ ಕಫ್ರ್ಯೂ ಸಮಯದಲ್ಲಿ ಹೊರಗೆ ಹೋಗಬೇಕಾದರೆ ಸಂಬಂಧಪಟ್ಟ ಅಧಿಕಾರಿಗಳ ಪರ್ಮಿಷನ್ ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.