ರಾಹುಲ್ ಗಾಂಧಿ ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅಥವಾ ಸುಶೀಲ್ ಕುಮಾರ್ ಶಿಂಧೆ ಆಯ್ಕೆ ಸಾಧ್ಯತೆ

ನವದೆಹಲಿಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್​ ಗಾಂಧಿ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಅವರ ಬಳಿಕ ಆ ಸ್ಥಾನಕ್ಕೆ ಸುಶೀಲ್​ ಕುಮಾರ್ ಶಿಂಧೆ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಒಬ್ಬರನ್ನು ಪಕ್ಷ ಆಯ್ಕೆ ಮಾಡಲಿದೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿದೆ.

ನೆಹರು-ಗಾಂಧಿ ಕುಟುಂಬದವರನ್ನು ಹೊರತುಪಡಿಸಿ ಹೊರಗಿನವರು ಕಾಂಗ್ರೆಸ್​ ಪಕ್ಷದ ಅಧ್ಯಕ್ಷರಾಗುತ್ತಿರುವುದು ಇದು ಮೂರನೇ ಬಾರಿ. ಇದಕ್ಕೂ ಮೊದಲು ಪಿ.ವಿ.ನರಸಿಂಹ ರಾವ್​ ಮತ್ತು ಸೀತಾರಾಮ್ ಕೇಸರಿ ಕಾಂಗ್ರೆಸ್​ ಅಧ್ಯಕ್ಷರಾಗಿದ್ದರು.

ಮೂಲಗಳ ಪ್ರಕಾರ ಕಾಂಗ್ರೆಸ್​ ಅಧ್ಯಕ್ಷ ಆಯ್ಕೆಯ ಅಂತಿಮ ನಿರ್ಧಾರ ಮೂವರು ಗಾಂಧಿಗಳ ಮೇಲೆ ನಿಂತಿದೆ. ರಾಹುಲ್​ ಗಾಂಧಿ, ಮತ್ತು ಅವರ ತಾಯಿ ಸೋನಿಯಾ ಗಾಂಧಿ ಹಾಗೂ ಸಹೋದರಿ ಪ್ರಿಯಾಂಕಾ ಗಾಂಧಿ ಅವರು ನೂತನ ಅಧ್ಯಕ್ಷರನ್ನು ಅಂತಿಮವಾಗಿ ನಿರ್ಧರಿಸಲಿದ್ದಾರೆ.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವರಾಗಿ ಸೇವೆ ಸಲ್ಲಿಸಿರುವ 77 ವರ್ಷದ ಸುಶೀಲ್ ಕುಮಾರ್ ಶಿಂಧೆ ಹೆಸರು ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಬಲವಾಗಿ ಕೇಳಿಬಂದಿದೆ. 2002ರಲ್ಲಿ ಪಕ್ಷದ ಉಪಾಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಗಿತ್ತು.

ಮಹಾರಾಷ್ಟ್ರದ ಹಿರಿಯ ನಾಯಕರಾಗಿರುವ ಶಿಂಧೆ ಅವರಿಗೆ ಈ ಸ್ಥಾನ ನೀಡಿದರೆ ಮಹಾರಾಷ್ಟ್ರದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಹಾಗೂ ದಲಿತ ಮುಖಂಡರಾಗಿರುವ ಶಿಂಧೆಗೆ ಈ ಸ್ಥಾನ ನೀಡಿದರೆ ಆ ಸಮುದಾಯದ ಮತಗಳನ್ನು ಭದ್ರಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರವೂ ನಡೆದಿದೆ. ಇವೆಲ್ಲದಕ್ಕಿಂತ ಮುಖ್ಯವಾಗಿ ಶಿಂಧೆ ಗಾಂಧಿ ಕುಟುಂಬದ ಮೇಲೆ ಹೆಚ್ಚು ವಿಶ್ವಾಸ ಹೊಂದಿದವರಾಗಿದ್ದಾರೆ.

ಮತ್ತೊಬ್ಬ ಕಾಂಗ್ರೆಸ್ ಹಿರಿಯ ನಾಯಕರಾಗಿರುವ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ, ಕಳೆದ ಸರ್ಕಾರದಲ್ಲಿ ವಿರೋಧ ಪಕ್ಷದ ನಾಯಕರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದವರು. ಎನ್​ಡಿಎ ಸರ್ಕಾರದ ವಿರುದ್ಧ ಪರಿಣಾಮಕಾರಿಯಾಗಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ನಿಭಾಯಿಸಿದ್ದರು.

ಸೋಲಿಲ್ಲದ ಸರದಾರ ಎಂಬ ಬಿರುದಾಂಕಿತರಾಗಿ, ಕಾಂಗ್ರೆಸ್​ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿರುವ 76 ವರ್ಷದ ಖರ್ಗೆ  ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಸೋಲಿನ ರುಚಿ ಕಂಡಿದ್ದಾರೆ.

ಲೋಕಸಭೆ ಚುನಾವಣೆ ಬಳಿಕ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಇಂದು ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಹೀಗಾಗಿ ಒಂದು ವಾರದೊಳಗೆ ಪಕ್ಷ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ