ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು 2021ರ ವರೆಗೆ ಸಚಿವರಾಗುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ವಿಧಾನಸಭೆ ಸದಸ್ಯತ್ವದಿಂದ ಅನರ್ಹರಾದ ಎಂಟಿಬಿ ನಾಗರಾಜ್, ಎಚ್.ವಿಶ್ವನಾಥ್ ಹಾಗೂ ಆರ್.ಶಂಕರ್ ಅವರನ್ನು ಹಿಂಬಾಗಿಲಿನ ಮೂಲಕ ವಿಧಾನಪರಿಷತ್ತಿಗೆ ಆಯ್ಕೆ ಮಾಡಿದ್ದು, ಅವರಿಗೆ ಸಚಿವ ಸ್ಥಾನ ನೀಡಬಾರದೆಂದು ವಕೀಲ ಎ.ಎಸ್.ಹರೀಶ್ ಕುಮಾರ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲ ಪ್ರಶಾಂತ್ ಭೂಷಣ್, ವಿಧಾನಸಭೆ ಸದಸ್ಯತ್ವದಿಂದ ಅನರ್ಹಗೊಂಡವರಿಗೆ ವಿಧಾನಮಂಡಲದ ಮತ್ತೊಂದು ಮನೆಯಾದ ವಿಧಾನಪರಿಷತ್ತಿನ ಸದಸ್ಯತ್ವ ನೀಡಿರುವುದು ಸರಿಯಲ್ಲ. ಹೀಗಿರುವಾಗ ಅಂತಹವರಿಗೆ ಸಚಿವ ಸ್ಥಾನ ಕೊಡಬಾರದು ಎಂದು ಪ್ರತಿಪಾದಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ, ಅರ್ಜಿದಾರರ ವಾದವನ್ನು ಭಾಗಶಃ ಎತ್ತಿಹಿಡಿದಿದ್ದು, ಮಧ್ಯಂತರ ಆದೇಶ ನೀಡಿದೆ.
ಎಂಟಿಬಿ ನಾಗರಾಜ್ ಮತ್ತು ಆರ್.ಶಂಕರ್ ಅವರು ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗಿರುವುದರಿಂದ ಇಬ್ಬರ ಆಯ್ಕೆ ಪ್ರಕ್ರಿಯೆಯು ಸಂವಿಧಾನಬದ್ಧವಾಗಿ ಇದೆ ಎಂಬುದನ್ನು ಒಪ್ಪಬಹುದು. ಆದರೆ, ಪ್ರಸಕ್ತ ವಿಧಾನಸಭೆಯ ಅವ ಮುಗಿಯುವವರೆಗೆ ವಿಧಾನಸಭೆ ಸದಸ್ಯತ್ವದಿಂದ ಅನರ್ಹರಾಗಿ, ಮುಖ್ಯಮಂತ್ರಿಗಳ ಶಿಫಾರಸಿನ ಮೇರೆಗೆ ರಾಜ್ಯಪಾಲರ ಮೂಲಕ ಮೇಲ್ಮನೆಗೆ ನಾಮನಿರ್ದೇಶನ ಮಾಡಿರುವುದು ಸರಿಯಾದ ಕ್ರಮವಲ್ಲ. ಹೀಗಾಗಿ ಸಂವಿಧಾನ ಅನುಚ್ಛೇದ 164(1ಬಿ) ಮತ್ತು 361ಬಿ ಅಡಿ ವಿಶ್ವನಾಥ್ ಅವರು 2021ರವರೆಗೆ ಸಚಿವರಾಗುವಂತಿಲ್ಲ. ಇವರ ಅನರ್ಹತೆಯನ್ನು ಮುಖ್ಯಮಂತ್ರಿಗಳು ಪರಿಗಣಿಸಬೇಕು ಎಂದು ಮಧ್ಯಂತರ ಆದೇಶದಲ್ಲಿ ಸೂಚಿಸಿದೆ.