ಬೆಂಗಳೂರು: ವಿಧಾನಪರಿಷತ್ತಿನಲ್ಲಿ ಡಿ.15ರಂದು ನಡೆದಿದ್ದ ಅಹಿತಕರ ಘಟನೆ ಕುರಿತಂತೆ ಜೆಡಿಎಸ್ನ ಮರಿತಿಬ್ಬೇಗೌಡ ನೇತೃತ್ವದ ಸದನ ಸಮಿತಿಯು ಸಭಾಪತಿ ಪ್ರತಾಪಚಂದ್ರಶೆಟ್ಟಿ ಅವರಿಗೆ ಮಧ್ಯಂತರ ವರದಿ ಸಲ್ಲಿಸಿದೆ.
ಅಂದು ನಡೆದ ಅಹಿತಕರ ಘಟನೆ ಕುರಿತ ಮಧ್ಯಂತರ ವರದಿಯೇ 84 ಪುಟಗಳಿದ್ದು, ಅಂತಿಮ ವರದಿ ಸಲ್ಲಿಕೆಗೆ ಇನ್ನಷ್ಟು ಕಾಲಾವಕಾಶ ಕೋರಲಾಗಿದೆ.
ವರದಿ ಸಲ್ಲಿಕೆ ಬಳಿಕ ಮಾತನಾಡಿದ ಸಮಿತಿ ಅಧ್ಯಕ್ಷ ಮರಿತಿಬ್ಬೇಗೌಡ, ಸಮಿತಿಗೆ 20 ದಿನಗಳ ಕಾಲಾವಕಾಶ ನೀಡಲಾಗಿತ್ತು. ಈವರೆಗೆ ಸಮಿತಿ ಒಟ್ಟು 5 ಸಭೆಗಳನ್ನು ನಡೆಸಿದ್ದು, ಮೂರು ತಿಂಗಳ ಸಮಯಾವಕಾಶ ಬೇಕಾಗಿದೆ. ಸಮಿತಿಯ ಮೊದಲ ನಾಲ್ಕು ಸಭೆಗಳ ಮಾಹಿತಿಯನ್ನೊಳಗೊಂಡ ವರದಿ ಹಾಗೂ ಸಾಕ್ಷ್ಯಾಧಾರಗಳನ್ನು ಸಿಡಿ ರೂಪದಲ್ಲಿ ಮಧ್ಯಂತರ ವರದಿಯಲ್ಲಿ ಸಲ್ಲಿಸಲಾಗಿದೆ ಎಂದರು.
ಡೆತ್ನೋಟ್ಗಾಗಿ ಪತ್ರ:
ಘಟನೆ ಸಂದರ್ಭದಲ್ಲಿ ಮೇಲ್ಮನೆಯಲ್ಲಿದ್ದ ಪರಿಷತ್ ಕಾರ್ಯದರ್ಶಿ, ಮಾರ್ಷಲ್ಸï ಮತ್ತು ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್ ಅವರಿಗೆ ನೋಟಿಸ್ ನೀಡಿ ಪ್ರಾಥಮಿಕ ಹೇಳಿಕೆ ಪಡೆಯಲಾಗಿದೆ. ಅಂದಿನ ಅವೇಶನದಲ್ಲಿ ಹಾಜರಿದ್ದು ಅವೇಶನದ ಕಲಾಪಗಳನ್ನು ಚಿತ್ರೀಕರಿಸಿರುವ ಖಾಸಗಿ ಸುದ್ದಿ ವಾಹಿನಿಗಳು, ವಿಧಾನ ಪರಿಷತ್ನ ವೆಬ್ಕಾಸ್ಟ್, ಲೋಕೋಪಯೋಗಿ ಇಲಾಖೆ ನಿರ್ವಹಿಸುವ ಸಿಸಿಟಿವಿ ಕ್ಯಾಮೆರಾ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಘಟನೆ ಕುರಿತು ಮಾಹಿತಿ ಪಡೆಯುವ ಅಗತ್ಯವಿದೆ ಎಂದು ಸಮಿತಿ ತೀರ್ಮಾನಿಸಿದೆ.
ಉಪಸಭಾಪತಿ ಧರ್ಮೇಗೌಡರ ಡೆತ್ನೋಟ್ ಒದಗಿಸುವಂತೆ ಗೃಹ ಇಲಾಖೆ ಕಾರ್ಯದರ್ಶಿಗೆ ಸಹ ಪತ್ರ ಬರೆಯಲಾಗಿದೆ. ಹೀಗಾಗಿ ವಿಚಾರಣೆಗೆ ಹೆಚ್ಚಿನ ಕಾಲಾವಕಾಶ ಬೇಕಿದೆ ಎಂದು ಮರಿತಿಬ್ಬೇಗೌಡ ಹೇಳಿದರು.
ಈ ಸಂದರ್ಭದಲ್ಲಿ ಸದನ ಸಮಿತಿಯ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಹಾಗೂ ಆರ್.ಬಿ.ತಿಮ್ಮಾಪುರ ಅವರು ಉಪಸ್ಥಿತರಿದ್ದರು.