ಮೈತ್ರಿ ಸರ್ಕಾರ ಬಂದ ಬಳಿಕ ಯಡಿಯೂರಪ್ಪ ಸರ್ಕಾರಕ್ಕೆ ಎರಡು ವರ್ಷ ಮುಳ್ಳಿನ ಹಾಸಿಗೆ!

ಬೆಂಗಳೂರು,ಜು.24- ನಾಯಕತ್ವ ಬದಲಾವಣೆಯ ಸಾಧ್ಯತೆ ಬಲವಾಗುತ್ತಿರುವ ಬೆನ್ನಲ್ಲೇ, ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತ ಎರಡು ವರ್ಷ ಪೂರೈಸುತ್ತಿದೆ. ಬಂಡಾಯದ ಸುಳಿಗೆ ಸಿಲುಕಿ ಪತನವಾದ ಮೈತ್ರಿ ಸರ್ಕಾರದ ಬಳಿಕ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರಕ್ಕೆ ತನ್ನ ಎರಡು ವರ್ಷದ ಆಡಳಿತ ಮುಳ್ಳಿನ ಹಾಸಿಗೆಯೇ ಆಗಿತ್ತು.

ಮೈತ್ರಿ ಸರ್ಕಾರ ಪತನದ ಬಳಿಕ ಅಧಿಕಾರದ ಪಟ್ಟ ಏರಿದ ಯಡಿಯೂರಪ್ಪ ಸರ್ಕಾರ, ಸಾಲು – ಸಾಲು ಅಗ್ನಿ ಪರೀಕ್ಷೆಗಳನ್ನೇ ಎದುರಿಸುತ್ತಾ ಬಂದಿದೆ.

ಯಡಿಯೂರಪ್ಪ ಸರ್ಕಾರದ ಆಡಳಿತವನ್ನು ಒರೆಗೆ ಹಚ್ಚುವಂತೆ ಒಂದರ ಮೇಲೊಂದರಂತೆ ಸರಣಿಯೋಪಾದಿಯಲ್ಲಿ ಸವಾಲುಗಳನ್ನು ಎದುರಿಸಿದ್ದೇ ಹೆಚ್ಚು.

ಹಿಂದೆಂದೂ ಕಾಣದ ಅತಿವೃಷ್ಟಿ, ಉಪಚುನಾವಣೆಯ ಅಗ್ನಿಪರೀಕ್ಷೆ, ಮೊದಲ ವರ್ಷ ಅಬ್ಬರಿಸಿದ ಕೊರೊನಾ, ಎರಡನೇ ವರ್ಷ ಇನ್ನಷ್ಟು ಬೊಬ್ಬಿರಿದ ಮಹಾಮಾರಿ ಕೊರೊನಾ ಬಿಜೆಪಿ ಸರ್ಕಾರಕ್ಕೆ ಎದುರಾದ ದೊಡ್ಡ ಸವಾಲಾಗಿತ್ತು.

ಮಳೆ, ಅತಿವೃಷ್ಟಿಯ ಕಂಟಕ: ಬಿಜೆಪಿ ಸರ್ಕಾರ ಅಧಿಕಾರ ಸ್ವೀಕರಿಸುತ್ತಿದ್ದ ಹಾಗೆ ರಾಜ್ಯ ಹಿಂದೆಂದೂ ಕಾಣದ ಅತಿವೃಷ್ಟಿಗೆ ಸಾಕ್ಷಿಯಾಯಿತು. ಆಗ ತಾನೇ ಅಸ್ತಿತ್ವಕ್ಕೆ ಬಂದ ಸರ್ಕಾರದಲ್ಲಿ ಯಾವುದೇ ಸಂಪುಟ ಸಚಿವರಿಲ್ಲದೇ, ಏಕಾಂಗಿಯಾಗಿ ಯಡಿಯೂರಪ್ಪ ಮಹಾಮಳೆಯ ಅತಿವೃಷ್ಟಿಯನ್ನು ನಿಭಾಯಿಸಬೇಕಾಯಿತು. 2019 ಆಗಸ್ಟ್‍ನಲ್ಲಿ ರಾಜ್ಯದಲ್ಲಿ ಮಳೆಯ ಆರ್ಭಟ ಹೆಚ್ಚಾದ ಹಿನ್ನೆಲೆ, ಬೆಳಗಾವಿ ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಯಿತು. ಈ ವೇಳೆ, ಸಿಂಗಲ್ ಮ್ಯಾನ್ ಕ್ಯಾಬಿನೆಟ್ ಸಿಎಂ ಒಬ್ಬರೇ ಪ್ರವಾಹ ಪೀಡಿತ ಪ್ರದೇಶದಲ್ಲಿ ಪ್ರವಾಸ ಕೈಗೊಳ್ಳಬೇಕಾಯಿತು.

ಕೇಂದ್ರದ ನೆರೆ ಪರಿಹಾರಕ್ಕಾಗಿ ಭಗೀರಥ ಯತ್ನ: ರಾಜ್ಯ ಭೀಕರ ಅತಿವೃಷ್ಟಿಗೆ ಸುಮಾರು 38,000 ಕೋಟಿ ರೂ. ಬೃಹತ್ ಪ್ರಮಾಣದ ನಷ್ಟ ಅನುಭವಿಸಿತ್ತು. ಇಷ್ಟು ದೊಡ್ಡ ಪ್ರಮಾಣದ ನಷ್ಟ ಪರಿಹಾರ ಕೇಳುವುದು ಬಿಜೆಪಿ ಸರ್ಕಾರದ ಮುಂದಿದ್ದ ಅತ್ಯಂತ ಕಠಿಣ ಸವಾಲಾಗಿತ್ತು. ಇತ್ತ ಕೇಂದ್ರ ಸರ್ಕಾರ ಪರಿಹಾರ ಮೊತ್ತ ನೀಡುವಲ್ಲಿನ ವಿಳಂಬ ಧೋರಣೆ ಬಿಎಸ್‍ವೈ ಸರ್ಕಾರವನ್ನು ತೀರಾ ಇಕ್ಕಟ್ಟಿಗೆ ಸಿಲುಕಿಸಿತು. ರಾಜ್ಯ ಸರ್ಕಾರದ ಹಲವು ಮನವಿ ಬಳಿಕ ಕೇಂದ್ರ ಸರ್ಕಾರ ಮೊದಲಿಗೆ 1200 ಕೋಟಿ ರೂ. ಬಿಡುಗಡೆ ಮಾಡಿತು. 35,000 ಕೋಟಿ ರೂ. ಪರಿಹಾರ ಕೇಳಿದ್ದ ರಾಜ್ಯಕ್ಕೆ, ಕೇಂದ್ರ ನೀಡಿದ ಅಲ್ಪ ಪರಿಹಾರ ರಾಜ್ಯ ಸರ್ಕಾರವನ್ನು ಮತ್ತೆ ಮುಜುಗರಕ್ಕೆ ಸಿಲುಕಿಸಿತು.

ಉಪಚುನಾವಣೆ ಅಗ್ನಿಪರೀಕ್ಷೆ: ಯಡಿಯೂರಪ್ಪ ಸರ್ಕಾರದ ತನ್ನ ಆಡಳಿತಾವಧಿಯಲ್ಲಿ ಎದುರಿಸಿದ ಅಳಿವು ಉಳಿವಿನ ಸವಾಲು ಉಪಚುನಾವಣೆ. ಕೈ-ತೆನೆ ರೆಬೆಲ್ ಶಾಸಕರ ರಾಜೀನಾಮೆಯಿಂದ ಸರ್ಕಾರ ರಚಿಸಿದ್ದ ಯಡಿಯೂರಪ್ಪ ಸರ್ಕಾರದ ಅಳಿವು – ಉಳಿವಿನ ಭವಿಷ್ಯ ನಿರ್ಧರಿಸಿದ್ದು, ಉಪಚುನಾವಣೆ.

15 ಕ್ಷೇತ್ರಗಳಲ್ಲಿ ತ್ಯಾಗ ಮಾಡಿ, ಅನರ್ಹಗೊಂಡ ಶಾಸಕರನ್ನು ಗೆಲ್ಲಿಸಿ, ಸರ್ಕಾರವನ್ನು ಗಟ್ಟಿಗೊಳಿಸುವ ಅಗ್ನಿಪರೀಕ್ಷೆ ಬಿಜೆಪಿ ಸರ್ಕಾರದ ಮುಂದಿತ್ತು. 2019 ಡಿಸೆಂಬರ್‍ನಲ್ಲಿ ನಡೆದ ಜಿದ್ದಾಜಿದ್ದಿನ ಉಪಸಮರದಲ್ಲಿ ಬಿಜೆಪಿ 15 ಕ್ಷೇತ್ರಗಳಲ್ಲಿ 12 ಸ್ಥಾನವನ್ನು ಗೆದ್ದು ಬೀಗಿತು.

ಸಂಪುಟ ವಿಸ್ತರಣೆ ಕಸರತ್ತು: ಸಂಪುಟ ವಿಸ್ತರಣೆ ಬಿಎಸ್‍ವೈ ಸರ್ಕಾರಕ್ಕೆ ಎದುರಾದ ಮತ್ತೊಂದು ಸಂಕಟ. ಉಪಸಮರದಲ್ಲಿ ಗೆದ್ದ ಶಾಸಕರನ್ನು ಮಂತ್ರಿಗಿರಿ ಮಾಡುವುದು ಸವಾಲಾಗಿ ಪರಿಣಮಿಸಿತು. ನೂತನ ಶಾಸಕರಿಗೆ ಸಚಿವ ಸ್ಥಾನ ನೀಡುವ ಅನಿವಾರ್ಯತೆ, ಹೈಕಮಾಂಡ್ ಸಂಪುಟ ವಿಸ್ತರಣೆಗೆ ತೋರಿದ ವಿಳಂಬ ಸರ್ಕಾರವನ್ನು ಮತ್ತೆ ಸಂಕಷ್ಟಕ್ಕೀಡು ಮಾಡಿತ್ತು. ಎರಡು ತಿಂಗಳು ಸಂಪುಟ ವಿಸ್ತರಣೆಯಾಗದಿರುವುದು ಇತ್ತ ಗೆದ್ದ ಶಾಸಕರ ಸಹನೆಯನ್ನೂ ಕೆಡಿಸಿತ್ತು. ಬಳಿಕ ಹೈಕಮಾಂಡ್ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿದ ಬಳಿಕ ಸಿಎಂ ನಿಟ್ಟುಸಿರು ಬಿಡುವಂತಾಯಿತು.

ಕೊರೊನಾ ಮಹಾಮಾರಿಯ ಹೊಡೆತ: ಕಳೆದ ಎರಡು ವರ್ಷದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಹೆಮ್ಮಾರಿಯಾಗಿ ಕಾಡಿದ್ದು, ಕೊರೊನಾ ಮಹಾಮಾರಿ. ಇಡೀ ದೇಶವನ್ನು ಕಾಡುತ್ತಿರುವ ಕೊರೊನಾ ವೈರಾಣು ರಾಜ್ಯವನ್ನೂ ನಲುಗಿಸಿ ಬಿಟ್ಟಿದೆ. ಮೊದಲ ವರ್ಷದಲ್ಲಿ ಕೊರೊನಾದ ಮೊದಲ ಅಲೆಯ ಅಬ್ಬರ, ಎರಡನೇ ವರ್ಷದಲ್ಲಿ ಕೊರೊನಾದ ಎರಡನೇ ಅಲೆಯ ಸುನಾಮಿ ಯಡಿಯೂರಪ್ಪ ಸರ್ಕಾರದ ಬುಡವನ್ನೇ ಅಲುಗಾಡಿಸಿ ಬಿಟ್ಟಿತ್ತು. ಒಂದು ಕಡೆ ಆರೋಗ್ಯ ಮೂಲ ಸೌಕರ್ಯದ ಕೊರತೆ, ಇನ್ನೊಂದೆಡೆ ಆಕ್ಸಿಜನ್, ಬೆಡ್‍ಗಳ ಕೊರತೆ ಸರ್ಕಾರ ಮೇಲೆ ಗದಾಪ್ರಹಾರವನ್ನೇ ಮಾಡಿತು.

ಆರ್ಥಿಕ ಸಂಕಷ್ಟದ ಮಹಾ ಹೊಡೆತ: ಕೊರೊನಾ ಬಳಿಕ ಯಡಿಯೂರಪ್ಪ ಸರ್ಕಾರವನ್ನು ಅತಿಯಾಗಿ ಕಾಡಿದ್ದು ಆರ್ಥಿಕ ಸಂಕಷ್ಟ. ಲಾಕ್‍ಡೌನ್‍ನಿಂದ ರಾಜ್ಯದ ಬೊಕ್ಕಸವೆಲ್ಲಾ ಖಾಲಿ ಖಾಲಿಯಾಗಿದ್ದವು. ಸಿಎಂ ಯಡಿಯೂರಪ್ಪ ಅಧಿಕಾರದ ಗದ್ದುಗೆ ಹಿಡಿದಾಗಿನಿಂದ ತಲೆದೋರಿದ ಆರ್ಥಿಕ ಸಂಕಷ್ಟದಿಂದ ಸುಗಮ ಆಡಳಿತವೇ ದುಸ್ತರವಾಗಿ ಪರಿಣಮಿಸಿತು. ಅಭಿವೃದ್ಧಿ ಕೆಲಸಕ್ಕೆ ಅನುದಾನ ಕೊರತೆ, ಕೇಂದ್ರದಿಂದಲೂ ಅನುದಾನ ಕಡಿತದ ಶಾಕ್ ಮಧ್ಯೆ ಬಿಜೆಪಿ ಸರ್ಕಾರ ಹಿಂಡಿ ಹಿಪ್ಪೆಯಾಯಿತು.

ಕೋವಿಡ್ ನಿರ್ವಹಣೆಗಾಗಿ ಬೇಕಾದ ಅಪಾರ ಅನುದಾನ ಹೊಂದಿಸುವುದು, ಯಶಸ್ವಿಯಾಗಿ, ತ್ವರಿತ ಗತಿಯಲ್ಲಿ, ಕೊರತೆ ಇಲ್ಲದೆ ಲಸಿಕೆ ಅಭಿಯಾನ ನಡೆಸುವುದು ಯಡಿಯೂರಪ್ಪ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತು.

ಅತೃಪ್ತರ ಬಂಡಾಯ: ಹಲವು ಸವಾಲುಗಳ ಮಧ್ಯೆಯೇ ಸರ್ಕಾರವನ್ನು ಕಾಡಿದ ಮತ್ತೊಂದು ಅಡ್ಡಿಯೆಂದರೆ ಅದು ಪಕ್ಷದಲ್ಲಿನ ಆಂತರಿಕ ಭಿನ್ನಮತ. ಬಂಡಾಯದ ಬಲವಾದ ಕೈಗಳು ಹೈಕಮಾಂಡ್ ಬಾಗಿಲನ್ನೂ ತಟ್ಟಿ, ಸಿಎಂ ಕಾರ್ಯವೈಖರಿ ಬಗ್ಗೆ ಗಂಭೀರ ಆರೋಪ ಮಾಡಿದವು.

ಬಸನಗೌಡ ಯತ್ನಾಳ್, ಅರವಿಂದ ಬೆಲ್ಲದ್ ಬಳಿಕ ಸಚಿವ ಸಿ.ಪಿ.ಯೋಗೇಶ್ವರ್, ಎಚ್.ವಿಶ್ವನಾಥ್ ಸೇರಿದಂತೆ ಕೆಲ ಅತೃಪ್ತರು ಸಿಎಂ ವಿರುದ್ಧ ತಿರುಗಿ ಬಿದ್ದಿರುವುದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಭಿನ್ನಮತೀಯ ಚಟುವಟಿಕೆಯನ್ನು ತಣಿಸಲು ಸಿಎಂ ಯಡಿಯೂರಪ್ಪ ನಾನಾ ಕಸರತ್ತು ನಡೆಸುತ್ತಿದ್ದರೂ, ಅದು ಸಾಧ್ಯವಾಗಿಲ್ಲ.

ಮೀಸಲಾತಿ ಕಿಚ್ಚು, ಸಾರಿಗೆ ಮುಷ್ಕರದ ಬಿಸಿ: ಯಡಿಯೂರಪ್ಪ ಸರ್ಕಾರ ತನ್ನ ಎರಡು ವರ್ಷದ ಆಡಳಿತದಲ್ಲಿ ಎರಡು ಪ್ರಬಲ ಸಮುದಾಯಗಳಾದ ಕುರುಬರು, ಪಂಚಮಸಾಲಿ ಲಿಂಗಾಯತ ಸಮುದಾಯದ ಮೀಸಲಾತಿ ಹೋರಾಟದ ಕಿಚ್ಚನ್ನು ಎದುರಿಸಬೇಕಾಯಿತು. ಎರಡೂ ಪ್ರಬಲ ಸಮುದಾಯಗಳು ಮೀಸಲಾತಿಗಾಗಿ ದೊಡ್ಡ ಹೋರಾಟವನ್ನೇ ನಡೆಸಿದವು. ಬೆಂಗಳೂರಿಗೆ ಬೃಹತ್ ಜಾಥಾ ಮಾಡುವ ಮೂಲಕ ಯಡಿಯೂರಪ್ಪ ಸರ್ಕಾರಕ್ಕೆ ಅಗ್ನಿಪರೀಕ್ಷೆಯನ್ನು ತಂದೊಡ್ಡಿತು.

ಮೀಸಲಾತಿಗಾಗಿ ಆಗ್ರಹಿಸಿ ಸಮುದಾಯಗಳ ಸ್ವಾಮಿಗಳೇ ಬೀದಿಗಿಳಿದು ಪಟ್ಟು ಹಿಡಿದಿದ್ದು, ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಬಳಿಕ ಮೀಸಲಾತಿ ನೀಡುವ ಆಶ್ವಾಸನೆ, ಅದಕ್ಕೆ ಪೂರಕವಾದ ಕೆಲ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಮೀಸಲಾತಿ ಕಿಚ್ಚನ್ನು ತಣ್ಣಗಾಗಿಸುವಲ್ಲಿ ಸಿಎಂ ಸಫಲರಾದರು.

ಸಾರಿಗೆ ನೌಕರರ ಮುಷ್ಕರದ ಬಿಸಿ: ಸಾರಿಗೆ ನೌಕರರ ಮುಷ್ಕರ ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಅತಿ ಹೆಚ್ಚು ಕಾಡಿದ ಸವಾಲು. ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರ ನಡೆಸುವ ಮೂಲಕ ಕರ್ನಾಟಕವನ್ನೇ ಸ್ತಬ್ಧವಾಗುವಂತೆ ಮಾಡಿತು. ಸಾರಿಗೆ ನೌಕರರು ವೇತನ ಹೆಚ್ಚಿಸುವಂತೆ ಡಿಸೆಂಬರ್ 2020ರಲ್ಲಿ ನಾಲ್ಕು ದಿನಗಳ ಮುಷ್ಕರ ನಡೆಸಿದ್ದರು. ಬಳಿಕ 2021ರ ಏಪ್ರಿಲ್‍ನಲ್ಲಿ 15 ದಿನಗಳ ಕಾಲ ಬಸ್ ಓಡಿಸದೇ ನೌಕರರು ಮುಷ್ಕರದ ಹಾದಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತು.

ನಾಯಕತ್ವ ಬದಲಾವಣೆಯ ಅನಿಶ್ಚಿತತೆ: ಯಡಿಯೂರಪ್ಪರ ಎರಡು ವರ್ಷದ ಸರ್ಕಾರ ತನ್ನ ಆಡಳಿತದಲ್ಲಿ ಪ್ರಾರಂಭದಿಂದ ಈವರೆಗೆ ನಾಯಕತ್ವ ಬದಲಾವಣೆಯ ಅನಿಶ್ಚಿತತೆಯಿಂದಲೇ ಸಾಗಬೇಕಾಯಿತು. ಬಂಡಾಯ ಚಟುವಟಿಕೆ, ನಾಯಕತ್ವ ಬದಲಾವಣೆಗಾಗಿ ಲಾಬಿ ನಡೆಸುತ್ತಿದ್ದ ವಿರೋಧಿ ಬಣದ ತಂತ್ರಗಾರಿಕೆಗೆ ಪ್ರತಿತಂತ್ರ ಹೇರುವ ಅನಿವಾರ್ಯತೆಯೊಂದಿಗೆ ಆಡಳಿತ ನಡೆಸಬೇಕಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ