ರಾಜ್ಯ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭ : ಮೊದಲ ದಿನ ಅಗಲಿದ ಗಣ್ಯರುಗಳಿಗೆ ಸಂತಾಪ ಸೂಚಿಸಲಾಯಿತು

ಬೆಳಗಾವಿ: ರಾಜ್ಯ ಸಮ್ಮಿಶ್ರ ಸರ್ಕಾರದ ಬಹುನಿರೀಕ್ಷಿತ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಮೊದಲ ದಿನವಾದ ಇಂದು ಅಗಲಿದ ಗಣ್ಯರುಗಳಿಗೆ ಸಂತಾಪ ಸೂಚಿಸಲಾಯಿತು.

ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಅವರು ಮಂಡಿಸಿದ ಸಂತಾಪ ಸೂಚಕ ಪ್ರಸ್ತಾವನೆ ಮೇಲೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿದರು.

ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರು ದೂರದೃಷ್ಟಿಯ ನಾಯಕರಾಗಿದ್ದರು. ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ ಎಂದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದರು. ಮುಖ್ಯಮಂತ್ರಿ, ಗ್ರಾಮ ಸಡಕ್, ಸರ್ವಶಿಕ್ಷಣ ಅಭಿಯಾನ, ಸುವರ್ಣ ಚತುಷ್ಪಥ ಯೋಜನೆ, ಕೋಕ್ರಾನ್ ಅಣು ಪರೀಕ್ಷೆ ವಾಜಪೇಯಿ ಅವರ ದೂರದೃಷ್ಟಿ ನಾಯಕತ್ವಕ್ಕೆ ಉದಾಹರಣೆಯಾಗಿವೆ ಎಂದರು.

ಭಾರತ-ಪಾಕಿಸ್ತಾನದ ನಡುವೆ ಸೌಹಾರ್ದತೆ ಇರಬೇಕೆಂದು ಬಯಸಿದ್ದ ವಾಜಪೇಯಿ ಅವರು ಈ ಎರಡು ದೇಶಗಳ ನಡುವೆ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದರು. ಆದರೆ, ಪಾಕಿಸ್ತಾನ ವಾಜಪೇಯಿ ಅವರ ವಿಶಾಲ ಹೃದಯವನ್ನು ಅರ್ಥ ಮಾಡಿಕೊಳ್ಳದೆ ದುರುಪಯೋಗ ಪಡಿಸಿಕೊಂಡಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕೇಂದ್ರ ಸಚಿವರಾಗಿದ್ದ ಅನಂತ್‍ಕುಮಾರ್ ಅವರ ಸಾವು ಅಚ್ಚರಿಯ ಜತೆಗೆ ನೋವನ್ನೂ ತಂದಿದೆ. ಉತ್ತಮ ಸಂಸದೀಯ ಪಟುವಾಗಿದ್ದ ಅನಂತ್‍ಕುಮಾರ್ ಅವರು ಆರು ಬಾರಿ ಸಂಸದರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅದೇ ರೀತಿ ಜಾಫರ್ ಶರೀಫ್ ಅವರು ಏಳು ಬಾರಿ ಸಂಸದರಾಗಿ ರೈಲ್ವೆ ಇಲಾಖೆಯಲ್ಲಿ ರಾಜ್ಯ ಮತ್ತು ದೇಶಕ್ಕೆ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.

ಇತ್ತೀಚೆಗೆ ನಮ್ಮನ್ನಗಲಿದ ಅಂಬರೀಶ್ ಅವರು ಉತ್ತಮ ಸ್ನೇಹ ಜೀವಿ, ರಾಜಕೀಯದಲ್ಲಿ ತಮ್ಮದೇ ಆದ ರೀತಿಯಲ್ಲಿ ಛಾಪು ಮೂಡಿಸಿದ್ದವರು. ಸಿನಿಮಾ ಹಂಚಿಕೆದಾರನಾಗಿ ವೃತ್ತಿ ಜೀವನ ಆರಂಭಿಸಿದ ನನಗೆ ಅವರೊಂದಿಗೆ ಉತ್ತಮ ಒಡನಾಟವಿತ್ತು. ಕಾವೇರಿ ವಿವಾದದ ಸಂದರ್ಭದಲ್ಲಿ ಅಂಬರೀಶ್ ಅವರು ಕುರ್ಚಿಗೆ ಅಂಟಿಕೊಳ್ಳದೆ ಸಚಿವ ಸ್ಥಾನವನ್ನು ಧಿಕ್ಕರಿಸಿ ರಾಜ್ಯದ ಪರವಾಗಿ ನಿಂತವರು ಎಂದು ಕೊಂಡಾಡಿದರು. ಅದೇ ರೀತಿ ಇತ್ತೀಚೆಗೆ ನಿಧನರಾದ ಮಾಜಿ ಸಚಿವರು ಹಾಗೂ ಮಾಜಿ ಶಾಸಕರ ಗುಣಗಾನ ಮಾಡಿದರು.

ಪ್ರತಿ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ವಾಜಪೇಯಿ ಅತ್ಯುತ್ತಮ ಕವಿಬರಹಗಾರರಾಗಿದ್ದರು. ಅವರ ಸಾವು ದೇಶಕ್ಕೆ ಮತ್ತು ಬಿಜೆಪಿಗೆ ತುಂಬಲಾರದ ನಷ್ಟ ಉಂಟು ಮಾಡಿದೆ. ಅವರು ಕರ್ನಾಟಕಕ್ಕೆ ಭೇಟಿ ನೀಡಿದಾಗಲೆಲ್ಲಾ ನಾನು ಅವರ ಜತೆ ಇರುತ್ತಿದ್ದೆ. ರಾಜ್ಯದಲ್ಲಿ ಸುಮಾರು 40ರಿಂದ 50 ಸಭೆಗಳಲ್ಲಿ ನಾನು ಅವರ ಜತೆ ಭಾಗವಹಿಸಿದ್ದೆ. ವಾಜಪೇಯಿ ಸ್ವತಂತ್ರ ಭಾರತದ ಅಜಾತ ಶತ್ರು. 10 ಬಾರಿ ಸಂಸದರಾಗಿ, 8ಬಾರಿ ರಾಜ್ಯಸಭಾ ಸದಸ್ಯರಾಗಿ, ವಿವಿಧ ಸಚಿವಾಲಯಗಳ ಮುಖ್ಯಸ್ಥರಾಗಿ, ಪ್ರಧಾನಿಯಾಗಿ ಅವರ ಸೇವೆ ಅವಿಸ್ಮರಣೀಯ ಎಂದರು. ಕೇಂದ್ರದ ಸಚಿವರಾಗಿದ್ದ ಅನಂತ್‍ಕುಮಾರ್ ನನಗೆ ಆತ್ಮೀಯ ಸ್ನೇಹಿತರು.

ಬೆಂಗಳೂರಿಗೆ ಬಂದು ಹೈಕೋರ್ಟ್ ವಕೀಲರಾಗಿ ಕೆಲಸ ಮಾಡುತ್ತೇನೆ ಎಂದು ಮುಂದಾದಾಗ ನಾನು ಬಾಬೂರಾವ್ ದೇಶಪಾಂಡೆ ಅವರ ಕೊಠಡಿ ಸಂಖ್ಯೆ 154ರಲ್ಲಿ ಅನಂತ್‍ಕುಮಾರ್ ಅವರ ಜತೆ ಮಾತುಕತೆ ನಡೆಸಿ ರಾಜಕೀಯದಲ್ಲಿ ನಿಮಗೆ ಉತ್ತಮ ಭವಿಷ್ಯವಿದೆ ಎಂದು ಸಲಹೆ ನೀಡಿದ್ದೆ. ಅದರಂತೆ ಅವರು ಕರಿಕೋಟ್ ಕಳಚಿ ರಾಜಕೀಯದಲ್ಲಿ ತೊಡಗಿಸಿಕೊಂಡರು. ನಾವಿಬ್ಬರೂ ಜತೆಯಾಗಿ ಪಕ್ಷ ಕಟ್ಟಿದ್ದೇವೆ. ಅವರಿಂದಾಗಿ ಬಿಜೆಪಿ ಬೆಳವಣಿಗೆಯ ಇತಿಹಾಸ ಅವರಿಲ್ಲದೇ ಇರುವ ಬಿಜೆಪಿಯನ್ನು ಊಹಿಸಿಕೊಳ್ಳುವುದು ಕಷ್ಟ ಎಂದು ಹೇಳಿದರು.

ಅಂಬರೀಶ್ ಉತ್ತಮ ನಾಯಕ ನಟರಾಗಿದ್ದರು. ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು ಎಂದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ವಾಜಪೇಯಿ ಬಲಪಂಥೀಯರಾಗಿದ್ದರೂ ಅವರ ವಿಚಾರಗಳು ದೂರದೃಷ್ಟಿಯಿಂದ ಕೂಡಿದ್ದವು. ಹಾಗಾಗಿ ವಾಜಪೇಯಿ ಅವರನ್ನು ಪಕ್ಷಾತೀತವಾಗಿ ಅಭಿಮಾನಿಸುವ ಜನ ಇದ್ದರು ಎಂದು ಹೇಳಿದರು.

belagavi, winter-session,congress-jds alliance

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ