ಕೊರೊನಾ ಮೂರನೆ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಹೊರರಾಜ್ಯಗಳಿಂದ ಬರುವ ಪ್ರಯಾಣಿಕರ ಮೇಲೆ ಬಿಬಿಎಂಪಿ ತೀವ್ರ ನಿಗಾ

Coronavirus cells in an electron microscope. 3D illustration

ಬೆಂಗಳೂರು, ಆ.3- ಕೊರೊನಾ ಮೂರನೆ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಹೊರರಾಜ್ಯಗಳಿಂದ ಬರುವ ಪ್ರಯಾಣಿಕರ ಮೇಲೆ ಬಿಬಿಎಂಪಿ ತೀವ್ರ ನಿಗಾ ಇರಿಸಿದೆ.

ಹೊರರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಹೊಟೇಲ್‍ನಲ್ಲಿ ಕ್ವಾರಂಟೈನ್ ಮಾಡುವ ಸಂಬಂಧ ನಗರದ ವಿವಿಧ ಸ್ಥಳಗಳಲ್ಲಿ ಏಳು ಹೊಟೇಲ್‍ಗಳನ್ನು ಬಿಬಿಎಂಪಿ ಗುತ್ತಿಗೆ ಪಡೆದಿದೆ.

ಬೇರೆ ಬೇರೆ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಆರ್‍ಟಿಪಿಸಿಆರ್ ಟೆಸ್ಟ್ ಮಾಡಿಸಿ ಏಳು ದಿನಗಳ ಕಾಲ ಹೊಟೇಲ್‍ನಲ್ಲಿ ಕ್ವಾರಂಟೈನ್ ಮಾಡಲಾಗುವುದು.

ಸೋಂಕಿತರಿಗೆ ಹಾಗೂ ಟೆಸ್ಟ್ ಇಲ್ಲದೆ ಬಂದ ಪ್ರಯಾಣಿಕರಿಗೆ ಹೊಟೇಲ್‍ನಲ್ಲಿ ಉಚಿತ ಊಟ, ವಸತಿ ಮಾಡಲು ವ್ಯವಸ್ಥೆ ಮಾಡಲಾಗಿದೆ. ಮೆಜಸ್ಟಿಕ್, ಶಾಂತಿನಗರ, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ, ಕೆಆರ್ ಪುರಂ ರೈಲ್ವೆ ನಿಲ್ದಾಣ, ಏರ್‍ಪೆಪೋರ್ಟ್ ಸೇರಿದಂತೆ ವಿವಿಧ ಭಾಗಗಳಲ್ಲಿ ಕ್ವಾರಂಟೈನ್‍ಗೆ ಹೊಟೇಲ್‍ಗಳ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರಿನ 8 ವಾರ್ಡ್‍ಗಳು ಡೇಂಜರ್: ಬೆಂಗಳೂರಿನಲ್ಲಿ ಮೂರನೆ ಅಲೆ ಭೀತಿ ಎದುರಾಗಿದ್ದು, 8 ವಾರ್ಡ್‍ಗಳಲ್ಲಿ ಕೊರೊನಾ ಆತಂಕ ಎದುರಾಗಿದೆ.

ಹೊರಮಾವು, ಊಡಿ, ಕಾಡುಗೋಡಿ, ಹಗದೂರು, ಬೆಳ್ಳಂದೂರು, ಸಿಂಗಸಂದ್ರ, ಬೇಗೂರು, ರಾಜರಾಜೇಶ್ವರಿನಗರ ಈ ವಾರ್ಡ್‍ಗಳಲ್ಲಿ 80 ರಿಂದ 100 ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ.

ಈ ಎಲ್ಲ ವಾರ್ಡ್‍ಗಳಿಂದ ಕಳೆದೆರಡು ವಾರಗಳಿಂದ ಅತ್ಯಧಿಕ ಪ್ರಕರಣಗಳು ದಾಖಲಾಗುತ್ತಿವೆ. ಈ ವಾರ್ಡ್‍ಗಳ ಕಡೆ ಹೋಗುವ ಜನ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಾಗಿದೆ.

ರಾಜ್ಯ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಏರಿಳಿಕೆಯಾಗುತ್ತಿವೆ. ಮೂರನೆ ಅಲೆ ಎದುರಾಗಲಿದೆ ಎಂದು ತಜ್ಞರು ವರದಿ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ