ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ಸಾವು ಪತ್ರಕರ್ತ, ಬರಹಗಾರ ರವಿ ಬೆಳೆಗೆರೆ ವಿವಶ

ಬೆಂಗಳೂರು: ಹಿರಿಯ ಪತ್ರಕರ್ತ, ಅಕ್ಷರ ಮಾಂತ್ರಿಕ ಎಂದೇ ಖ್ಯಾತಿ ಪಡೆದಿದ್ದ ರವಿ ಬೆಳೆಗೆರೆ ಅವರು ಹೃದಯಾಘಾತದಿಂದ ಶುಕ್ರವಾರ ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿವಶರಾದರು.
ಮಧ್ಯರಾತ್ರಿ ಕಚೇರಿಯಲ್ಲಿಯೇ ಪುಸ್ತಕ ಬರವಣಿಗೆಯಲ್ಲಿ ತೊಡಗಿದ್ದ ಅವರು ಎದೆನೋವಿನಿಂದ ಸಿಬ್ಬಂದಿಯೊಂದಿಗೆ ಕುಡಿಯಲು ನೀರು ಕೇಳಿದ್ದರು. ನೀರು ಕುಡಿಸಿ, ಸ್ಥಳೀಯ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ಕನಕಪುರ ರಸ್ತೆಯ ಕರಿಷ್ಮ ಹಿಲ್ಸ್‍ನಲ್ಲಿರುವ ಅವರ ಮನೆಗೆ ತಂದು ಬಳಿಕ ಪ್ರಾರ್ಥನಾ ಶಾಲೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಅನೇಕ ಮಂದಿ ಅಂತಿಮ ನಮನ ಸಲ್ಲಿಸಿದ್ದು, ಸಂಜೆ ವೇಳೆಗೆ ಬನಶಂಕರಿಯ ಹಿಂದೂ ರುದ್ರ ಭೂಮಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯಿತು. ಪುತ್ರರಾದ ಕರ್ಣ ಹಾಗೂ ಹಿಮವಂತ್ ರವಿ ಬೆಳಗೆರೆ ಮೃತದೇಹಕ್ಕೆ ಅಗ್ನಿ ಸ್ಪರ್ಶ ಮಾಡಿದರು.
ಗಣ್ಯರ ಸಂತಾಪ
ಅಗಲಿದ ಪತ್ರಕರ್ತ ರವಿ ಬೆಳಗೆರೆಯವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದಿಯಾಗಿ ರಾಜಕೀಯ ನಾಯಕರು,ಚಿತ್ರ ರಂಗದ ಗಣ್ಯರು ಸೇರಿದಂತೆ ಕೋಟ್ಯಾಂತರ ಕನ್ನಡಿಗರು ಸಂತಾಪ ಸೂಚಿಸಿದ್ದಾರೆ. ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ, ಸಚಿವ ಸುರೇಶ್ ಕುಮಾರ್, ವಿ.ಸೋಮಣ್ಣ,ಕೆ.ಎಸ್.ಈಶ್ವರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಟ ಸುದೀಪ್, ಯೋಗರಾಜ್ ಭಟ್, ಕರಿಬಸವಯ್ಯ, ಕೆ.ಮಂಜು ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ