ಕೇಂದ್ರಕ್ಕೆ ನಿಲುವು ತಿಳಿಸುವಂತೆ ಸುಪ್ರೀಂಕೋರ್ಟ್ ನೋಟಿಸ್ ತುರ್ತುಪರಿಸ್ಥಿತಿ ಅಸಾಂವಿಧಾನಿಕವೆಂದು ಘೋಷಿಸಿ

ಹೊಸದಿಲ್ಲಿ: ದೇಶದಲ್ಲಿ 1975ರಲ್ಲಿ ಹೇರಲಾಗಿದ್ದ ತುರ್ತುಪರಿಸ್ಥಿತಿ ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.
ಸೋಮವಾರ 1975ರಲ್ಲಿ ಹೇರಲಾಗಿದ್ದ ತುರ್ತುಪರಿಸ್ಥಿತಿ ಅಸಾಂವಿಧಾನಿಕ ಎಂದು ಘೋಷಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಈ ಬಗ್ಗೆ ಕೇಂದ್ರ ಸರ್ಕಾರದ ನಿಲುವು ತಿಳಿಸಬೇಕೆಂದು ಸೂಚಿಸಿದೆ.
ಇತಿಹಾಸದ ತಪ್ಪುಗಳನ್ನು ಸರಿಯಾಗಿ ಹೊಂದಿಸಬೇಕು ಎಂಬ ವಾದವನ್ನು ಪರಿಗಣಿಸಲು ನ್ಯಾಯಾಲಯ ಒಪ್ಪುವುದಿಲ್ಲ. ಏಕೆಂದರೆ, ಎಲ್ಲ ಆಯಾಮಗಳು ಜನರಿಗೆ ತಪ್ಪಾಗಿ ಪರಿಣಮಿಸಿರಬಹುದು. ಆದರೆ, 45 ವರ್ಷಗಳಾಗಿರುವುದರಿಂದ ಆ ವಿವಾದಗಳನ್ನು ಮರು ಪರಿಗಣಿಸುವುದು ಸೂಕ್ತವಲ್ಲ ಎಂದು ಜಸ್ಟೀಸ್ ಸಂಜಯ್ ಕಿಶನ್ ಕೌಲ್ ನೇತೃತ್ವದ ನ್ಯಾಯಪೀಠವು ತಿಳಿಸಿದೆ.
ಇದೇ ವೇಳೆ ತುರ್ತುಪರಿಸ್ಥಿತಿಯ ಘೋಷಣೆ ಅಸಾಂವಿಧಾನಿಕ ಎಂದು ಸರಳ ಘೋಷಣೆ ಮಾಡಬಹುದೇ ಎಂದು ನಿರ್ಧರಿಸುವುದಾಗಿಯೂ ನ್ಯಾಯಾಲಯ ಹೇಳಿದೆ.
19 ತಿಂಗಳ ಕಾಲ ಅಕಾರದ ದುರುಪಯೋಗವಾಗಿದ್ದು, ಪ್ರಮುಖ ಸಂಗತಿಗಳನ್ನು ಒಳಗೊಂಡಿರುವುದರಿಂದ ಈ ವಿಷಯವನ್ನು ಪರಿಶೀಲಿಸುವುದು ಅತಿ ಮುಖ್ಯ ಎಂದು ತುರ್ತು ಪರಿಸ್ಥಿತಿಯನ್ನು ಅಸಂವಿಧಾನಿಕ ಎಂದು ಘೋಷಿಸಿ ಪರಿಹಾರ ನೀಡುವಂತೆ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದ 94 ವರ್ಷದ ವೃದ್ಧೆ ವೀಣಾ ಸರೈನ್ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ತಿಳಿಸಿದ್ದಾರೆ.
ಈ ವಿಚಾರವನ್ನು ತಿಳಿಯಲು ನಮಗೆ ಕಷ್ಟವಾಗುತ್ತಿದ್ದು, ತುರ್ತು ಪರಿಸ್ಥಿತಿ ದುರುಪಯೋಗವಾಗಿದ್ದು, ಇಂತಹ ಸಂಗತಿ ಆಗಬಾರದಿತ್ತು ಎಂದು ನ್ಯಾಯಪೀಠ ತಿಳಿಸಿದೆ.
ಯುದ್ಧ ಅಪರಾಧ ಸಂಗತಿಗಳನ್ನು ಪರಿಗಣಿಸಬಹುದಾಗಿದ್ದು, 90 ವರ್ಷದ ವಯೋವೃದ್ಧರು ಇಂದಿಗೂ ಅದರ ನೋವನ್ನು ಅನುಭವಿಸುತ್ತಿದ್ದಾರೆ. ನಮ್ಮ ಪ್ರಜಾಪ್ರಭುತ್ವದ ಆರಂಭಿಕ ಹಂತದಲ್ಲಿ 19 ತಿಂಗಳು ಹಕ್ಕುಗಳನ್ನು ರದ್ದುಗೊಳಿಸಲಾಗಿತ್ತು. ಇತಿಹಾಸವನ್ನು ಸರಿಪಡಿಸದಿದ್ದಲ್ಲಿ ಅದು ಪುನರಾವರ್ತನೆಯಾಗುತ್ತಲೇ ಇರುತ್ತದೆ ಎಂದು ಸಾಳ್ವೆ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ