ಎಷ್ಟೇ ಕಟ್ಟೆಚ್ಚರ ವಹಿಸಿದರೂ ನೆರೆಯ ಗಡಿಯಿಂದ ಅಪಾಯಕಾರಿ ಡ್ರೋಣ್‍ಗಳು ನುಸುಳಿ ಬರುವುದು ನಿಂತಿಲ್ಲ

ಜಮ್ಮು, ಜು.23- ಎಷ್ಟೇ ಕಟ್ಟೆಚ್ಚರ ವಹಿಸಿದರೂ ನೆರೆಯ ಗಡಿಯಿಂದ ಅಪಾಯಕಾರಿ ಡ್ರೋಣ್‍ಗಳು ನುಸುಳಿ ಬರುವುದು ನಿಂತಿಲ್ಲ. ವಿಧ್ವಂಸಕ ಐಇಡಿ ಸ್ಫೋಟಕವನ್ನು ಹೊಂದಿದ್ದ ಡ್ರೋಣ್ ಒಂದನ್ನು ಮತ್ತೆ ಜಮ್ಮ-ಕಾಶ್ಮೀರ ಪೊಲೀಸರು ಹೊಡೆದು ಉರುಳಿಸಿದ್ದಾರೆ.

ಜಮ್ಮು ಗಡಿಯಿಂದ 8 ಕಿಲೋ ಮೀಟರ್ ಒಳಭಾಗದ ಅಕ್ನೋರ್ ಪ್ರದೇಶದಲ್ಲಿ ಇಂದು ಬೆಳಗ್ಗೆ ಕಾಣಿಸಿಕೊಂಡ ಡ್ರೋಣ್ ಅನ್ನು ಹೊಡೆದುರುಳಿಸಲಾಗಿದ್ದು, ಅದಕ್ಕೆ ಜೋಡಿಸಲಾಗಿದ್ದ ಐದು ಕೆ.ಜಿ. ಸುಧಾರಿತ ಸ್ಫೋಟಕ ಐಇಡಿಯನ್ನು ವಶಪಡಿಸಿಕೊಂಡಿದ್ದಾರೆ.

ಇದರ ಹಿಂದೆ ಲಷ್ಕರ್-ಇ-ತೋಯ್ಬಾ (ಎಲ್‍ಇಟಿ) ಕೈವಾಡ ಇರುವ ಬಗ್ಗೆ ತನಿಖಾ ಸಂಸ್ಥೆಗಳು ಪರಿಶೀಲನೆ ಆರಂಭಿಸಿವೆ. ಈ ಮೊದಲು ನಡೆದ ಡ್ರೋಣ್ ದಾಳಿ ಯತ್ನದಲ್ಲಿ ಇದೇ ರೀತಿ ತಂತ್ರಗಾರಿಕೆಯನ್ನು ಬಳಸಲಾಗಿತ್ತು.

ಕಳೆದ ಜೂನ್ 27ರಂದು ಜಮ್ಮುವಿನ ವಾಯು ನೆಲೆಯ ಮೇಲೆ ಡ್ರೋಣ್‍ಗಳನ್ನು ಬಳಸಿ ಎರಡು ಕಡೆ ಸ್ಫೋಟ ನಡೆಸಲಾಗಿತ್ತು. ಅದು ಮೊದಲ ದಾಳಿಯಾಗಿತ್ತು.

ಅದರಿಂದ ವಾಯು ನೆಲೆಯ ಕಟ್ಟಡವೊಂದರ ಮೇಲ್ಛಾವಣಿಗೆ ಧಕ್ಕೆಯಾಗಿದ್ದು ಹೊರತು ಪಡಿಸಿ ಹೆಚ್ಚಿನ ಅನಾಹುತವಾಗಿರಲಿಲ್ಲ. ಅನಂತರ ಅಂತರಾಷ್ಟ್ರೀಯ ಗಡಿ ಭಾಗದಲ್ಲಿ ಹಲವಾರು ಬಾರಿ ಡ್ರೋಣ್ ಬಳಸಿ ದಾಳಿ ನಡೆಸುವ ಪ್ರಯತ್ನ ನಡೆದಿತ್ತು. ಹಾಗಾಗಿ ಕಟ್ಟೆಚ್ಚರವಹಿಸಿರುವ ರಕ್ಷಣಾ ಪಡೆಗಳು ದುಷ್ಟ ಹುನ್ನಾರಗಳನ್ನು ವಿಫಲಗೊಳಿಸಿವೆ.

ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಮತ್ತಷ್ಟು ಜಾಗ್ರತೆವಹಿಸುವಂತೆ ರಕ್ಷಣಾ ಪಡೆಗಳಿಗೆ ಡಿಜಿಪಿ ದಿಲ್‍ಬಾಗ್‍ಸಿಂಗ್ ಸೂಚನೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ