ಬೆಳಗಾವಿ: ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರೊಂದಿಗೆ ಬಿಜೆಪಿ ಸೇರಿದವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಹಾಗೂ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲು ಅವರು ದೆಹಲಿಗೆ ತೆರಳಿರಬಹುದು ಎಂದು ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಅವರು ಮಂಗಳವಾರ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಜೊತೆಗೆ ಬಂದವರ ಹಿತ ಕಾಯಲು ರಮೇಶ ಜಾರಕಿಹೊಳಿ ಮುಂದಾಗಿದ್ದಾರೆ ಅದರಲ್ಲಿ ಯಾವುದೇ ತಪ್ಪಿಲ್ಲ ಎಂದರು.
ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ. ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಸಿ.ಪಿ.ಯೋಗೀಶ್ವರ ಅವರನ್ನು ಸಚಿವರನ್ನಾಗಿ ಮಾಡಬೇಕು ಎನ್ನುವ ಒತ್ತಾಯ ಹಿಂದಿನಿಂದಲೂ ಬಂದಿದೆ. ಯಾರನ್ನೂ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎನ್ನುವುದು ಮುಖ್ಯಮಂತ್ರಿ ಅವರ ಪರಮಾಕಾರವಿರುತ್ತದೆ ಎಂದರು.
ರಾಜ್ಯದಲ್ಲಿ ಮರಾಠಾ ಅಭಿವೃದ್ಧಿ ನಿಗಮ ಅವಶ್ಯವಿತ್ತು. ಅವರ ಅಭಿವೃದ್ಧಿಗಾಗಿ ಸರ್ಕಾರ ಕ್ರಮ ವಹಿಸಬೇಕಲ್ಲವೇ? ಅವರೂ ನಮ್ಮವರೇ, ನಮ್ಮ ಕನ್ನಡಿಗರೇ ಈ ವಿಷಯದಲ್ಲಿ ಸಂಘಟನೆಗಳು ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ತಿಳಿಸಿದರು.
ಒಕ್ಕಲಿಗರ ಅಭಿವೃದ್ಧಿ ನಿಗಮ ಆಗಬೇಕು ಎನ್ನುವ ಒತ್ತಾಯ ಬಹಳ ದಿನಗಳಿಂದ ಇದೆ. ರಾಜ್ಯ ಸರ್ಕಾರ ಲಿಂಗಾಯತ ಅಭಿವೃದ್ಧಿ ನಿಗಮ ರಚಿಸಿದಂತೆ ಒಕ್ಕಲಿಗರ ಅಭಿವೃದ್ಧಿ ನಿಗಮ ರಚಿಸಲು ನನ್ನ ಬೆಂಬಲವೂ ಇದೆ ಎಂದರು.
ಕಾಲೇಜು ಆರಂಭಕ್ಕೆ ವಿದ್ಯಾರ್ಥಿಗಳು, ಪೋಷಕರ ಒತ್ತಾಯ ಇತ್ತು ಹೀಗಾಗಿ ಆನ್ಲೈನ್, ಆಫ್ಲೈನ್ ಕ್ಲಾಸ್ ಎರಡೂ ಆರಂಭಿಸಿದ್ದೇವೆ. ಸ್ವಇಚ್ಚೆಯಿಂದ ಬರುವ ವಿದ್ಯಾರ್ಥಿಗಳ ಅನುಕೂಲಕ್ಕೆ ಆಫ್ಲೈನ್ ಕ್ಲಾಸ್ ಶುರು ಮಾಡಿದ್ದೇವೆ. ವಿದ್ಯಾರ್ಥಿಗಳು ಕಾಲೇಜು ಬರುವ ಮುನ್ನ ಕೊರೋನಾ ಸೋಂಕು
ತಪಾಸಣೆ ಮಾಡುತ್ತಿದ್ದೇವೆ. ತಪಾಸಣೆ ಮಾಡುವ ವೇಳೆ ಪಾಸಿಟಿವ್ ಬಂದವರಿಗೆ ಕಾಲೇಜು ಬರಲು ಅವಕಾಶವಿಲ್ಲ. ಎಲ್ಲ ರೀತಿಯ ಸುರಕ್ಷತಾ ಕ್ರಮಗಳಿಗೆ ಆದ್ಯತೆ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ದಿನೇದಿನೇ ಹೆಚ್ಚೆಚ್ಚು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದಾರೆ ಎಂದು ಹೇಳಿದರು.