ಹವಾಮಾನ ಮುನ್ಸೂಚನೆಯಂತೆ ಲಘುವಾಗಿ ಪರಿಗಣಿಸದಿರಿ: ಕೇಂದ್ರ 3ನೇ ಅಲೆ ಗಂಭೀರವಾಗಿ ಪರಿಗಣಿಸಿ

ಹೊಸದಿಲ್ಲಿ: ಕೊರೋನಾ 3ನೇ ಅಲೆಯ ಮುನ್ಸೂಚನೆಯನ್ನು ಹವಾಮಾನ ಮುನ್ಸೂಚನೆಯಂತೆ ಲಘುವಾಗಿಯಲ್ಲದೆ, ಗಂಭೀರವಾಗಿ ಪರಿಗಣಿಸಬೇಕೆಂದು ಕೇಂದ್ರ ಸರ್ಕಾರ ಮಂಗಳವಾರ ಎಚ್ಚರಿಕೆ ನೀಡಿದೆ.

ಕೊರೋನಾ ನಿಯಮಗಳನ್ನು ಅನುಸರಿಸುವ ಮೂಲಕ ಭವಿಷ್ಯದಲ್ಲಿ ರೋಗದ ಯಾವುದೇ ಅಲೆಯನ್ನು ತಡೆಯಬಹುದು ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ಜನರು ವಿಫಲರಾಗಿದ್ದಾರೆ. ಕೊರೋನಾದ 3ನೇ ಅಲೆಯನ್ನು ಹವಾಮಾನ ಮುನ್ಸೂಚನೆಯಂತೆ ಲಘುವಾಗಿ ಪರಿಗಣಿಸುವ ಬದಲು ಅದರ ಗಂಭೀರತೆ ಅರಿತು ಪ್ರತಿಯೊಬ್ಬರು ಜವಾಬ್ದಾರಿಯುತವಾಗಿ ನಿಯಮಗಳನ್ನು ಪಾಲಿಸಬೇಕೆಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.

ಜನರು ಕೊರೋನಾ ನಿಯಮಗಳನ್ನು ಉಲ್ಲಂಘಿಸುತ್ತಿದ್ದರೆ ಇದುವರೆಗೆ ಲಾಕ್‍ಡೌನ್ ಸೇರಿ ಇತರೆ ನಿರ್ಬಂಧಗಳ ಮೂಲಕ ಸಾಂಕ್ರಾಮಿಕ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿರುವುದು ವ್ಯರ್ಥವಾಗುತ್ತದೆ. ರಾಜ್ಯಗಳು ಲಾಕ್‍ಡೌನ್ ಸಡಿಲ ಗೊಳಿಸುತ್ತಿದ್ದಂತೆಯೇ ಸಾವಿರಾರು ಜನರು ಗಿರಿಧಾಮಗಳಿಗೆ ಭೇಟಿ ನೀಡುತ್ತಿರುವುದರಿಂದ ನಿಯಮಗಳ ಉಲ್ಲಂಘನೆಯಾಗುತ್ತಿದೆ ಎಂಬ ವರದಿಗಳ ಹಿನ್ನೆಲೆ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ತಿಳಿಸಿದ್ದಾರೆ.

ಕೇರಳ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಒಡಿಸಾದಿಂದ ಜುಲೈನಲ್ಲಿ ಶೇ. 73.4 ಕೊರೋನಾ ಹೊಸ ಪ್ರಕರಣಗಳು ವರದಿಯಾಗಿವೆ. ದೇಶಾದ್ಯಂತ 55 ಜಿಲ್ಲೆಗಳಲ್ಲಿ ಸಕಾರಾತ್ಮಕ ದರ ಶೇ. 10ಕ್ಕಿಂತಲೂ ಹೆಚ್ಚಿದೆ ಎಂದಿದ್ದಾರೆ.

ಜಗತ್ತಿನಾದ್ಯಂತ ಕೊರೋನಾ 3ನೇ ಅಲೆ ವರದಿಯಾಗುತ್ತಿರುವುದರಿಂದ ಜನರು ನಿಯಮಗಳನ್ನು ಪಾಲಿಸುವ ಮೂಲಕ ಭಾರತದಲ್ಲಿ ಇದು ಸಂಭವಿಸದಂತೆ ತಡೆಯುವ ಪ್ರಯತ್ನಗಳನ್ನು ಮಾಡಬೇಕೆಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ. ಪೌಲ್ ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ