ಸೇನಾ ಮುಖ್ಯಸ್ಥರ ನೇಪಾಳ ಭೇಟಿ ನ.4ರಿಂದ ಭಾರತ ಜೊತೆ ಸಹಜ ಸಂಬಂಧಕ್ಕೆ ಒತ್ತು: ನೇಪಾಳ ಪ್ರಧಾನಿ ಒಲಿ ಅಪೇಕ್ಷೆ ಪ್ರಕಟ

ಹೊಸದಿಲ್ಲಿ :ಭಾರತದ ಸೇನಾ ಮುಖ್ಯಸ್ಥ ಜ. ನರವಾನೆ ಅವರು ನ.4ರಿಂದ ನೇಪಾಳಕ್ಕೆ ಮೂರು ದಿನಗಳ ಭೇಟಿ ನೀಡಲಿದ್ದು, ಈ ಸಂದರ್ಭ ಅವರಿಗೆ ನೇಪಾಳ ರಾಷ್ಟ್ರಾಧ್ಯಕ್ಷರಾದ ವಿದ್ಯಾದೇವಿ ಭಂಡಾರಿ ಅವರು ಜ.ನರವಾನೆ ಅವರಿಗೆ ನೇಪಾಳ ಸೇನೆಯ ಗೌರವ ಮುಖ್ಯಸ್ಥ ಎಂಬ ಗೌರವ ಪ್ರದಾನಿಸಲಿದ್ದಾರೆ. ಈ ಸಂದರ್ಭದಲ್ಲೇ ನೇಪಾಳ ಸರಕಾರದ ನಿಲುವಿನಲ್ಲೂ ವ್ಯತ್ಯಾಸಗಳು ಕಂಡುಬರಲಾರಂಭಿಸಿದ್ದು, ನೇಪಾಳದ ಪ್ರಧಾನಿ ಕೆ.ಪಿ.ಶರ್ಮ ಒಲಿ ಅವರು ವಿವಾದಗಳಿಗೆ ವಿದಾಯ ಹೇಳಿ ಭಾರತದೊಂದಿಗಿನ ಸಂಬಂಧಗಳನ್ನು ಸಹಜಗೊಳಿಸುವ ಸುಳಿವು ನೀಡಲಾರಂಭಿಸಿದ್ದಾರೆ.ಇದಕ್ಕೆ ಪುಷ್ಟಿ ನೀಡುವಂತೆ, ಬಹುದ್ದೇಶಿ ಪಂಚೇಶ್ವರ ಯೋಜನೆಯನ್ನು ಪುನರಾರಂಭಿಸಲು ತನ್ನ ಸರಕಾರ ಬಯಸಿದೆ ಎಂಬ ಸಂದೇಶವನ್ನೂ ಒಲಿ ರವಾನಿಸಿದ್ದಾರೆ.
ನೇಪಾಳವು ಕಾಲಾಪಾನಿ ನಕ್ಷೆ ಗೊಂದಲ ಸೃಷ್ಟಿಸಿರುವುದಕ್ಕೆ ಅಲ್ಲಿನ ಆಂತರಿಕ ರಾಜಕೀಯವೇ ಕಾರಣ . ಅಲ್ಲಿ ಆಳುವ ಪಕ್ಷದೊಳಗಿನ ಆಂತರಿಕ ತಿಕ್ಕಾಟವೇ ಇದಕ್ಕೆ ಕಾರಣ ಎಂಬುದಾಗಿ ಭಾರತ ಭಾವಿಸಿದೆ. ಇಂತಹ ಎಲ್ಲ ಅಪಸವ್ಯಗಳ ಹೊರತಾಗಿಯೂ ಈ ಎರಡು ಅತ್ಯಂತ ಪ್ರಾಚೀನ ಬಾಂಧವ್ಯ ಹೊಂದಿರುವ ದೇಶಗಳ ಸಂಬಂಧವನ್ನು ಸಹಜಗೊಳಿಸಲು ಭಾರತ ಸದಾ ಪ್ರಾಮಾಣಿಕ ಬದ್ಧತೆ ಹೊಂದಿದೆ.ನೇಪಾಳದೊಂದಿಗೆ ಭಾರತ ಸದಾ ಉತ್ತಮ ಬಾಂಧವ್ಯ ಹೊಂದಿರಲು ಬಯಸುತ್ತಿದೆ.
ನೇಪಾಳದ ಆಳುವ ಕಮ್ಯುನಿಸ್ಟ್ ಪಾರ್ಟಿಯೊಳಗಿನ ತೀವ್ರ ಆಂತರಿಕ ತಿಕ್ಕಾಟಗಳ ಕಾರಣದಿಂದಾಗಿ ಕಾಲಾಪಾನಿ ನಕ್ಷೆ ವಿವಾದ ಸೃಷ್ಟಿಯಾಗಿತ್ತು. ಭಾರತದ ಪ್ರದೇಶವನ್ನು ತನ್ನದೆಂದು ವಾದಿಸಿ ನೇಪಾಳ ಉದ್ಧಟತನ ಮೆರೆದಿತ್ತು.ಹಾಗೆಯೇ ಹಿಂದುಗಳ ಪವಿತ್ರ ಕ್ಷೇತ್ರ ಮಾನಸಸರೋವರಕ್ಕೆ ಯಾತ್ರೆ ಕೈಗೊಳ್ಳಲು ಅನುಕೂಲ ಕಲ್ಪಿಸುವಲ್ಲಿ ಲಿಪುಲೇಖ್ ಮೂಲಕ ಸಾಗುವ ರಸ್ತೆ ನಿರ್ಮಾಣವನ್ನು ಕೂಡಾ ನೇಪಾಳ ಸರಕಾರ ವಿವಾದವನ್ನಾಗಿಸಿತ್ತು. ಇದೆಲ್ಲದ ಹಿಂದೆ ಕುಟಿಲ ಚೀನಾದ ಹುನ್ನಾರಗಳಿದ್ದುದನ್ನು ಕೂಡಾ ಭಾರತ ಅರಿತುಕೊಂಡಿತ್ತು. ಆದರೆ ಇದೀಗ ಇಂತಹ ಎಲ್ಲ ವಿವಾದಗಳಿಗೆ ಅಂತ್ಯ ಹೇಳಲು ಒಲಿ ಸರಕಾರ ಮನ ಮಾಡಿದಂತಿದೆ. ಈ ಹಿನ್ನೆಲೆಯಲ್ಲೇ ಭಾರತೀಯ ಸೇನಾ ಮುಖ್ಯಸ್ಥ ಜ.ನರವಾನೆ ಅವರಿಗೆ ಕೆಂಪುಹಾಸು ಸ್ವಾಗತಕ್ಕೆ ಸಿದ್ಧವಾಗಿರುವ ನೇಪಾಳ , ಅವರಿಗೆ ನೇಪಾಳ ಸೇನೆಯ ಗೌರವ ಮುಖ್ಯಸ್ಥ ಪುರಸ್ಕಾರ ನೀಡಿ ಗೌರವಿಸಲೂ ಮುಂದಾಗಿರುವುದು ಗಮನ ಸೆಳೆದಿದೆ.
ಅಲ್ಲದೆ ಭಾರತದ ಜೊತೆ ಸೇರಿ ಹಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಬಹುದ್ದೇಶಿ ಪಂಚೇಶ್ವರ ಯೋಜನೆ ಸೇರಿದಂತೆ, ಹಲವು ಜಲವಿದ್ಯುತ್ ಯೋಜನೆಗಳನ್ನು ಪುನರಾರಂಭಿಸಲೂ ನೇಪಾಳ ಪ್ರಧಾನಿ ಒಲಿ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಭಾರತ ಈಗಾಗಲೇ ನೇಪಾಳದ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಕ್ಷೇತ್ರಗಳಲ್ಲಿ ಪೂರ್ಣ ಸಹಕಾರ ನೀಡಲು ತನ್ನ ಪ್ರಾಮಾಣಿಕ ಆಶಯಗಳನ್ನು ವ್ಯಕ್ತಪಡಿಸಿದ್ದನ್ನು ಕೂಡಾ ಇಲ್ಲಿ ಸ್ಮರಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ