ನೂತನ ಸಂಸತ್ ಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ರಾಷ್ಟ್ರದ ಹಿತಾಸಕ್ತಿಯೇ ಸರ್ವೋಚ್ಛ, ಸಂಸದರು ಜನರ ಉತ್ತರದಾಯಿತ್ವ :

ಹೊಸದಿಲ್ಲಿ: ರಾಷ್ಟ್ರದ ಹಿತಾಸಕ್ತಿಯೇ ಸರ್ವೋಚ್ಛವಾದುದು. ಸಂಸದರು ಜನರ ಉತ್ತರದಾಯಿತ್ವ ಹೊಂದಿರುತ್ತಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ನೂತನ ಸಂಸತ್ ಭವನಕ್ಕೆ ಅವರು ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು. ಕರ್ನಾಟಕದ ಶೃಂಗೇರಿ ಮಠದ ಪುರೋಹಿತರಿಂದ ಭೂಮಿ ಪೂಜೆ ನಡೆದ ಬಳಿಕ ಶಂಕುಸ್ಥಾಪನೆ ನೆರವೇರಿಸಿ, ಫಲಕವನ್ನು ಅನಾವರಣಗೊಳಿಸಿದರು. ಕಾರ್ಯಕ್ರಮಕ್ಕೆ ಮುನ್ನ ಅತಿಥಿಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಶಿಲಾನ್ಯಾಸ ಸ್ಥಳಕ್ಕೆ ಕರೆತರಲಾಯಿತು.
ಐತಿಹಾಸಿಕ ದಿನವಿದು. ಇಂದಿನ ಶಿಲಾನ್ಯಾಸ ಕಾರ್ಯಕ್ರಮ ಭಾರತದ ಅಭಿವೃದ್ಧಿಗೆ ಅಡಿಪಾಯದಂತೆ. ಈಗಿರುವ ಸಂಸತ್ ಕಟ್ಟಡ ಸ್ವಾತಂತ್ರ್ಯ ದೊರೆತ 1947ರಿಂದ ಮಾರ್ಗದರ್ಶನ ನೀಡಿದ್ದರೆ, ಹೊಸ ಕಟ್ಟಡವು ಆತ್ಮನಿರ್ಭರ ಭಾರತಕ್ಕೆ ಸಾಕ್ಷಿಯಾಗಲಿದೆ. ಹಳೆಯ ಕಟ್ಟಡದಲ್ಲಿ ರಾಷ್ಟ್ರದ ಅವಶ್ಯಕತೆಗಳನ್ನು ಈಡೇರಿಸುವ ಕಾರ್ಯ ನಡೆಯಿತು. ಹೊಸ ಕಟ್ಟಡದಲ್ಲಿ 21ನೇ ಶತಮಾನದ ಆಶೋತ್ತರಗಳನ್ನು ಸಾಕಾರಗೊಳಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು.
ಹಳೆಯ ಸಂಸತ್ ಕಟ್ಟಡ ಕುರಿತು ನೆನಪಿನ ಹಂದರ ಬಿಚ್ಚಿಟ್ಟ ಮೋದಿಯವರು, ಪ್ರಜಾಪ್ರಭುತ್ವ ದೇವಾಲಯದ ಭಾಗವಾಗಲು ನನಗೆ ಅವಕಾಶ ದೊರೆತಾಗ ಆ ದಿನ ನನಗೆ ಭಾವನಾತ್ಮಕವಾಗಿತ್ತು. ನನ್ನ ಮೊದಲ ಭೇಟಿಯಲ್ಲಿ ಶಿರಬಾಗಿ ವಂದಿಸಿದ್ದೆ. ಶತಮಾನದ ಹಿಂದೆ ನಿರ್ಮಿಸಲಾದ ಕಟ್ಟಡವು ಭಾರತವನ್ನು ರೂಪಿಸುವಲ್ಲಿ ಸೇವೆ ನೀಡಿದೆ. ಅದು ಹಲವು ಬಾರಿ ನವೀಕರಣಗೊಂಡಿದೆ. ಆದರೆ, ತನ್ನ ಸಾಮಥ್ರ್ಯದ ಅಂತಿಮ ಹಂತ ತಲುಪಿದ್ದು, ಈಗ ವಿಶ್ರಾಂತಿ ಪಡೆಯಲು ಸಿದ್ಧವಾಗಿದೆ ಎಂದರು.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ನಗರಾಭಿವೃದ್ಧಿ ಸಚಿವ ಹರದೀಪ್ ಸಿಂಗ್ ಪುರಿ ಮತ್ತು ರಾಜ್ಯ ಸಭಾ ಉಪಾಧ್ಯಕ್ಷ ಹರಿವಂಶ ನಾರಾಯಣ ಸಿಂಗ್ ಸೇರಿದಂತೆ ಕಾಯಕ್ರಮದಲ್ಲಿ 200 ಅತಿಥಿಗಳು ಭಾಗವಹಿಸಿದ್ದರು.
ಭೂಮಿಪೂಜೆ ಬಳಿಕ 12 ನಾನಾ ಧಾರ್ಮಿಕ ನಾಯಕರು ಪ್ರಾರ್ಥನೆ ಕೈಗೊಂಡರು. ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಮತ್ತು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಸಂದೇಶವನ್ನು ಹರಿವಂಶ ನಾರಾಯಣ ಸಿಂಗ್ ವಾಚಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ