ಕ್ವಾರ್ಟರ್‍ಫೈನಲ್ ಪ್ರವೇಶಿಸಿದ ಭಾರತೀಯ ಮಹಿಳಾ ಹಾಕಿ ತಂಡ: ಆಸ್ಟ್ರೇಲಿಯಾ ವಿರುದ್ಧ 1-0 ಯಿಂದ ಗೆಲ್ಲುವ ಮೂಲಕ ಸೆಮಿಫೈನಲ್‍ಗೇರಿ ಇತಿಹಾಸ

ಟೋಕಿಯೋ, ಆ.2- ಅದೃಷ್ಟದಿಂದಲೇ ಕ್ವಾರ್ಟರ್‍ಫೈನಲ್ ಪ್ರವೇಶಿಸಿದ್ದ ಭಾರತೀಯ ಮಹಿಳಾ ಹಾಕಿ ತಂಡವು ಇಂದು ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 1-0 ಯಿಂದ ಗೆಲ್ಲುವ ಮೂಲಕ ಸೆಮಿಫೈನಲ್‍ಗೇರಿ ಇತಿಹಾಸ ಸೃಷ್ಟಿಸಿದೆ.

ಟೋಕಿಯೋ ಒಲಿಂಪಿಕ್ಸ್‍ನ ಆರಂಭಿಕ ಪಂದ್ಯಗಳಲ್ಲಿ ನಿರಾಸ ಪ್ರದರ್ಶನ ತೋರಿದ ಭಾರತೀಯ ಹಾಕಿ ಆಟಗಾರ್ತಿಯರು ಛಲಬಿಡದೆ ಹೋರಾಟ ನಡೆಸಿದ ಪರಿಣಾಮವಾಗಿ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‍ನ ಇತಿಹಾಸದಲ್ಲಿ ಸೆಮಿಫೈನಲ್‍ಗೆ ಪ್ರವೇಶ ಪಡೆದುಕೊಂಡಿದೆ. ನಿನ್ನೆ ನಡೆದ ಪಂದ್ಯದಲ್ಲಿ ಪುರುಷರ ಹಾಕಿ ತಂಡವು ಗ್ರೇಟ್ ಬ್ರಿಟನ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ತಲುಪಿದೆ.

ಅದೃಷ್ಟ ತಂದ ಪೆನಾಲ್ಟಿ ಕಾರ್ನರ್:
ಇಂದು ನಡೆದ ಕ್ವಾರ್ಟರ್‍ಫೈನಲ್‍ನಲ್ಲಿ ಲೀಗ್ ಹಂತದಲ್ಲಿ ಬಲಿಷ್ಠ ಆಸ್ಟ್ರೇಲಿಯಾದ ಸವಾಲು ಎದುರಿಸಿದರೂ ಪಂದ್ಯದ ಆರಂಭದ ಕ್ಷಣದಿಂದಲೂ ಭಾರತೀಯ ಆಟಗಾರ್ತಿಯರು ಉತ್ತಮ ಹೋರಾಟದ ಮನೋಭಾವ ತೋರಿದ್ದರಿಂದ ಪಂದ್ಯ ರೋಚಕತೆ ಸೃಷ್ಟಿಸಿತ್ತು.

ಪಂದ್ಯದ 22ನೆ ನಿಮಿಷದಲ್ಲಿ ಭಾರತ ತಂಡದ ಆಟಗಾರ್ತಿ ಗುರ್‍ಜಿತ್ ಕೌರ್ ಅವರು ತನಗೆ ಸಿಕ್ಕ ಪೆನಾಲ್ಟಿ ಕಾರ್ನರ್‍ನ ಅವಕಾಶವನ್ನು ಉತ್ತಮ ರೀತಿಯಾಗಿ ಬಳಸಿಕೊಂಡು ಗೋಲ್ ಗಳಿಸುವ ಮೂಲಕ ತಂಡದಲ್ಲಿ ಹರ್ಷ ಮೂಡಿಸಿದರು.

ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಗುರುಜಿತ್ ಕೌರ್ ಒಲಿಂಪಿಕ್ಸ್‍ನಲ್ಲಿ ಗಳಿಸಿದ ಮೊದಲ ಗೋಲ್ ಇದಾಗಿತ್ತು.

ಪಂದ್ಯದ ಮೊದಲ ವಿರಾಮದಲ್ಲೇ 1-0 ಯಿಂದ ಮುನ್ನಡೆ ಸಾಧಿಸಿದ ಭಾರತೀ ಯ ಹಾಕಿ ವನಿತೆಯರು 2ನೆ ಅವಧಿಯಲ್ಲೂ ಉತ್ತಮ ಹೋರಾಟ ಪ್ರದರ್ಶಿಸಿದ ಪರಿಣಾಮ ಲೀಗ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಆಸ್ಟ್ರೇಲಿಯಾದ ಹಾಕಿ ವನಿತೆಯರಿಗೆ ಗೋಲು ಗಳಿಸಲು ಸಾಧ್ಯವಾಗದ ಪರಿಣಾಮ ಭಾರತ ತಂಡವು 1-0 ಯಿಂದ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‍ಗೇರುವ ಮೂಲಕ ಪದಕದ ಆಸೆಯನ್ನು ಮೂಡಿಸಿದ್ದಾರೆ.

ಕ್ವಾರ್ಟರ್‍ಫೈನಲ್‍ನಲ್ಲಿ ವಿಶ್ವ ರ್ಯಾಂಕಿಂಗ್ 4ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡವನ್ನು ಮಣಿಸಿರುವ ಭಾರತೀಯ ಮಹಿಳೆಯರ ಹಾಕಿ ತಂಡವು ಸೆಮಿಫೈನಲ್‍ನಲ್ಲಿ 2ನೇ ಶ್ರೇಯಾಂಕಿತ ಅರ್ಜೆಂಟೀನಾದ ಸವಾಲನ್ನು ಎದುರಿಸಲಿದೆ.

ಕ್ವಾರ್ಟರ್‍ಫೈನಲ್‍ನಲ್ಲಿ ಅರ್ಜೆಂಟೀನಾವು ಜರ್ಮನ್ ವಿರುದ್ಧ 3-0 ಭಾರೀ ಅಂತರದಿಂದ ಗೆಲುವು ಸಾಧಿಸಿ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ