ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ರಾಷ್ಟ್ರಪತಿ ಮೂಡಿಸಲು ಜಯಂತ್ಯುತ್ಸವ

ಬೆಂಗಳೂರು: ನಾಡಿನಲ್ಲಿ ಜನಿಸಿದ ಎಲ್ಲ ಮಹಾನುಭಾವರ ಜಯಂತಿ ಆಚರಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಗುರುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಜನರಲ್ಲಿ ಸಮಾಜಪತಿ , ರಾಷ್ಟ್ರಪತಿ ಮೂಡಿಸುವ ದೃಷ್ಟಿಯಿಂದ ಜಯಂತಿಗಳ ಆಚರಣೆ ಅಗತ್ಯವಾಗಿದೆ. ಶರಣರಿಂದಲೇ ಸಮಾಜದಲ್ಲಿ ಪರಿವರ್ತನೆಯಾಗಿದೆ. ಶರಣರ ತತ್ತ್ವ, ಸಿದ್ಧಾಂತ ಪರಿಚಯಿಸಿದ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ನಾಡಿನ ಎಲ್ಲ ಮಹಾನುಭಾವರ ಜಯಂತ್ಯುತ್ಸವ ಆಚರಿಸಲಾಗುವುದು ಎಂದು ತಿಳಿಸಿದರು.
ಕಲ್ಯಾಣದಲ್ಲಿ ನಡೆದ ಸಾಮಾಜಿಕ ಕ್ರಾಂತಿ ಕರ್ನಾಟಕದ ಇತಿಹಾಸದಲ್ಲಿ ಮಹತ್ವದ ಪಾತ್ರ ವಹಿಸಿದೆ. ಶಿವಯೋಗಿ ಸಿದ್ದರಾಮೇಶ್ವರ ಸೇರಿ ಮೊದಲಾದ ಶರಣರು ವಚನ ಸಾಹಿತ್ಯದ ಮೂಲಕ ವಾಸ್ತವದ ನೆಲೆಯಲ್ಲಿ ಜೀವನದರ್ಶನವನ್ನು ನೀಡಿ ಬದುಕಿಗೆ ಹೊಸ ಆಯಾಮಗಳನ್ನು ಒದಗಿಸಿದ್ದಾರೆ ಎಂದರು.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಕಾಯಕಕ್ಕೆ ಹೆಸರಾದ ಶಿವಯೋಗಿ ಸಿದ್ದರಾಮೇಶ್ವರರು 12ನೇ ಶತಮಾನದಲ್ಲಿ ಕೆರೆಕಟ್ಟೆಗಳನ್ನು ನಿರ್ಮಿಸಿ ದುಡಿಯುವ ವರ್ಗಕ್ಕೆ ನೆರವು ನೀಡಿದ್ದರು. ಅವರ ಅಧ್ಯಾತ್ಮ ಪ್ರವಚನಗಳು ಸಮಾಜದಲ್ಲಿ ಬದಲಾವಣೆ ಗಾಳಿ ಬೀಸುವಂತೆ ಮಾಡಿತು ಎಂದು ಹೇಳಿದರು.
ಜಾತ್ರೆ ಬದಲು ಜಾಗೃತಿ ಮೂಡಿಸಿ:
ಭೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಸಿದ್ದರಾಮೇಶ್ವರರ ಜಯಂತಿಯನ್ನು ಜಾತ್ರೆಯಾಗಿ ಆಚರಿಸುವ ಬದಲಾಗಿ ಜಾಗೃತಿಯ ರೂಪದಲ್ಲಿ ಆಚರಿಸಬೇಕಿದೆ. ಎಲ್ಲ ನಾಯಕರೂ ಪಕ್ಷಭೇದ ಹೊರತುಪಡಿಸಿ ಬೋವಿ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕಿದೆ ಎಂದರು.
ಸಚಿವ ಅರವಿಂದ ಲಿಂಬಾವಳಿ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ