ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಗಂಭೀರ ಆರೋಪ ಡ್ರಗ್ಸ್ ಮಾಫಿಯಾಗೆ ಕಾಂಗ್ರೆಸ್ಸೇ ಕಾರಣ ಅಥವಾ ಡ್ರಗ್ಸ್ ಹಾವಳಿ ಹೆಚ್ಚಳಕ್ಕೆ ಕಾಂಗ್ರೆಸ್ಸೇ ಕಾರಣ

ಬೆಂಗಳೂರು: ಹಿಂದಿನ ಕಾಂಗ್ರೆಸ್ ಸರ್ಕಾರದ ಪ್ರಮುಖರು ಡ್ರಗ್ಸ್ ಮಾಫಿಯಾ ಜೊತೆ ಕೈಜೋಡಿಸಿದ್ದರಿಂದ ಈಗ ರಾಜ್ಯದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಗಂಭೀರ ಆರೋಪ ಮಾಡಿದರು.
ಬಿಜೆಪಿ ಬೆಂಗಳೂರು ನಗರ ಜಿಲ್ಲಾ ಕಚೇರಿಯಲ್ಲಿ ಬಿಬಿಎಂಪಿ ಸದಸ್ಯರು ಹಾಗೂ ವಿಪಕ್ಷಗಳ ಪ್ರಮುಖ ನಾಯಕರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಅಭಿವೃದ್ಧಿ ಮಾಡದೆ ಡ್ರಗ್ಸ್ ಮಾಫಿಯಾ ಬೆಳೆಸುವ ಹಾಗೂ ದ್ವೇಷದ ರಾಜಕೀಯ ಮಾಡಿದರು. ಅದರ ಪರಿಣಾಮ ಈಗ ಪೆಡಂಭೂತವಾಗಿ ಬೆಳೆದು ನಿಂತಿದೆ. ಇದನ್ನು ಹೋಗಲಾಡಿಸಲು ಬಿಜೆಪಿ ಸರ್ಕಾರ ಪಣ ತೊಟ್ಟಿದ್ದು, ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಹೋರಾಟ ನಡೆಸುತ್ತಿದೆ. ಆದ್ದರಿಂದಲೇ ಹಲವು ಪ್ರಮುಖರ ಬಂಧನವಾಗಿದೆ. ರಾಜ್ಯದಲ್ಲಿ ಸಂಪೂರ್ಣವಾಗಿ ಡ್ರಗ್ಸ್ ಮಾಫಿಯಾ ತೊಡೆದು ಹಾಕಲಾಗುವುದು ಎಂದರು.
ಕಾಂಗ್ರೆಸ್ ಯಾವಾಗಲು ಬ್ರಿಟೀಷರ ರೀತಿಯಲ್ಲೇ ಸಮಾಜ ಮತ್ತು ಧರ್ಮಗಳನ್ನು ಒಡೆದು ರಾಜಕೀಯ ಮಾಡುತ್ತಾ ಬಂದಿದೆ. ಜಾತಿ, ಧರ್ಮ, ಪಂಥಗಳ ನಡುವೆ ಬೆಂಕಿ ಹಚ್ಚಿ, ತನ್ನ ಬೇಳೆ ಬೇಯಿಸಿಕೊಳ್ಳುವುದು ಅವರಿಗೆ ರಕ್ತಗತವಾಗಿದೆ. ಸಿದ್ದರಾಮಯ್ಯ ಅಕಾರದಲ್ಲಿ ಮುಸ್ಲಿಮರ ಓಲೈಕೆಗೆ ಟಿಪ್ಪು ಜಯಂತಿ ಆಚರಣೆಗೆ ತಂದರು. ಬಳಿಕ ವೀರಶೈವ ಲಿಂಗಾಯತ ಧರ್ಮ ಒಡೆದು ಪ್ರತ್ಯೇಕ ಧರ್ಮ ಮಾಡಲು ಮುಂದಾಗಿದ್ದರು. ಇದಕ್ಕೆ ಜನರಿಂದಲೇ ಅವರಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ಸಿಕ್ಕಿದೆ ಎಂದು ಟೀಕಿಸಿದರು.
ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪೂರ್ವನಿಯೋಜಿತದಂತೆ ಕಾಣಿಸಿದರೂ, ಇದರ ಹಿನ್ನೆಲೆಯಲ್ಲಿ ಸಿದ್ದರಾಮಯ್ಯಮತ್ತು ಡಿ.ಕೆ.ಶಿವಕುಮಾರ್ ನಡುವಿನ ಆಂತರಿಕ ಗಲಾಟೆಯೇ ಕಾರಣವಾಗಿದೆ. ಒಬ್ಬರು ಮಾಜಿ ಮೇಯರ್ ಸಂಪತ್ ರಾಜ್ ಪರವಿದ್ದರೆ, ಮತ್ತೊಬ್ಬರು ಶಾಸಕ ಅಖಂಡ ಶ್ರೀನಿವಾಸ್ ಪರ ನಿಂತಿದ್ದಾರೆ. ತಮ್ಮದೇ ಪಕ್ಷದ ದಲಿತ ಶಾಸಕರ ಬೆಂಬಲಕ್ಕೆ ನಿಲ್ಲಲು ಕಾಂಗ್ರೆಸ್‍ನವರಿಗೆ ಸಾಧ್ಯವಾಗಿಲ್ಲ. ಇವರು ಜನರನ್ನು ಹೇಗೆ ರಕ್ಷಿಸುತ್ತಾರೆ. ಕಾಂಗ್ರೆಸ್ ಯಾವಾಗಲೂ ದೇಶದ್ರೋಹಿ ಸಂಘಟನೆ ಜೊತೆ ಕೈ ಜೋಡಿಸುತ್ತಾ ಬಂದಿದೆ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಗೆ ಕಾರಣರಾದ ಎಸ್‍ಡಿಪಿಐ ಸಂಘಟನೆ ಜೊತೆ ಗುರುತಿಸಿಕೊಂಡಿರುವುದು ಅವರ ಮನಸ್ಥಿತಿ ಹಾಗೂ ಪಕ್ಷದ ದುಸ್ಥಿತಿಗೆ ಹಿಡಿದ ಕೈಗನ್ನಡಿ ಎಂದರು.
ಇದೇ ವೇಳೆ ಬಿಬಿಎಂಪಿ ಮಾಜಿ ಸದಸ್ಯ ರಾಮಚಂದ್ರ, ಚಂದ್ರಪ್ಪ ರೆಡ್ಡಿ, ಮಂಜುಳಾ ನಾರಾಯಣ ಸ್ವಾಮಿ, ಲಕ್ಷ್ಮೀನಾರಾಯಣ, ದೇವದಾಸ್, ಬಿಟಿಎಸ್ ನಾಗರಾಜ್, ಮೊದಲಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಪಕ್ಷಕ್ಕೆ ಸೇರ್ಪಡೆಗೊಂಡರು.
ಕಂದಾಯ ಸಚಿವ ಆರ್.ಅಶೋಕ, ಉಪಾಧ್ಯಕ್ಷ ಅರವಿಂದ ಲಿಂಬಾವಳಿ, ಆರ್.ಆರ್. ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಮೊದಲಾದವರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ