ದೇಶದಲ್ಲಿ ಅಪನಂಬಿಕೆ ಮತ್ತು ದ್ವೇಷ ಬಿತ್ತಿದ ಪರಿಣಾಮ: ಮಿಜೋರಾಂ ಮತ್ತು ಅಸ್ಸಾಂ ರಾಜ್ಯಗಳ ನಡುವಿನ ಗಡಿ ಸಂಘರ್ಷ

ನವದೆಹಲಿ, ಜು.27- ಈಶಾನ್ಯ ಭಾಗದ ಮಿಜೋರಾಂ ಮತ್ತು ಅಸ್ಸಾಂ ರಾಜ್ಯಗಳ ನಡುವಿನ ಗಡಿ ಸಂಘರ್ಷದ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗಿದ್ದು, ದೇಶದಲ್ಲಿ ಅಪನಂಬಿಕೆ ಮತ್ತು ದ್ವೇಷ ಬಿತ್ತಿದ ಪರಿಣಾಮ ಅದರ ಘೋರತೆಯನ್ನು ಜನ ಅನುಭವಿಸಬೇಕಾಗಿದೆ ಎಂಬ ಆಕ್ರೋಶಗಳು ಕೇಳಿ ಬಂದಿವೆ.

ಮಿಜೋರಾಂನೊಂದಿಗೆ ಹೊಂದಿಕೊಂಡಿರುವ ಸಾಂವಿಧಾನಾತ್ಮಕ ಗಡಿಯನ್ನು ರಕ್ಷಿಸುವ ಸಲುವಾಗಿ ಸೋಮವಾರ ನಡೆದ ಸಂಘರ್ಷದಲ್ಲಿ ಅಸ್ಸಾಂನ ಐದು ಮಂದಿ ಪೊಲೀಸರು ಹತ್ಯೆಯಾಗಿದ್ದಾರೆ. ಮಿಜೋರಾಂನ ರಾಜ್ಯಕ್ಕೆ ಸೇರಿದ ಎಸ್‍ಪಿ ಸೇರಿದಂತೆ 60 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ರಕ್ತಸಿಕ್ತ ಈ ಕಾಳಗದ ಕುರಿತು ಕಾಂಗ್ರೆಸ್, ಟಿಎಂಸಿ, ಸೇರಿದಂತೆ ಅನೇಕ ಪಕ್ಷಗಳು ಆಕ್ರೋಶ ವ್ಯಕ್ತ ಪಡಿಸಿವೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್‍ನಲ್ಲಿ ವಾಗ್ದಾಳಿ ನಡೆಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಫಲರಾಗಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ದೇಶದಲ್ಲಿ ದ್ವೇಷ ಮತ್ತು ಅಪನಂಬಿಕೆಯನ್ನು ಬಿತ್ತಲಾಯಿತು.

ಅದರ ಪರಿಣಾಮವನ್ನು ದೇಶದಲ್ಲಿ ಬದುಕುತ್ತಿರುವ ಜನ ಅನುಭವಿಸಬೇಕಿದೆ. ಅಹಿತಕರವಾದ ಈ ರೀತಿಯ ಕ್ರೂರ ಘಟನೆಗಳಿಗೆ ಜನ ಬೆಲೆ ತೆರಬೇಕಿದೆ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮೃತಪಟ್ಟವರ ಕುಟುಂಬಕ್ಕೆ ಸಂತಾಪಗಳನ್ನು ತಿಳಿಸುವ ಜೊತೆಗೆ ಗಾಯಗೊಂಡವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ಈ ನಡುವೆ ಅಸ್ಸಾಂ ಸರ್ಕಾರ ಪತ್ರಿಕಾ ಹೇಳಿಕೆ ನೀಡಿದ್ದು, ಮಿಜೋರಾಂ ಪೊಲೀಸರು ನಮ್ಮ ಅಧಿಕಾರಿಗಳು ಮತ್ತು ನಾಗರಿಕರ ಮೇಲೆ ಎಲ್‍ಎಂಜಿ ಬಳಸಿ ಗುಂಡಿನ ದಾಳಿ ನಡೆಸಿದರು ಎಂದು ಆರೋಪಿಸಿದೆ.

ಇದಕ್ಕೆ ಮಿಜೋರಾಂನ ಗೃಹ ಸಚಿವ ಲಾಲ್‍ಚಮಲಿನಾ ಪ್ರತ್ಯುತ್ತರಿಸಿದ್ದು, ಸಿಆರ್‍ಪಿಎಫ್ ಕಾವಲಿದ್ದ ಗಡಿಭಾಗದ ಚೆಕ್ ಪೊಸ್ಟ್ ನ್ನು ಅಸ್ಸಾಂನ ಪೊಲೀಸರು ಮತ್ತು ಜನ ಸೇರಿ ಸುಮಾರು 200 ಮಂದಿ ಬಲವಂತವಾಗಿ ದಾಟಿ ನುಗ್ಗಿ ಬಂದಿದ್ದರು. ಅದಕ್ಕೆ ಮಿಜೋರಾಂನ ಪೊಲೀಸರು ತಕ್ಷಣ ಗುಂಡಿನ ಮೂಲಕ ಪ್ರತಿಕ್ರಿಯಿಸಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

ದುರ್ಘಟನೆಯ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಸ್ಸೋಂನ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಶರ್ಮಾ ಮತ್ತು ಮಿಜೋರಾಂನ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿದ್ದು, ಶಾಂತಿ ಕಾಪಾಡಿಕೊಳ್ಳುವಂತೆ ಸೂಚಿಸಿದ್ದಾರೆ.

ಅಸ್ಸಾಂ ಬಾರಕ್ ವ್ಯಾಲಿ ಜಿಲ್ಲೆ ಕ್ಯಾಚರ್, ಕರೀಂಗಂಜ್ ಮತ್ತು ಹೈಲಕಂಡಿಯಲ್ಲಿ 164 ಕಿಲೋ ಮೀಟರ್ ಗಡಿಯನ್ನು ಮಿಜೋರಾಂ ಜೊತೆ ಹಂಚಿಕೊಂಡಿದೆ.

ಮಿಜೋರಾಂನ ಐಜ್ವಾಲ್, ಕೊಲಸಿಬ್, ಮಮಿತ್ ಜಿಲ್ಲೆಗಳು ಗಡಿಗೆ ಹೊಂದಿಕೊಂಡಿವೆ. ಈ ಪ್ರಾಂತ್ಯದ ವಿವಾದ ಪದೇ ಪದೇ ಕೆರಳುತ್ತಿದ್ದು, ಕಳೆದ ಆಗಸ್ಟ್ನಲ್ಲಿ ಗಲಾಟೆ ನಡೆದಿತ್ತು.

ನಿನ್ನೆ ನಡೆದ ಗಲಾಟೆಯಲ್ಲಿ ಮೃತಪಟ್ಟ ಪೊಲೀಸರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಅಸ್ಸಾಂ ಸರ್ಕಾರ ಮೂರು ದಿನಗಳ ಶೋಕಾಚರಣೆಯನ್ನು ಘೋಷಣೆ ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ