ಲಸಿಕೆ ದಕ್ಷತೆ ಹೊರಹಾಕಿದ ಫಲಿತಾಂಶ ಆಸ್ಟ್ರಾಜೆನಿಕಾ ಲಸಿಕೆ ಶೇ. 90 ಪರಿಣಾಮಕಾರಿ

ಹೊಸದಿಲ್ಲಿ: ಕೊರೋನಾ ವೈರಸ್ ನಿಯಂತ್ರಿಸುವಲ್ಲಿ ತನ್ನ ಲಸಿಕೆಯು ಯಾವುದೇ ಗಂಭೀರ ಅಡ್ಡ ಪರಿಣಾಮಗಳಿಲ್ಲದೆ ಶೇಕಡಾ 90 ಪರಿಣಾಮಕಾರಿಯಾಗಿದೆ ಎಂದು ಸೋಮವಾರ ಆಸ್ಟ್ರಾಜೆನಿಕಾ ತಿಳಿಸಿದೆ.
ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಿಂದ ಅಭಿವೃದ್ಧಿ ಪಡಿಸಲಾಗಿರುವ ಲಸಿಕೆಯನ್ನು ಕನಿಷ್ಠ ಒಂದು ತಿಂಗಳಲ್ಲಿ ಅರ್ಧದಿಂದ ಒಂದು ಡೋಸ್‍ನಂತೆ ತೆಗೆದುಕೊಂಡರೆ ರೋಗವನ್ನು ತಡೆಯುವಲ್ಲಿ ಶೇ. 90 ಪರಿಣಾಮಕಾರಿಯಾಗಿರುತ್ತದೆ ಎಂದು ಬ್ರಿಟನ್ ಮತ್ತು ಬ್ರೆಜಿಲ್‍ನಲ್ಲಿ ನಡೆಸಿದ ಕೊನೆ ಹಂತದ ಪ್ರಯೋಗದ ಫಲಿತಾಂಶ ತಿಳಿಸಿದೆ.
ಅದೇ ರೀತಿ ಕನಿಷ್ಠ ಒಂದು ತಿಂಗಳ ಅಂತರದಲ್ಲಿ ಎರಡು ಪೂರ್ಣ ಡೋಸ್‍ಗಳನ್ನು ನೀಡದಾಗ ಶೇ. 62 ಪರಿಣಾಮಕಾರಿಯನ್ನು ತೋರಿಸಿದೆ. ಎರಡೂ ಡೋಸ್ ವ್ಯವಸ್ಥೆಗಳಲ್ಲಿಯೂ ಶೇ. 70 ಸರಾಸರಿ ಪರಿಣಾಮವನ್ನು ತೋರಿದ್ದು ಎಲ್ಲಾ ಫಲಿತಾಂಶಗಳೂ ತೃಪ್ತಿಕರವಾಗಿದೆ ಎನ್ನುವುದು ಗಮನಾರ್ಹ.
ಕೊರೋನಾ ವಿರುದ್ಧ ಲಸಿಕೆಯು ಪರಿಣಾಮಕಾರಿಯಾಗಿರುವುದರ ಜತೆಗೆ ಸುರಕ್ಷತೆಯನ್ನು ಸಹ ದೃಢಪಡಿಸುತ್ತದೆ. ಅಲ್ಲದೆ, ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯ ಮೇಲೆಯೂ ತಕ್ಷಣದ ಪರಿಣಾಮ ಬೀರುತ್ತದೆ ಎಂದು ಆಸ್ಟ್ರಾಜೆನಿಕಾದ ಮುಖ್ಯ ಕಾರ್ಯನಿರ್ವಾಹಕಾಕಾರಿ ಪಾಸ್ಕರ್ ಸೊರಿಯಟ್ ತಿಳಿಸಿದ್ದಾರೆ.
ಇದೇ ವೇಳೆ ಬ್ರಿಟಿಷ್ ಔಷಧ ತಯಾರಕರ ಪ್ರಾಥಮಿಕ ಪ್ರಯೋಗದ ಫಲಿತಾಂಶವು ಸಾಂಕ್ರಾಮಿಕದ ವಿರುದ್ಧ ಹೊಸ ಪ್ರಗತಿಯನ್ನು ಹೊರಹಾಕಿದೆ. ಇತ್ತೀಚೆಗೆ ಅಮೆರಿಕ ಮೂಲದ ಮಾಡರ್ನಾ, ಫೈಜರ್ ಮತ್ತು ಜರ್ಮನಿಯ ಬಯೋಎನ್‍ಟೆಕ್ ಲಸಿಕೆಗಳ ಪರಿಣಾಮಕಾರಿ ಫಲಿತಾಂಶ ಬಹಿರಂಗವಾದ ಬಳಿಕ ಆಸ್ಟ್ರಾಜೆನಿಕಾ ಲಸಿಕೆಯ ಫಲಿತಾಂಶ ಬಹಿರಂಗವಾಗಿದ್ದು ಭರವಸೆ ಮೂಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ