ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದರೆ ತೆರವಾಗಲಿರುವ ಹುದ್ದೆಗೆ ಆರು ಮಂದಿಯ ಹೆಸರು ಹೆಸರುಗಳು ಕೇಳಿ ಬರುತ್ತಿವೆ

ಬೆಂಗಳೂರು,ಜು.20-ಒಂದು ವೇಳೆ ವರಿಷ್ಠರ ಸೂಚನೆಯಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದರೆ ತೆರವಾಗಲಿರುವ ಹುದ್ದೆಗೆ ಆರು ಮಂದಿಯ ಹೆಸರುಗಳು ಕೇಳಿ ಬರುತ್ತಿವೆ.

ಈಗಾಗಲೇ ಇವರ ಹಿನ್ನೆಲೆ, ಪಕ್ಷ ನಿಷ್ಠೆ, ಆಡಳಿತದ ಅನುಭವ ಸೇರಿದಂತೆ ಪ್ರತಿಯೊಂದನ್ನೂ ತಮ್ಮದೇ ಮೂಲದಿಂದ ಸಂಗ್ರಹಣೆ ಮಾಡಿರುವ ವರಿಷ್ಠರು ಅಚ್ಚರಿಯ ಅಭ್ಯರ್ಥಿಯನ್ನೇ ಮುಖ್ಯಮಂತ್ರಿ ಕುರ್ಚಿ ಮೇಲೆ ಕೂರಿಸಲು ಚಿಂತನ-ಮಂಥನ ನಡೆಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಉತ್ತರಾಧಿಕಾರಿಯಾಗಿ ಯಾರನ್ನು ನೇಮಿಸಬಹುದು ಎಂಬ ಚರ್ಚೆ ಜೋರಾಗಿದೆ. ಸಿಎಂ ಬದಲಾವಣೆ ಜೊತೆಗೆ ಸಂಪುಟ ಪುನಾರಚನೆಗೂ ಹೈಕಮಾಂಡ್ ಚಿಂತನೆ ನಡೆಸಿದೆ. ವಲಸಿಗ ಸಚಿವರೂ ಸೇರಿದಂತೆ 10ರಿಂದ 12 ಸಚಿವರನ್ನು ಕೈಬಿಡಲು ಚಿಂತಿಸಿದೆ.

ಹೈಕಮಾಂಡ್ ಸೂಚನೆ ಮೇರೆಗೆ ಜುಲೈ 26ರಿಂದ ಆಗಸ್ಟ್ 15ರೊಳಗೆ ಯಡಿಯೂರಪ್ಪ ರಾಜೀನಾಮೆ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ. ಜುಲೈ 26ಕ್ಕೆ ಅಂದರೆ ಮುಂದಿನ ಸೋಮವಾರ ರಾಜ್ಯ ಸರ್ಕಾರ 2 ವರ್ಷ ಪೂರೈಸುತ್ತಿದ್ದು, ಅಂದೇ ಸಿಎಂ ಯಡಿಯೂರಪ್ಪ ಭಾಷಣ ಮಾಡಲಿದ್ದಾರೆ. ಇದು ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರ ಕೊನೆಯ ಭಾಷಣವೂ ಆಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಮೊದಲು ಸಿಎಂ ಬದಲಾವಣೆ ಎಂದ ಕೂಡಲೇ ವಾಗ್ದಾಳಿಗೆ ನಿಲ್ಲುತ್ತಿದ್ದ ಯಡಿಯೂರಪ್ಪ ಬೆಂಬಲಿಗ ಶಾಸಕರು ಈಗ ಹೆಚ್ಚು ಕಡಿಮೆ ಮೌನಕ್ಕೆ ಜಾರಿದ್ದಾರೆ.

ಅವರ ವಿರೋಧಿ ಪಾಳಯ ಕೂಡ ಹೆಚ್ಚು ಸದ್ದು ಮಾಡುತ್ತಿಲ್ಲ. ಗುರುವಾರ ಸಂಪುಟ ಸಭೆ ನಡೆಸಲಿದ್ದಾರೆ. ಶುಕ್ರವಾರ ಶಿವಮೊಗ್ಗ ಪ್ರವಾಸ ಕೈಗೊಳ್ಳುತ್ತಿದ್ದಾರೆ.

ಜುಲೈ 26ಕ್ಕೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನೂ ಯಡಿಯೂರಪ್ಪ ಕರೆದಿದ್ದು, ಶಾಸಕರು, ಮುಖಂಡರನ್ನು ಉದ್ದೇಶಿಸಿ ಅವರು ಭಾಷಣ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಶಾಸಕರು, ಅಧಿಕಾರಿಗಳ ಜೊತೆ ಪೋಟೋ ಸೆಷನ್ ಸಮಯ ನಿಗದಿ ಮಾಡುವ ಸಾಧ್ಯತೆಯಿದೆ. ಪೋಟೋ ಸೆಷನ್ ಬಳಿಕ ರಾಜ್ಯಪಾಲರ ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ. ಆದರೆ ಆಗಸ್ಟ್ 15ರವರೆಗೂ ಹಂಗಾಮಿ ಸಿಎಂ ಆಗಿ ಮುಂದುವರೆಯಬಹುದು ಎನ್ನಲಾಗುತ್ತಿದೆ.

ರೇಸ್‍ನಲ್ಲಿ ಯಾರ್ಯಾರಿದ್ದಾರೆ?:
ಪ್ರಹ್ಲಾದ್ ಜೋಷಿ:
ಇವರು ಹುಬ್ಬಳ್ಳಿ-ಧಾರವಾಡ ಸಂಸದರಾಗಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿದ್ದಾರೆ. ಅನುಭವಿ ರಾಜಕಾರಣಿ, ಸಂಘ ಪರಿವಾರದ ಕಟ್ಟಾಳು, ಪಕ್ಷ ನಿಷ್ಠ, ಮೋದಿ ಆಪ್ತ, ಚಾಣಾಕ್ಷ ಆಡಳಿತಗಾರ, ಸಂಘಟನಾ ಚತುರ, ಬ್ರಾಹ್ಮಣ ಸಮುದಾಯದ ಮುಖಂಡರಾಗಿದ್ದಾರೆ.

ವಿಶ್ವೇಶ್ವರ ಹೆಗಡೆ ಕಾಗೇರಿ:
ಶಿರಸಿ ಶಾಸಕರಾಗಿರುವ ಇವರು ಹಾಲಿ ವಿಧಾನಸಭಾ ಸ್ಪೀಕರ್ ಆಗಿದ್ದಾರೆ. ಆರ್‍ಎಸ್‍ಎಸ್ ಮತ್ತು ಪಕ್ಷ ನಿಷ್ಠ, ಅನುಭವಿ ರಾಜಕಾರಣಿ, ಭ್ರಷ್ಟಾಚಾರದ ಕೆಸರು ಅಂಟಿಲ್ಲ. ಬ್ರಾಹ್ಮಣ ಸಮುದಾಯದ ಮುಖಂಡರಾಗಿದ್ದಾರೆ.

ಸಿ.ಟಿ.ರವಿ:
ಚಿಕ್ಕಮಗಳೂರು ಶಾಸಕರಾಗಿರುವ ಇವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಯುವ ಮುಖಂಡ, ಹಿಂದುತ್ವದ ಪ್ರತಿಪಾದಕ, ಸಂಘ ಮತ್ತು ಪಕ್ಷ ನಿಷ್ಠ, ಸಂಘಟನಾ ಚತುರ, ಹೈಕಮಾಂಡ್ ಕಣ್ಣಿಗೆ ಬಿದ್ದಿರುವ ನಾಯಕ, ಇತ್ತೀಚಿಗೆ ತಮಿಳುನಾಡು ಎಲೆಕ್ಷನ್ ಹೊಣೆಯನ್ನು ಹೊತ್ತಿದ್ದರು.

ಅರವಿಂದ್ ಬೆಲ್ಲದ್:
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರಾಗಿರುವ ಬೆಲ್ಲದ್ ಬಿಜೆಪಿ ಯುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಹೈಕಮಾಂಡ್ ಪಾಲಿನ ನೀಲಿಗಣ್ಣಿನ ಹುಡುಗ, ಪಂಚಮಸಾಲಿ ಸಮುದಾಯದ ಮುಖಂಡ, ಕ್ಲೀನ್ ಹ್ಯಾಂಡ್, ಆರ್‍ಎಸ್‍ಎಸ್ ಮತ್ತು ಪಕ್ಷದೆಡೆಗಿನ ನಿಷ್ಠೆ ಹೊಂದಿದ್ದಾರೆ.

ಮುರುಗೇಶ್ ನಿರಾಣಿ:
ಬೀಳಗಿ ಶಾಸಕರಾಗಿರುವ ಇವರು ಸದ್ಯ ಗಣಿ ಮತ್ತು ಭೂ ವಿಜ್ಞಾನ ಖಾತೆಯ ಸಚಿವರಾಗಿದ್ದಾರೆ. ಉದ್ಯಮಿ, ಪಂಚಮಸಾಲಿ ಸಮುದಾಯದ ಪ್ರಮುಖ ಮುಖಂಡ, ಹೈಕಮಾಂಡ್ ನಾಯಕರೊಂದಿಗೆ ನಂಟು, ಅಮಿತ್ ಶಾ ಜೊತೆಗೆ ಒಡನಾಟ, ಆಡಳಿತದ ಅನುಭವವನ್ನು ಹೊಂದಿದ್ದಾರೆ.

ಅಶ್ವಥ್ ನಾರಾಯಣ:
ಮಲ್ಲೇಶ್ವರಂ ಶಾಸಕರಾಗಿರುವ ಇವರು ಡಿಸಿಎಂ ಆಗಿದ್ದಾರೆ. ಒಕ್ಕಲಿಗ ಸಮುದಾಯದ ಮುಖಂಡ, ಉತ್ತರಾಧಿಕಾರಿ ಹುಡುಕಾಟ ವೇಳೆ ಕಣ್ಣಿಗೆ ಬಿದ್ದ ಯುವ ನಾಯಕ. ಸಾಮಥ್ರ್ಯ ಪರೀಕ್ಷೆ ನಡೆಸಲು ಡಿಸಿಎಂ ಹುದ್ದೆ ನೀಡಲಾಗಿದೆ. ಕೇರಳ ವಿಧಾನಸಭಾ ಚುನಾವಣೆಯ ಉಸ್ತುವಾರಿಯನ್ನು ಹೊತ್ತಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ