ಯಲಚೇನಹಳ್ಳಿ-ರೇಷ್ಮೆ ಸಂಸ್ಥೆ ಮಾರ್ಗ ಉದ್ಘಾಟಿಸಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಘೋಷಣೆ ದೇಶದೆಲ್ಲೆಡೆ ಮೆಟ್ರೋ ಪ್ರಯಾಣಕ್ಕೆ ಒಂದೇ ಕಾರ್ಡ್

ಬೆಂಗಳೂರು: ಭಾರತದ ಯಾವುದೇ ನಗರದಲ್ಲಿ ಮೆಟ್ರೋ ರೈಲಿನಲ್ಲಿ ಸಂಚರಿಸಲು ಒಂದೇ ಕಾರ್ಡ್ ಬಳಸಲು ಒಂದು ದೇಶ ಒಂದು ಮೊಬಿಲಿಟಿ ಕಾರ್ಡ್ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರಕಟಿಸಿದರು.
ಗುರುವಾರ ಬೆಂಗಳೂರು ಮೆಟ್ರೋದ ಯೆಲಚೇನಹಳ್ಳಿಯಿಂದ ರೇಷ್ಮೆ ಸಂಸ್ಥೆವರೆಗಿನ ವಿಸ್ತೃತ ಮೆಟ್ರೋ ಮಾರ್ಗವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಒಂದು ದೇಶ ಒಂದು ಮೊಬಿಲಿಟಿ ಕಾರ್ಡ್ ಚಾಲನೆ ವಿಸ್ತೃತ ಮಾರ್ಗದಲ್ಲಿ ಚಾಲ್ತಿಯಲ್ಲಿದೆ. ಈ ಕಾರ್ಡ್ ಮುಖಾಂತರ ದೇಶದ ಎಲ್ಲಾ ಮೆಟ್ರೋಗಳಲ್ಲಿ ಪ್ರಯಾಣ ಬೆಳೆಸಬಹುದಾಗಿದೆ. ಕಳೆದ 4 ವರ್ಷದಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಭಾರಿ ಬೆಳವಣಿಗೆ ಕಂಡಿದೆ. ಇಡೀ ದೇಶದಲ್ಲಿ 700 ಕಿ.ಮೀ. ಉದ್ದದಷ್ಟು ಮೆಟ್ರೋ ಮಾರ್ಗ ನಿರ್ಮಿಸಲಾಗಿದೆ. ಸದ್ಯ 18 ನಗರಗಳಲ್ಲಿ ಮೆಟ್ರೋ ಸಂಚಾರವಿದ್ದು, 1000 ಕಿ.ಮೀ. ಗೂ ಹೆಚ್ಚು ಉದ್ದದ ಮಾರ್ಗ ನಿರ್ಮಾಣ ಪ್ರಗತಿಯಲ್ಲಿದೆ. 27 ನಗರಗಳಿಗೆ ಮೆಟ್ರೋ ವಿಸ್ತರಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದರು.
2002ರಿಂದ ದೇಶದ ಮಹಾನಗರಿ ಮುಂಬೈ ಮತ್ತು ದೆಹಲಿಯಲ್ಲಿ ಮೆಟ್ರೋ ಸಂಚಾರ ಆರಂಭವಾಗಿದ್ದು, ಪ್ರಸ್ತುತ 18 ನಗರಕ್ಕೆ ವ್ಯಾಪಿಸಿದೆ. ಈ ಪೈಕಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಮುಂಬೈ ಮೊದಲ ಸ್ಥಾನ, ದೆಹಲಿ ಎರಡನೇ ಸ್ಥಾನದಲ್ಲಿದೆ. ಸಮಯ ಪಾಲನೆಯಲ್ಲಿ ಬೆಂಗಳೂರು ಮೆಟ್ರೋ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದ್ದು, ಪ್ರಯಾಣಿಕರ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಸಚಿವರು ವಿವರಿಸಿದರು.
2025 ಕ್ಕೆ 172 ಕಿ.ಮೀ ಮಾರ್ಗ ವಿಸ್ತರಣೆ:
ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಮುಂದಿನ ಒಂದು ವರ್ಷದಲ್ಲಿ ಬೆಂಗಳೂರಿನ ಅಭಿವೃದ್ಧಿ ಚಿತ್ರಣ ಬದಲಾಗಲಿದೆ. ಬೆಂಗಳೂರನ್ನು ಮಾದರಿ ನಗರವಾಗಿ ಮಾರ್ಪಡಿಸುವ ಗುರಿ ಸರ್ಕಾರದ್ದಾಗಿದೆ. ಇದಕ್ಕೆ ಸಾರಿಗೆ ವ್ಯವಸ್ಥೆ ಕೀಲಿಕೈ ಇದ್ದಂತೆ. 75ನೇ ಸ್ವಾತಂತ್ರ್ಯ ಆಚರಣೆ ವೇಳೆ ನಮ್ಮ ಮೆಟ್ರೋ 75 ಕಿ.ಮೀ ಮಾರ್ಗ ವಿಸ್ತರಿಸುವ ಗುರಿ ಇದ್ದು, 2025 ಕ್ಕೆ 172 ಕಿ.ಮೀ. ಮಾರ್ಗ ವಿಸ್ತರಿಸಲಾಗುವುದು ಎಂದರು.
ಡಿಸಿಎಂ ಗೋವಿಂದ ಎಂ.ಕಾರಜೋಳ, ಸಚಿವರಾದ ಬೈರತಿ ಬಸವರಾಜು, ಸುರೇಶ್‍ಕುಮಾರ್, ಎಸ್.ಟಿ.ಸೋಮಶೇಖರ್, ಅರವಿಂದ ಲಿಂಬಾವಳಿ, ಆರ್.ಅಶೋಕ್, ಸಂಸದ ಪಿ.ಸಿಮೋಹನ್, ಶಾಸಕರಾದ ಎಂ.ಕೃಷ್ಣಪ್ಪ, ಎಸ್.ಆರ್.ವಿಶ್ವನಾಥ್, ಬಿಎಂಆರ್‍ಸಿಎಲ್ ಎಂಡಿ ಅಜಯ್ ಸೇಠ್ ಸೇರಿದಂತೆ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ