ಕುಸಿದ ಮನೆಗಳು… ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರ ಅಳಲು… ಜಲಾವೃತಗೊಂಡ ಕೃಷಿ ಭೂಮಿ… ಉಕ್ಕಿ ಹರಿಯುತ್ತಿರುವ ನದಿಗಳು…

ಕೊರೊನಾ ಸಂಕಷ್ಟದಿಂದ ಒಂದಿಷ್ಟು ನಿರಾಳರಾಗುತ್ತಿದ್ದಂತೆ ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು, ಉತ್ತರ ಕನ್ನಡ ಭಾಗದ ಜನರು ವರುಣನ ಆರ್ಭಟಕ್ಕೆ ತತ್ತರಿಸಿಹೋಗಿದ್ದಾರೆ.

ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದ ಬೆಳಗಾವಿ, ರಾಯಚೂರು, ಯಾದಗಿರಿ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಮಹಾರಾಷ್ಟ್ರದಲ್ಲೂ ಭಾರೀ ಮಳೆ ಸುರಿಯುತ್ತಿದ್ದು, ಕೃಷ್ಣಾ ನದಿಯಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವುದರಿಂದ ಉತ್ತರ ಕರ್ನಾಟಕ ಭಾಗದ ವೇದ್‍ಗಂಗಾ, ದೂದ್‍ಗಂಗಾ, ಹಿರಣ್ಯಕೇಶಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನದಿಪಾತ್ರದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಬೆಳಗಾವಿಯಲ್ಲೂ ಮಳೆ ಮುಂದುವರಿದಿದ್ದು, ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಚಿಕ್ಕಾಲಗುಡ್ಡ ಗ್ರಾಮಕ್ಕೆ ನದಿನೀರು ನುಗ್ಗಿ ಸಂಪೂರ್ಣ ಜಲಾವೃತವಾಗಿದೆ. ಈ ಗ್ರಾಮದಲ್ಲಿ ಹೊಸದಾಗಿ ಕಟ್ಟಿಕೊಂಡಿದ್ದ ಮನೆಗಳಿಗೆ ನೀರು ನುಗ್ಗಿದೆ. 50ಕ್ಕೂ ಹೆಚ್ಚು ಮನೆಗಳು ನೀರಿನಿಂದ ಆವೃತವಾಗಿವೆ. ನಿನ್ನೆ ಮಳೆಯ ಅವಾಂತರಕ್ಕೆ ಐವರು ಸಾವನ್ನಪ್ಪಿದ್ದು, ಇಂದು ಕೂಡ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ.

ಚಿಕ್ಕೋಡಿ, ಮಹಾರಾಷ್ಟ್ರ ಹಾಗೂ ಕೃಷ್ಣಾನದಿ ಅಚ್ಚುಕಟ್ಟು ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಚಿಕ್ಕೋಡಿ, ರಾಮನಗರದ ಬಳಿ ಹಳ್ಳದ ನೀರಿನಲ್ಲಿ ನಿನ್ನೆ ಕೊಚ್ಚಿ ಹೋಗಿದ್ದ 12 ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.

ಮೃತ ದುರ್ದೈವಿ ಬಾಲಕಿ ಕಿರಣ್ ಶಾನೂರು ವಿಭೂತಿಯ ಶವ ಇಂದು ಪತ್ತೆಯಾಗುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಬಾಗಲಕೋಟೆ ಜಿಲ್ಲೆ, ರಬಕವಿ ಬನಹಟ್ಟಿ ತಾಲ್ಲೂಕಿನ ಢವಳೇಶ್ವರ, ನಂದಗಾವ ಗ್ರಾಮಗಳು ಜಲಾವೃತಗೊಂಡಿವೆ. ಘಟಪ್ರಭ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಈ ಭಾಗದ ಸೇತುವೆಗಳ ಮೇಲೆ ನೀರು ಹರಿಯುತ್ತಿದೆ. ನದಿಯ ಅಕ್ಕಪಕ್ಕದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಬೆಳೆ ಸಂಪೂರ್ಣ ಜಲಾವೃತಗೊಂಡಿದೆ. ಗ್ರಾಮದ ಲಕ್ಷ್ಮಿದೇವಿ, ದುರ್ಗಾದೇವಿ ದೇವಸ್ಥಾನದ ಸುತ್ತ ನೀರು ತುಂಬಿದೆ.

ಜಿಲ್ಲೆಯ ಮುಧೋಳ ತಾಲ್ಲೂಕಿನ ಸೇತುವೆ ಕೂಡ ಸಂಪೂರ್ಣ ಜಲಾವೃತಗೊಂಡಿದ್ದು, ನಿರ್ಜಿ, ವಂಟಗೋಡ, ಮಾಲಿಂಗಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಹಲವೆಡೆ ಹೆದ್ದಾರಿ ಕುಸಿದು ಸಂಚಾರಕ್ಕೆ ಅಡಚಣೆಯಾಗಿದೆ. ಸೇತುವೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ಸಂಚಾರ ಬಂದ್ ಮಾಡಲಾಗಿದ್ದು, ಕಿಲೋಮೀಟರ್‍ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿವೆ.

ಕಲಬುರಗಿ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ಕಾಳಗಿ ತಾಲ್ಲೂಕಿನ ಹೊಸಳ್ಳಿ ಗ್ರಾಮಕ್ಕೆ ನೀರು ನುಗ್ಗಿ ಮನೆಗಳು ಜಲಾವೃತಗೊಂಡಿವೆ. ದಿನಸಿ, ಅಗತ್ಯ ವಸ್ತುಗಳು ನೀರು ಪಾಲಾಗಿ ಜನರು ಪರದಾಡುವಂತಾಗಿದೆ.

ಭಾರೀ ಮಳೆಯಿಂದಾಗಿ ಶಿರಾಡಿಘಾಟ್ ಬಳಿ ರಸ್ತೆ ಕುಸಿತ ಉಂಟಾದ ಪರಿಣಾಮ ಬೆಂಗಳೂರು-ಮಂಗಳೂರು ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ ಚಾರ್ಮುಡಿಘಾಟ್ ಮೂಲಕ ಪರ್ಯಾಯ ಮಾರ್ಗ ಕಲ್ಪಿಸಲಾಯಿತು.

ಚಾರ್ಮುಡಿಘಾಟ್‍ನಲ್ಲೂ ಕೂಡ ಸಂಚಾರ ದಟ್ಟಣೆ ಹೆಚ್ಚಾಗಿದ್ದಲ್ಲದೆ ಹಲವೆಡೆ ಮರಗಳು ನೆಲಕ್ಕುರುಳಿದ ಪರಿಣಾಮ ಚಾರ್ಮುಡಿಘಾಟ್ ಮಾರ್ಗವನ್ನು ಕೂಡ ಕೆಲಕಾಲ ಬಂದ್ ಮಾಡಲಾಯಿತು.

ಈ ಪರಿಣಾಮ ಕೊಟ್ಟಿಗೆಹಾರದ ಬಳಿ ನೂರಾರು ವಾಹನಗಳು ನಿಂತು ಟ್ರಾಫಿಕ್ ಜಾಮ್ ಉಂಟಾಯಿತು. ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಮಳೆ ತೀವ್ರ ಸ್ವರೂಪ ಪಡೆದಿದ್ದು, ಹೊಲ, ಗದ್ದೆ, ತೋಟಗಳಲ್ಲೆಲ್ಲ ನೀರು ತುಂಬಿದೆ.

ಕೆಲವೆಡೆ ಮನೆಗಳಿಗೆ ನೀರು ತುಂಬಿ ಗ್ರಾಮಗಳೆಲ್ಲ ಜಲಾವೃತಗೊಂಡಿವೆ. ಕೊಡಗಿನ ಹಲವೆಡೆ ಮಳೆ ಮುಂದುವರಿದಿದ್ದು, ಕುಶಾಲನಗರದ ಒಂದೇ ಗ್ರಾಮದಲ್ಲಿ 10 ಮನೆಗಳು ಕುಸಿದಿವೆ. ಇಲ್ಲಿರುವ ಜನರನ್ನು ಅಧಿಕಾರಿಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.

ಮಡಿಕೇರಿ-ಮಂಗಳೂರು, ಮದೇ ಗ್ರಾಮದ ಬಳಿ ಭೂ ಕುಸಿತ, ರಸ್ತೆಯಲ್ಲಿ ಬಿರುಕು ಕಂಡುಬಂದಿದ್ದು, ಭಾರೀ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಜನರು ಭಾರೀ ಮಳೆಯಿಂದ ತತ್ತರಿಸಿ ಹೋಗಿದ್ದಾರೆ. ಅರೆಬೈಲು, ಘಾಟಿ ಸೇರಿದಂತೆ 15ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಡಿತ ಉಂಟಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

ಮಹಾರಾಷ್ಟ್ರದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ದೂದ್‍ಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಬೆಳಗಾವಿ, ಚಿಕ್ಕೋಡಿ ತಾಲ್ಲೂಕಿನ ಮಾಂಗೂರು ಪ್ರಾಥಮಿಕ ಕೇಂದ್ರ, ಪಶು ವೈದ್ಯಕೀಯ ಆರೋಗ್ಯ ಕೇಂದ್ರ ಸೇರಿದಂತೆ ವಿವಿಧೆಡೆ ಏಕಾಏಕಿ ನೀರು ನುಗ್ಗಿದ ಪರಿಣಾಮ ವೈದ್ಯರು ಮತ್ತು ಸಿಬ್ಬಂದಿ ಪರದಾಡುವಂತಾಯಿತು.

ಶಿವಮೊಗ್ಗ ಜಿಲ್ಲೆಯಲ್ಲೂ ಕೂಡ ಭಾರೀ ಮಳೆ ಸುರಿಯುತ್ತಿದ್ದು, ನಗರದ ಕುಂಬಾರಗುಂಡಿ ಬೀದಿ ರಸ್ತೆ, ಬಟ್ಟೆ ಮಾರುಕಟ್ಟೆ ಮಳೆ ಅವಾಂತರಕ್ಕೆ ಸಿಲುಕಿದೆ.

ತುಂಗಾನದಿಯ ನೀರು ಅನೇಕ ಮನೆಗಳಿಗೆ ನುಗ್ಗಿದ ಪರಿಣಾಮ ಜನ ರಾತ್ರಿಯಿಡೀ ಮಳೆನೀರನ್ನು ಹೊರಹಾಕುತ್ತ ಕಾಲ ಕಳೆಯುವಂತಾಯಿತು.

ಉತ್ತರ ಕನ್ನಡ ಜಿಲ್ಲೆ , ರಾಷ್ಟ್ರೀಯ ಹೆದ್ದಾರಿ-63ರಲ್ಲಿ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದ್ದು, ಈ ಭಾಗದ ಹಲವು ಗ್ರಾಮಗಳು ಕೂಡ ಜಲಾವೃತಗೊಂಡಿವೆ.

ಬಾಗಲಕೋಟೆಯಲ್ಲೂ ಕೂಡ ಮಳೆ ಮುಂದುವರಿದಿದ್ದು, ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಉಸ್ತುವಾರಿ ಸಚಿವ ಉಮೇಶ್ ಕತ್ತಿ ಅವರು ಇಂದು ಆಲಮಟ್ಟಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆ. ಮಧ್ಯಾಹ್ನ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರ ಕ್ರಮಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಕಲಬುರಗಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿರುವುದರಿಂದ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಭೇಟಿ ನೀಡಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.

ರಾಯಚೂರಿನಲ್ಲೂ ವರುಣನ ರೌದ್ರ ನರ್ತನ ಮುಂದುವರಿದಿದ್ದು, ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 3.5 ಲಕ್ಷ ಕ್ಯೂಸೆಕ್ ನೀರು ಬಿಡುತ್ತಿದ್ದು, ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಸೇತುವೆ ಮುಳುಗಡೆಯಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ನಿನ್ನೆ ರಾತ್ರಿಯಿಂದಲೇ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ