ಸಮ್ಮಿಶ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತೇವೆ: ರೈತರ ಹೋರಾಟಕ್ಕೆ ನಮ್ಮ ಬೆಂಬಲವೆಂದ ಬಿಎಸ್ ಯಡಿಯೂರಪ್ಪ

ಬೆಳಗಾವಿ: ಹೆಚ್ ಡಿ ಕುಮಾರಸ್ವಾಮಿ ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ತಮ್ಮ ಜವಾಬ್ದಾರಿಯನ್ನು ಅರ್ಥ ಮಾಡಿಕೊಂಡಿಲ್ಲ. ಧಿಮಾಕಿನ ಮಾತನಾಡುವುದನ್ನು ಅವರು ನಿಲ್ಲಿಸಬೇಕು. ಈ ಬಾರಿ ಅಧಿವೇಶನದಲ್ಲಿ ಸಮ್ಮಿಶ್ರ ಸರ್ಕಾರವನ್ನು ಒಂಟಿಗಾಲಿನಲ್ಲಿ ನಿಲ್ಲಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ವಾಗ್ದಾಳಿ ನದೆಸಿದ್ದಾರೆ.

ಬಿಜೆಪಿ ರೈತ ಸಮಾವೇಶ ಸ್ಥಳದ ಅಂತಿಮ ಹಂತದ ಸಿದ್ಧತೆ ಪರಿಶೀಲನೆ ಬಳಿಕ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಅಧಿವೇಶನಕ್ಕೆ ಹೋಗುತ್ತಿದ್ದೇವೆ. ಇಂದು ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಮೊದಲು ಗಣ್ಯರಿಗೆ ಸಂತಾಪ ಸೂಚಿಸುತ್ತೇವೆ. ನಾಳೆಯಿಂದ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ‌ಚರ್ಚೆ ಮಾಡುವವರಿದ್ದೇವೆ ಎಂದರು.

ಇನ್ನು ಸಿಎಂ ಕುಮಾರಸ್ವಾಮಿಯವರು ಧಿಮಾಕಿನ ಮಾತನಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ನಮ್ಮ ಹೋರಾಟದ ಬಗ್ಗೆ ಹಗುರವಾಗಿ ತಿಳಿದುಕೊಂಡಿದ್ದೀರಾ. ಅವರ ಆಡಳಿತ ವೈಖರಿಯ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಗುಡುಗಿದರು.

ತಾವು ಜನಸಾಮಾನ್ಯರಿಗೆ ಸಿಗುವ ಸಿಎಂ ಅಂತೀರಾ. ಆದ್ರೆ ಬೆಂಗಳೂರಿನಲ್ಲಿ ಫೈವ್​ಸ್ಟಾರ್​ ಹೋಟೆಲ್​ನಲ್ಲಿ ರೂಮ್​ ಮಾಡಿಕೊಂಡು ವರ್ಗಾವಣೆ ದಂಧೆ ಮಾಡುತ್ತಿದ್ದೀರಿ. ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ನಿರ್ಲಕ್ಷ್ಯಿಸಿದ್ದೀರಿ ಎಂದು ದೂರಿದರು.

ಅಷ್ಟೆಅಲ್ಲದೆ ಸಾಲ ಮನ್ನಾ ಮಾಡಿ ಅಂದರೆ ಕುಂಟು ನೆಪ ಹೇಳಿ, ಇನ್ನೂರು ಮುನ್ನೂರು ಜನರಿಗೆ ಸಾಲ ಮನ್ನಾ ಸರ್ಟಿಫಿಕೇಟ್ ಕೊಟ್ಟು ಅಧಿವೇಶನಕ್ಕೆ ಬಂದಿದ್ದೀರ. ಸರ್ಕಾರದ ವೈಫಲ್ಯಕ್ಕೆ ಬೇಸತ್ತು ರೈತರು ಇಂದು ಹೋರಾಟಕ್ಕೆ ಆಗಮಿಸಿದ್ದಾರೆ. ‘ಅಧಿಕಾರ ಬಿಟ್ಟು ತೊಲಗಿ’ ಎಂಬ ಹೋರಾಟವನ್ನು ನಾವು ಸರ್ಕಾರದ ವಿರುದ್ಧ ಮಾಡುತ್ತೇವೆ. ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದರು.

Belagavi,Winter Session,B S Yedyurappa

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ