ಹೊಸದಿಲ್ಲಿ :ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ತೀವ್ರಗೊಳ್ಳುತ್ತಿರುವ ನಡುವೆಯೇ, ಕೇಂದ್ರ ಸರಕಾರವು ಅಲ್ಲಿರುವ ಭಾರತೀಯರಿಗೆ ಸದಾಕಾಲ ಕಟ್ಟೆಚ್ಚರದಲ್ಲಿರುವಂತೆ ಸೂಚಿಸಿದ್ದು, ಅನಗತ್ಯ ಪ್ರವಾಸ ಮಾಡದಂತೆ ಎಚ್ಚರಿಕೆ ನೀಡಿದೆ.
ಈ ನಿಟ್ಟಿನಲ್ಲಿ ಅಪ್ಘಾನ್ನಲ್ಲಿರುವ ಭಾರತೀಯರಿಗೆ ಎಂಟು ಅಂಶಗಳ ಸುರಕ್ಷಾ ಮಾರ್ಗಸೂಚಿಯನ್ನು ನೀಡಿದ್ದು, ಹಿಂಸಾಗ್ರಸ್ತ ದೇಶದಲ್ಲಿ ಇರುವ ಭಾರತೀಯರು ಮತ್ತು ಕೆಲಸಗಾರರು ಈ ಮಾರ್ಗಸೂಚಿಯನ್ನು ಪಾಲಿಸಿ ಎಚ್ಚರಿಕೆ ವಹಿಸಬೇಕೆಂದು ಸೂಚಿಸಿದೆ.
ಆ ದೇಶದ ಹಲವು ಪ್ರಾಂತಗಳಲ್ಲಿ ಭದ್ರತಾ ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿ ಹದಗೆಟ್ಟಿದ್ದು, ಭಯೋತ್ಪಾದಕ ಗುಂಪುಗಳು ನಾಗರಿಕರನ್ನು ಗುರಿ ಮಾಡುವುದು ಸೇರಿದಂತೆ ಹಿಂಸಾತ್ಮಕ ಕೃತ್ಯಗಳನ್ನು ತೀವ್ರಗೊಳಿಸಿರುವುದನ್ನು ಕೇಂದ್ರ ಸರಕಾರ ಸೂಕ್ಷ್ಮವಾಗಿ ಗಮನಿಸಿ ನಾಗರಿಕರ ರಕ್ಷಣೆಗೆ ಹಲವು ಉಪಕ್ರಮ ಕೈಗೊಂಡಿದೆ.
ಪಾಕ್ ಪ್ರಾಯೋಜಿತ ಭಯೋತ್ಪಾದಕ ಗುಂಪುಗಳು ಭಾರತೀಯ ರಾಷ್ಟ್ರೀಯರನ್ನು ದಾಳಿ ಗುರಿಯನ್ನಾಗಿಸುವ ಸಾಧ್ಯತೆ ಇದ್ದು, ಅಪಹರಣದಂತಹ ಕೃತ್ಯಗಳು ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಾಗೃತರಾಗಿರುವಂತೆ ಸೂಚಿಸಿದೆ.ರಸ್ತೆ ಬದಿಯಲ್ಲಿ ಸ್ಪೋಟಕ ಸಾಧನಗಳನ್ನು ಬಳಸಿ ನಾಗರಿಕ ವಾಹನಗಳ ಮೇಲೆ ದಾಳಿ ನಡೆಸಲೂ ಈ ಭಯೋತ್ಪಾದಕ ಗುಂಪುಗಳು ಸಂಚು ರೂಪಿಸಿರುವ ಬಗೆಗೂ ಎಚ್ಚರಿಕೆ ನೀಡಲಾಗಿದೆ.
ತಮ್ಮ ಕೆಲಸದ ಪ್ರದೇಶಗಳಲ್ಲಿ ಸುರಕ್ಷಾ ವ್ಯವಸ್ಥೆಗಳನ್ನು ಅನುಸರಿಸುವುದು, ಅನಗತ್ಯ ಚಲನವಲನ ತಪ್ಪಿಸುವುದು, ಜನದಟ್ಟಣೆಯ ಸಮಯದಲ್ಲಿ ಓಡಾಟ ತಪ್ಪಿಸುವುದು, ಸೇನಾ ವಾಹನ, ಸರಕಾರಿ ವಾಹನ, ಉನ್ನತ ಅಕಾರಿಗಳ ವಾಹನ, ಸರಕಾರಿ ಏಜೆನ್ಸಿಗಳ ವಾಹನ ಸಾಗುವ ವೇಳೆ ಅಂತರ ಕಾಯ್ದುಕೊಳ್ಳುವುದು, ದಟ್ಟಣೆಯ ಮಾರುಕಟ್ಟೆ, ಮಂಡಿ, ರೆಸ್ಟೋರೆಂಟ್ಗಳು, ಸಾರ್ವಜನಿಕ ಸ್ಥಳಗಳಿಗೆ ಭೇಟಿ ಕೊಡದಿರುವುದು, ಮುಖ್ಯನಗರಗಳಿಂದ ಹೊರಗಡೆ ಪ್ರಯಾಣವನ್ನು ಕಟ್ಟುನಿಟ್ಟಾಗಿ ನಿರ್ಬಂಸಲಾಗಿದೆ.ಎಲ್ಲ ಭಾರತೀಯರೂ ಭಾರತೀಯ ರಾಯಭಾರ/ಕಾನ್ಸುಲೇಟ್ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಅಲ್ಲಿ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವವರು ಸೂಕ್ತ ರಕ್ಷಣಾ ವ್ಯವಸ್ಥೆಗಳ ಸುಪರ್ದಿಯಲ್ಲೇ ಕೆಲಸ ಮಾಡುವುದು ,ಭಾರತೀಯ ಮಾಧ್ಯಮ ಮಂದಿ ತಳಮಟ್ಟದ ವರದಿಗಾಗಿ ಹೋಗುವ ವೇಳೆ ರಾಯಭಾರಿ ಕಚೇರಿಯ ಸುರಕ್ಷಾ ವಿಭಾಗವನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.ಇದರಿಂದ ಅವರಿಗೆ ಅಪಾಯದ ಕುರಿತಂತೆ ಸೂಕ್ತ ಮಾಹಿತಿ ಮತ್ತು ಕ್ಷಿಪ್ರ ನೆರವು ಒದಗಿಸಲು ಅನುಕೂಲವಾಗಲಿದೆ ಎಂದು ಮೂಲಗಳು ತಿಳಿಸಿವೆ.