ಬ್ರಿಟಿಷರು ಭಾರತಕ್ಕೆ ಬಂದು ದೇಶದ ಸಂಪತ್ತನ್ನು ಲೂಟಿ ಮಾಡಿದ್ದರು, ಈಗ ಬಿಜೆಪಿ ಅಧಿಕಾರದಲ್ಲಿ ಸಂಪತ್ತು ಲೂಟಿಯಾಗುವ ಜೊತೆಗೆ ದೇಶದಲ್ಲಿ ಬಡತನ ಹೆಚ್ಚಾಗುತ್ತಿದೆ: ಸಿದ್ದರಾಮಯ್ಯ

ಬೆಂಗಳೂರು, ಆ.9- ಸ್ವತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಭಾರತಕ್ಕೆ ಬಂದು ದೇಶದ ಸಂಪತ್ತನ್ನು ಲೂಟಿ ಮಾಡಿದ್ದರು. ಈಗ ಬಿಜೆಪಿ ಅಧಿಕಾರವಧಿಯಲ್ಲಿ ಸಂಪತ್ತು ಲೂಟಿಯಾಗುವ ಜೊತೆಗೆ ದೇಶದಲ್ಲಿ ಬಡತನ ಹೆಚ್ಚಾಗುತ್ತಿದೆ ಎಂದು ವಿಧನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಕ್ವಿಟ್ ಚಳವಳಿ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಲೋಕಸಭೆ ಚುನಾವಣೆಯಲ್ಲಿ ಭಾಷಣ ಮಾಡಿ, ಕಾಂಗ್ರೆಸ್‍ಗೆ 60 ವರ್ಷ ಅಧಿಕಾರ ನೀಡಿದ್ದೀರಾ, ನಮಗೆ 60 ತಿಂಗಳು ಕೊಡಿ ದೇಶದ ಚಿತ್ರಣವನ್ನೇ ಬದಲಾವಣೆ ಮಾಡುತ್ತೇವೆ ಎಂದಿದ್ದರು. ಜನ ಅಧಿಕಾರ ಕೊಟ್ಟರು, ಅವರು ಹೇಳಿದಂತೆ ಬದಲಾವಣೆ ಆಗಿದೆ. ಆದರೆ ಅದು ಅಭಿವೃದ್ಧಿ ಪರವಾಗಿಲ್ಲ ಎಂದರು.

ದೇಶದಲ್ಲಿ ಶೇ.23ರಷ್ಟು ಜನ ಬಡತನ ರೇಖೆಗಿಂತ ಕೆಳಗಿನ ಸ್ಥಿತಿಗೆ ತಲುಪಿದ್ದಾರೆ. ಜಿಡಿಪಿ ಶೇ.-7.7 ಇಳಿದಿದೆ. 12 ಕೋಟಿ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಜನಸಾಮಾನ್ಯರ ಬದುಕು ಹೇಳಲಿಕ್ಕೆ ಆಗದಷ್ಟು ಕೆಟ್ಟ ಪರಿಸ್ಥಿತಿಗೆ ತಲುಪಿದೆ. ಜೀವನ ನಿರ್ವಹಣೆಯ ವೆಚ್ಚ ಎರಡು ಪಟ್ಟು ಹೆಚ್ಚಾಗಿದೆ. ಕೆಲಸ ಇಲ್ಲ, ಆದಾಯ ಇಲ್ಲದ ಜನ ಸಾಮಾನ್ಯರು ಹೇಗೆ ಬದುಕಬೇಕು ಎಂದು ಪ್ರಶ್ನಿಸಿದರು.

ಸ್ವತಂತ್ರ ಭಾರತದಲ್ಲಿ ನರೇಂದ್ರ ಮೋದಿ ಅವರಷ್ಟು ಸುಳ್ಳು ಹೇಳಿದ ಪ್ರಧಾನಿ ಮತ್ತೊಬ್ಬರಿಲ್ಲ. ಸಾರ್ವಕರ್ ಸೇರಿದಂತೆ ಬಿಜೆಪಿಯ ಯಾರು ಕೂಡ ಸ್ವತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲಿಲ್ಲ, ಬಲಿದಾನ ಮಾಡಲಿಲ್ಲ. ಕಾಂಗ್ರೆಸಿಗರು ಮಾತ್ರ ಸ್ವತಂತ್ರ್ಯ ಹೋರಾಟ ಮಾಡಿ, ಬಲಿದಾನವಾಗಿದ್ದಾರೆ ಎಂದರು.

ಬ್ರಿಷರ ಆಡಳಿತ ಅವಧಿಯಲ್ಲೂ ಆರ್‍ಎಸ್‍ಎಸ್‍ವರೆ ದಿವಾನರು ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಅಧಿಕಾರ ಅನುಭವಿಸಿದರು. ಈಗಲೂ ಆರ್‍ಎಸ್‍ಎಸ್‍ನವರೆ ಬಿಜೆಪಿಯ ಮೂಲಕ ಅಧಿಕಾರ ಅನುಭವಿಸುತ್ತಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ಹೊಡೆದು ಛಿದ್ರ ಮಾಡಿದ್ದಾರೆ. ಸೌಹಾರ್ದತೆ ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು.

ಬ್ರಿಟಿಷರ ಅವಧಿಯಲ್ಲಿ ದೇಶದ ಸಂಪತ್ತು ಕೊಳ್ಳೆ ಹೊಡೆಯಲಾಗಿತ್ತು, ಈಗ ಬಿಜೆಪಿ ಆಡಳಿತಾವಧಿಯಲ್ಲಿ ದೇಶದಲ್ಲಿ ಬಡತನ ಹೆಚ್ಚಾಗಿದೆ. ಕರ್ನಾಟಕದಲ್ಲಿ ಬಿಜೆಪಿಯಿಂದ ಯಡಿಯೂರಪ್ಪ ಅವರ ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. ಹೊಸ ಮುಖ್ಯಮಂತ್ರಿಯಿಂದ ಹೆಚ್ಚಿನದೇನನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಬೊಮ್ಮಾಯಿ, ಯಡಿಯೂರಪ್ಪ ಅವರ ನೆರಳಿದ್ದಂತೆ ಎಂದು ಹೇಳಿದರು.

ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್, ಮೋದಿ ಅವರ ಸರ್ಕಾರದಿಂದ ಸಂವಿಧಾನಾತ್ಮಕ ಸಂಸ್ಥೆಗಳು ದುರುಪಯೋಗ ನಡೆಯುತ್ತಿದೆ. ಹಿಂದೆ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಹೋರಾಟ ನಡೆಸಿದಂತೆ, ಈಗ ಮೋದಿ ಅವರೇ ಅಧಿಕಾರ ಬಿಟ್ಟು ತೊಲಗಿ ಎಂದು ಹೋರಾಟ ನಡೆಸಬೇಕಿದೆ.

ಬಿಟ್ರಿಷರು ಈಸ್ಟ್ ಇಂಡಿಯಾ ಎಂಬ ಒಂದು ಕಂಪೆನಿ ಮೂಲಕ ಭಾರತಕ್ಕೆ ಬಂದು ಸ್ವತಂತ್ರ ಕಸಿದುಕೊಂಡರು. ಈಗ ಮೋದಿ ಅವರ ಸ್ವೇಹಿತರಾದ ಅದಾನಿ, ಅಂಬಾನಿ ಅವರ ಎರಡು ಕಂಪೆನಿಳಿವೆ. ಅವುಗಳಿಗೆ ಎಲ್ಲವನ್ನೂ ಮಾರಾಟ ಮಾಡಲಾಗುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸರ್ಕಾರಿ ಸ್ವಾಮ್ಯದ ಎಲ್ಲಾ ಕೈಗಾರಿಕೆ ಹಾಗೂ ಉದ್ದಿಮೆಗಳನ್ನು ಮಾರಾಟ ಮಾಡಲಾಗುತ್ತಿದೆ. ಕಾಂಗ್ರೆಸ್ 70 ವರ್ಷದಲ್ಲಿ ಹಲವು ಸಂಸ್ಥೆಗಳ ಮೂಲಕ ಬಲಿಷ್ಠ ಭಾರತ ನಿರ್ಮಿಸಿತ್ತು. ಮೋದಿ ಅವರು ಏಳು ವರ್ಷದಲ್ಲಿ ಎಲ್ಲವನ್ನೂ ಮಾರಾಟ ಮಾಡಿ ದೇಶದ ಭವಿಷ್ಯವನ್ನೇ ಹಾಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮಾಜಿ ಸಚಿವೆ ಮೊಟಮ್ಮ ಮಾತನಾಡಿ, ಬ್ರಿಟಿಷರಿಗಿಂತ ಹೆಚ್ಚಾಗಿ ಬಿಜೆಪಿಯವರಿಂದ ದೇಶದ ಜನರಿಗೆ ತೊಂದರೆಯಾಗುತ್ತಿದೆ. ಕಾಂಗ್ರೆಸ್‍ನವರು ಬ್ರಿಟಿಷರ ವಿರುದ್ಧ ಹೋರಾಡಿದಂತೆ ಬಿಜೆಪಿಯವರ ವಿರುದ್ಧವೂ ಹೋರಾಟ ನಡೆಸಬೇಕಿದೆ. ಸ್ವತಂತ್ರಕ್ಕಾಗಿ ಹಲವಾರು ಮಂದಿ ಪ್ರಾಣ ತ್ಯಾಗ ಮಾಡಿದ್ದಾರೆ, ಅವರ ಶ್ರಮದ ಬೆವರಿನಿಂದಾಗ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ನಾವು ಅದನ್ನು ಗೌರವಿಸಬೇಕು, ಸ್ವತಂತ್ರ್ಯ ಭಾರತದಲ್ಲಿ ಜನ ನೆಮ್ಮದಿಯಾಗಿ ಬದಕಬೇಕಾದರೆ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕಿದೆ. ಅದಕ್ಕಾಗಿ ಕಾಂಗ್ರೆಸಿಗರು ಕ್ವಿಟ್ ಇಂಡಿಯಾ ಮಾದರಿಯಲ್ಲಿ ಹೋರಾಟ ನಡೆಸಬೇಕಿದೆ ಎಂದರು.

ರಾಜ್ಯಸಭೆಯ ಮಾಜಿ ಸದಸ್ಯ ಎಚ್.ಹನುಮಂತಪ್ಪ ಮಾತನಾಡಿ, ಕ್ವಿಟ್ ಇಂಡಿಯಾ ಚಳವಳಿಯ ಆರಂಭ ಹಾಗೂ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಸಂಪೂರ್ಣ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಅದರ ವಿರುದ್ಧ ಕಾಂಗ್ರೆಸ್ ಚಳವಳಿ ಮಾಡಿ ರಾಷ್ಟ್ರಪತಿ ಅವರಿಗೆ ದೂರು ನೀಡಬೇಕು ಎಂದು ಸಲಹೆ ನೀಡಿದರು.

ಸಂವಿಧಾನದಲ್ಲಿ ದೋಷವಿಲ್ಲ, ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಲೋಪಗಳಿವೆ. ಅಂಬೇಡ್ಕರ್ ಸಂವಿಧಾನ ಬರೆದಿದ್ದಾರೆ ಎಂಬ ಕಾರಣಕ್ಕೆ ಅದನ್ನು ಬದಲಾಯಿಸಲು ಈ ಹಿಂದೆ ವಾಯಪೇಯಿ ಅವರ ಸರ್ಕಾರ ನ್ಯಾಯಮೂರ್ತಿ ವೆಂಕಟಚಲಯ್ಯ ಅವರ ನೇತೃತ್ವದಲ್ಲಿ ಮೂವರ ಸಮಿತಿ ರಚಿಸಿತ್ತು. ಆದರೆ ಆ ಸಮಿತಿ ಅವಧಿ ಮುಂದುವರೆಯಲಿಲ್ಲ. ರಾಮಾಯಣವನ್ನು ವಾಲ್ಮಿಕ ಬರೆದಿದ್ದಾರೆ ಎಂಬ ಕಾರಣಕ್ಕೆ ಅದನ್ನು ಪೂಜೆ ಮಾಡಲು ಒಲ್ಲದ ಮೇಲ್ವರ್ಗಗಳು ತುಳಸಿದಾಸರಿಂದ ರಾಮಾಯಣವನ್ನು ಬರೆಸಿ ಪೂಜೆ ಮಾಡುತ್ತಿದ್ದಾರೆ. ನಮ್ಮಲ್ಲಿ ಜಾತಿ ವ್ಯವಸ್ಥೆ ಭಾರಿ ಕೆಟ್ಟದಾಗಿ ಬೇರೋರಿದೆ ಎಂದು ಅಸಮದಾನ ವ್ಯಕ್ತ ಪಡಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ