ಸದೃಢವಾಗಿರುವ ಬಿಜೆಪಿಯನ್ನು ಇನ್ನಷ್ಟು ಗಟ್ಟಿಗೊಳಿಸಿ: ಕಾರ್ಯಕರ್ತರಿಗೆ ಸಿಎಂ ಕರೆ ಉತ್ತರ ಕರ್ನಾಟಕದಲ್ಲಿ ನೆಲಕಚ್ಚಿದ ಕಾಂಗ್ರೆಸ್

ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಜೆಡಿಎಸ್‍ಗೆ ವಿಳಾಸವೇ ಇಲ್ಲ. ಇದನ್ನೇ ಬಳಸಿಕೊಂಡು ಸದೃಢವಾಗಿರುವ ಬಿಜೆಪಿಯನ್ನು ಕಾರ್ಯಕರ್ತರು ಗ್ರಾಮ ಮಟ್ಟದಲ್ಲಿ ಇನ್ನಷ್ಟು ಗಟ್ಟಿಗೊಳಿಸಬೇಕಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಬಿಜೆಪಿ ಜನಸೇವಕ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕಾರ್ಯಕರ್ತರು  ಗ್ರಾಮಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ಸಾಸಬೇಕಿದೆ ಎಂದರು.
ಗ್ರಾಪಂನಲ್ಲಿ ಬಿಜೆಪಿಗೆ ಗೆಲುವು:
ಒಂದು ಕಾಲ ಇತ್ತು. ಹಣ, ಅಕಾರ ಬಲದಿಂದ ಚುನಾವಣೆ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ಕಾಂಗ್ರೆಸ್ ಹೊಂದಿತ್ತು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿದೆ. ಮುಂದಿನ ವಿಧಾಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದರು.
ತಾಪಂ, ಜಿಪಂ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಶ್ರಮಿಸಿ. ಸುರೇಶ ಅಂಗಡಿ ಅವರ ಋಣ ತೀರಿಸಲು ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ಎಂದರು.
ಜನಮೆಚ್ಚಿದ ಪಕ್ಷ ಬಿಜೆಪಿ:
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾತನಾಡಿ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವನ್ನು ಮೆಚ್ಚಿ 45,000 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ . ಮುಂದಿನ ತಾಪಂ, ಜಿಪಂ ಹಾಗೂ 2023 ನೇ ವರ್ಷದಲ್ಲಿ ಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯ ಸಾಸುವ ಸಂಕಲ್ಪ ಮಾಡಬೇಕಿದೆ ಎಂದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ