ಏಕತೆ ಮೂರ್ತಿಗೆ ಸಂಪರ್ಕಿಸುವ 8 ರೈಲುಗಳಿಗೆ ಮೋದಿ ಚಾಲನೆ ಸ್ಟ್ಯಾಚು ಆಫ್ ಲಿಬರ್ಟಿ ಹಿಂದಿಕ್ಕಿದ ಏಕತಾಪ್ರತಿಮೆ

ಹೊಸದಿಲ್ಲಿ: ಏಕತಾ ಪ್ರತಿಮೆ ಸ್ಥಾಪನೆಯ ಬಳಿಕ ಕೆವಾಡಿಯಾ ಒಂದು ಸಣ್ಣ ಪ್ರದೇಶವಾಗಿ ಉಳಿದಿಲ್ಲ, ಬದಲಾಗಿ ವಿಶ್ವದ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿರುವ ಪ್ರಪಂಚದ ಅತಿದೊಡ್ಡ ಪ್ರವಾಸಿ ತಾಣವಾಗಿ ಪರಿಣಮಿಸಿದೆ.
ಏಕತಾಪ್ರತಿಮೆ ಸ್ಥಾಪನೆಯಾದ ಬಳಿಕ 50 ಲಕ್ಷ ಪ್ರವಾಸಿಗರು ತಾಣಕ್ಕೆ ಭೇಟಿ ನೀಡಿದ್ದು, ಇಂದು ಅಮೆರಿಕದ ಸ್ಟ್ಯಾಚು ಆಫ್ ಲಿಬರ್ಟಿ ನೋಡಲು ತೆರಳುವವರಿಗಿಂತ ಹೆಚ್ಚಿನ ಜನರು ಏಕತಾ ಪ್ರತಿಮೆ ನೋಡಲು ಬರುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತೀಯ ಪ್ರವಾಸೋದ್ಯಮದ ಮೈಲಿಗಲ್ಲು ಎಂದು ಪರಿಗಣಿಸಲ್ಪಡುವ, ಏಕತಾ ಪ್ರತಿಮೆ ನಿರ್ಮಾಣಗೊಂಡಿರುವ ಗುಜರಾತ್‍ನ ಕೆವಾಡಿಯಾಗೆ ದೇಶದ ವಿವಿಧ ಭಾಗಗಳಿಂದ ಸಾರಿಗೆ ಸೇವೆ ಒದಗಿಸುವ 8 ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದ್ದಾರೆ.
ವೀಡಿಯೋ ಕಾನರೆನ್ಸ್ ಮೂಲಕ ಹಸಿರು ನಿಶಾನೆ ತೋರಿರುವ ಪ್ರಧಾನಿ, ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ಪ್ರದೇಶಕ್ಕೆ ನಿಯೋಜನೆಗೊಂಡ ದೇಶದ ವಿವಿಧ ಭಾಗದ ರೈಲುಗಳಿಗೆ ಒಟ್ಟಿಗೆ ಚಾಲನೆ ನೀಡಲಾಗಿದೆ ಎಂದಿದ್ದಾರೆ.
ಅಲ್ಲದೆ, ದೇಶವನ್ನು ಒಗ್ಗೂಡಿಸಿ,ಏಕ ಭಾರತ-ಶ್ರೇಷ್ಠ ಭಾರತ ಎಂಬ ಸಂದೇಶ ಸಾರಿದ ವ್ಯಕ್ತಿಯ ಪ್ರತಿಮೆ ನಿರ್ಮಾಣದೊಂದಿಗೆ ಕೆವಾಡಿಯಾ ಗುರುತಿಸಿಕೊಂಡಿತ್ತು. ಈ ಪ್ರಸಿದ್ಧ ಭೂಮಿಗಾಗಿ ಇಂದು ಕೈಗೊಂಡಿರುವ ಕಾರ್ಯ ಭಾರತೀಯ ರೈಲ್ವೆಯ ಉದ್ದೇಶ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಚಿಂತನೆಯ ಪ್ರತೀಕವೂ ಆಗಿದೆ ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ