ಪ್ರಜಾಪ್ರಭುತ್ವದ 4 ಅಂಗಗಳ ಪ್ರಮುಖರ ಜತೆ ಸಭೆ: ಕಾಗೇರಿ ಶಾಸನಸಭೆ ಘನತೆ ಉಳಿಸಲು ಸಮಾಲೋಚನಾ ಸಭೆ ಶೀಘ್ರ

ಬೆಂಗಳೂರು: ವಿಧಾನಪರಿಷತ್ತಿನಲ್ಲಿ ಇತ್ತೀಚೆಗೆ ನಡೆದ ಘಟನೆಯು ಸಂಸದೀಯ ವ್ಯವಸ್ಥೆಯನ್ನು ತಲ್ಲಣಗೊಳಿಸಿದ್ದು, ಇಂತಹ ದುರ್ಘಟನೆಗಳು ಮರುಕಳಿಸದಂತೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ವಿಧಾನಮಂಡಲದ ಘನತೆ ಗೌರವಗಳನ್ನು ಎತ್ತಿ ಹಿಡಿಯುವ ಸಲುವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಮತ್ತು ಪತ್ರಿಕಾಂಗದ ಪ್ರಮುಖರೊಂದಿಗೆ ಸಮಾಲೋಚನಾ ಸಭೆ ಏರ್ಪಡಿಸಲಾಗುವುದು ಎಂದರು.
ವಿಧಾನಮಂಡಲಕ್ಕೆ ಬಹಳ ದೊಡ್ಡ ಇತಿಹಾಸ, ಪರಂಪರೆ ಇದೆ. 1881ರಲ್ಲಿ ಮೈಸೂರು ಪ್ರಜಾಪ್ರತಿನಿ ಸಭೆ ಇಡೀ ದೇಶದ ಗಮನ ಸೆಳೆದರೆ, 1907ರಲ್ಲಿ ಮೈಸೂರು ಮಹಾರಾಜರು ವಿಧಾನಪರಿಷತ್ ಆರಂಭಿಸುವ ಮೂಲಕ ಸಂಸದೀಯ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದ್ದಾರೆ.
ಡಿ.15 ರಂದು ನಡೆದ ಘಟನೆಯು ಸಂಸದೀಯ ವ್ಯವಸ್ಥೆಯನ್ನು ತಲ್ಲಣಗೊಳಿಸಿದೆ. ಸಭಾಪತಿ ಬಾರದಂತೆ ತಡೆದದ್ದು, ಉಪ ಸಭಾಪತಿ ಪೀಠದಲ್ಲಿ ಕುಳಿತದ್ದು, ಅವರನ್ನು ಕೆಳಗಿಳಿಸಿದ ರೀತಿ, ಮತ್ತೋರ್ವ ಸದಸ್ಯರು ಪೀಠದಲ್ಲಿ ಕುಳಿತದ್ದು, ಕೈ ಮಿಲಾಯಿಸುವ ಪರಿಸ್ಥಿತಿ ಸೃಷ್ಟಿಯಾದದ್ದು ತಲೆ ತಗ್ಗಿಸುವ ಮತ್ತು ಆಘಾತಕಾರಿ ಸಂಗತಿ ಎಂಬುದು ದಿಟ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರೂ ಸೇರಿದಂತೆ ದೇಶದ ಅನೇಕ ಹಿರಿಯರು ಬೇಸರಗೊಂಡು ವ್ಯವಸ್ಥೆಯ ಮೌಲ್ಯ ಕುಸಿತದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ವಿಧಾನಮಂಡಲವು ಜವಾಬ್ದಾರಿಯುತ ಸ್ಥಾನದಲ್ಲಿ ಇರುವುದರಿಂದ ವಿಶ್ವಾಸಪೂರ್ಣ ವ್ಯವಸ್ಥೆ ಬೆಳೆಸಬೇಕಿದೆ. ಮೇಲ್ಮನೆ ಬೇಕೋ ಬೇಡವೊ ಎನ್ನುವ ಮಟ್ಟಕ್ಕೆ ಚರ್ಚೆ ನಡೆದಿದೆ. ಹೀಗಾಗಿ ಸಂವಿಧಾನ ರೂಪಿಸಿದವರ ಉದ್ದೇಶಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ. ಹೀಗಾಗಿ ಎಲ್ಲರನ್ನೂ ಒಳಗೊಂಡ ಸಮಾಲೋಚನಾ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಸ್ಪೀಕರ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ