ರೈತರ ಮಕ್ಕಳಾಗಲು ದಳ, ಕಾಂಗ್ರೆಸ್ ತೀವ್ರ ಪೈಪೊಟಿ

ಬೆಂಗಳೂರು: ಮಣ್ಣಿನ ಮಕ್ಕಳಾಗಲು ರಾಜಕೀಯ ಪಕ್ಷಗಳ ನಡುವೆ ಪೈಪೊಟಿ ಶುರುವಾಗಿದ್ದು, ಕೃಷಿ ಕಾಯಿದೆ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡುವ ಮೂಲಕ ನಾವೇ ಮಣ್ಣಿನ ಮಕ್ಕಳು ಎಂದು ಬಿಂಬಿಸಿಕೊಳ್ಳಲು ಕಾಂಗ್ರೆಸ್, ಜೆಡಿಎಸ್ ಮುಂದಾಗಿವೆ.
ರೈತರ ಹೋರಾಟಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದು ಕಾಂಗ್ರೆಸ್, ಜೆಡಿಎಸ್ ನಡುವೆ ತಿಕ್ಕಾಟ ಆರಂಭವಾಗಿದ್ದು, ಗುರುವಾರ ಕಾಂಗ್ರೆಸ್ ಏಕಾಏಕಿ ಅಖಾಡಕ್ಕೆ ಧುಮುಕಿದೆ. ಇದನ್ನು ಗಮನಿಸಿದ ಜೆಡಿಎಸ್‍ನ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಾವು ಮಣ್ಣಿನ ಮಕ್ಕಳು, ರೈತರ ಮಕ್ಕಳು ಎಂದು ಜೆಡಿಎಸ್ ರೈತರ ಪಕ್ಷ ಎಂದು ತಿಳಿಸಿದ್ದಾರೆ.
ಭೂ ಸುಧಾರಣೆ ತಿದ್ದುಪಡಿ ಕಾಯಿದೆಗೆ ರಾಜ್ಯಪಾಲರು ಯಾವುದೇ ಕಾರಣಕ್ಕೂ ಒಪ್ಪಿಗೆ ಸೂಚಿಸಿ ಸಹಿ ಹಾಕಬಾರದೆಂದು ಒತ್ತಾಯಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆನಿಲ್ದಾಣದಿಂದ ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಜಮಾಯಿಸಿದ ಸಾವಿರಾರರು ರೈತರು, ರಾಜಭವನ ಮುತ್ತಿಗೆ ಚಲೋ ನಡೆಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು, ಸ್ವಾತಂತ್ರ್ಯ ಉದ್ಯಾನದಲ್ಲಿಯೇ ಹೋರಾಟಗಾರರನ್ನು ತಡೆದರು. ಸ್ಥಳಕ್ಕೆ ಭೇಟಿ ನೀಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ತಂಡ ಪಕ್ಷದ ಬೆಂಬಲ ಸೂಚಿಸಿ ಕಾಯಿದೆಯ ಪ್ರತಿಗಳನ್ನು ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಅವರು, ಭೂ ಸುಧಾರಣೆ ಮಸೂದೆಯಿಂದ ರೈತರಿಗೆ ಅನಾನುಕೂಲವಾಗಲಿದೆ ಎಂದು ಮಸೂದೆಗೆ ಕಾಂಗ್ರೆಸ್ ಬೆಂಬಲ ಸೂಚಿಸಲಿಲ್ಲ. ಆದರೆ, ಪರಿಷತ್‍ನಲ್ಲಿ ಈ ಮಸೂದೆಗೆ ಜೆಡಿಎಸ್ ಬೆಂಬಲ ಸೂಚಿಸಿದ್ದು, ಹೆಸರಿಗೆ ಮಣ್ಣಿನ ಮಕ್ಕಳು ಎನ್ನುತ್ತಿದ್ದಾರೆ ಎಂದು ಆರೋಪಿಸಿದರು.
ನಾವು ರಾಜಕಾರಣ ಮಾಡಲು ಪ್ರತಿಭಟನೆಗೆ ಭಾಗವಹಿಸಿಲ್ಲ. ಬಡವರು, ಹಿಂದುಳಿದವರು, ಕೂಲಿಕಾರ್ಮಿಕರು, ರೈತರು ಹಾಗೂ ಕಾರ್ಮಿಕರಿಗೆ ತೊಂದರೆಯಾದರೆ ಕಾಂಗ್ರೆಸ್ ಸುಮ್ಮನಿರುವುದಿಲ್ಲ. ಗೋಹತ್ಯೆ ಮಸೂದೆಯನ್ನು ತರಾತುರಿಯಲ್ಲಿ ಮಂಡಿಸಲಾಗಿದೆ. ಚರ್ಚೆಗೆ ಅವಕಾಶವನ್ನೇ ಕೊಟ್ಟಿಲ್ಲ ಎಂದು ಆರೋಪಿಸಿದರು.
ಇತ್ತ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್‍ಗೆ ಬಿಜೆಪಿ ವಿರುದ್ಧ ಹೋರಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಜೆಡಿಎಸ್ ವಿರುದ್ಧ ತನ್ನ ಹೋರಾಟವನ್ನು ರೂಪಿಸುತ್ತಿದೆ. ರೈತ ನಾಯಕರು ಎನಿಸಿಕೊಂಡ ಕೆಲವರ ಹಿಂದೆ ಕಾಂಗ್ರೆಸ್ ಈಗ ಅಡಗಿ ಕುಳಿತಿದೆ. ಅವರ ಮೂಲಕ ರಾಜಕೀಯ ಹೇಳಿಕೆಗಳನ್ನು ಕೊಡಿಸುತ್ತಿದೆ. ಈ ಮೂಲಕ ಕಾಂಗ್ರೆಸ್ ರೈತ ಸಂಘಟನೆಗಳನ್ನು ಒಡೆಯುವ ಕೆಲಸಕ್ಕೆ ಕೈಹಾಕಿದೆ ಎಂದಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ