ಸಂಸತ್ತಲ್ಲಿ ಇಂದು ಹಲ್ವಾ ತಯಾರಿಕೆ ಸಮಾರಂಭ

ಹೊಸದಿಲ್ಲಿ: ಫೆಬ್ರವರಿ 1ರಂದು ನಡೆಯಲಿರುವ ಕೇಂದ್ರ ಬಜೆಟ್ ಹಿನ್ನೆಲೆ ಬಜೆಟ್‍ಗೆ ದಾಖಲೆಗಳನ್ನು ಮುದ್ರಿಸುವ ಪ್ರಕ್ರಿಯೆಗೆ ಚಾಲನೆ ನೀಡುವ ಹಲ್ವಾ ತಯಾರಿಕಾ ಸಮಾರಂಭವನ್ನು ಹಣಕಾಸು ಸಚಿವಾಲಯ ಶನಿವಾರ ಹಮ್ಮಿಕೊಂಡಿದೆ . ಕೊರೋನಾ ಹಿನ್ನೆಲೆಯಲ್ಲಿ ಹಲ್ವಾ ತಯಾರಿಕೆ ಸಮಾರಂಭ ಇರುವುದಿಲ್ಲ ಎಂದು ಈ ಮೊದಲು ವರದಿಗಳು ತಿಳಿಸಿದ್ದವು.
ಸಂಸತ್ ಭವನದ ಉತ್ತರ ಬ್ಲಾಕ್‍ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ಸಚಿವಾಲಯದ ಕಾರ್ಯದರ್ಶಿಗಳು ಮತ್ತು ಇತರೆ ಅಕಾರಿಗಳು ಉಪಸ್ಥಿತರಿರಲಿದ್ದಾರೆ.
ಸಮಾರಂಭದ ಬಳಿಕ, ಬಜೆಟ್ ತಯಾರಿಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಲಿರುವ ಸಚಿವಾಲಯದ ಉದ್ಯೋಗಿಗಳು ಉತ್ತರ ಬ್ಲಾಕ್‍ನ ನೆಲಮಾಳಿಗೆಯಲ್ಲಿ 10 ದಿನಗಳ ಕಾಲ ಬಜೆಟ್ ದಾಖಲೆಗಳನ್ನು ಮುದ್ರಿಸುವ ಪ್ರಕ್ರಿಯೆಯಲ್ಲಿ ತೊಡಗಲಿದ್ದಾರೆ ಎಂದು ಅಕಾರಿಗಳು ತಿಳಿಸಿದ್ದಾರೆ.
ಮಂಡನೆಗೂ ಮುನ್ನ ವಾರ್ಷಿಕ ಬಜೆಟ್ ಸೋರಿಕೆಯಾಗುವುದನ್ನು ನಿಯಂತ್ರಿಸುವುದಕ್ಕಾಗಿ ಸಂಸತ್ತಿನಲ್ಲಿ ಹಣಕಾಸು ಸಚಿವರಿಂದ ಬಜೆಟ್ ಮಂಡನೆಯಾದ ಬಳಿಕವಷ್ಟೇ ಈ ಉದ್ಯೋಗಿಗಳು ಹೊರಗೆ ಬರುವುದು ಎಂದು ಅಕಾರಿಗಳು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ