ಬೆಂಗಳೂರು: ಕೊರೋನಾ ಸಂಕಷ್ಟದ ನಡುವೆಯೂ ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಬುಧವಾರ ಮತದಾನ ನಡೆದಿದ್ದು, ಕೆಲವೆಡೆ ಸಣ್ಣ-ಪುಟ್ಟ ಗೊಂದಲ ಬಿಟ್ಟರೆ ಉಳಿದಂತೆ ಶಾಂತಿಯುತ ಹಾಗೂ ದಾಖಲೆಯ ಮತದಾನ ನಡೆದಿದೆ.
ಬೆಳಗ್ಗೆ 8 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಶುರುವಿನಲ್ಲಿ ನೀರಸವಾಗಿತ್ತಾದರೂ ಮಧ್ಯಾಹ್ನ 12 ಗಂಟೆ ನಂತರ ಬಿರುಸುಗೊಂಡಿತು. ಸಂಜೆ 5 ಗಂಟೆಗೆ ಮತದಾನ ಅಂತ್ಯಗೊಳ್ಳುವ ವೇಳೆಗೆ ಶೇಕಡಾವಾರು ಮತದಾನ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ.73.32 ರಷ್ಟು ಮತದಾನವಾಗಿದ್ದರೆ, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಶೇ.66.2 ರಷ್ಟು ಮತಗಳು ಚಲಾವಣೆಯಾಗಿವೆ. ಇನ್ನು ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಶೇ.74.84 ರಷ್ಟು ಮತದಾನದ ಹಕ್ಕು ಚಲಾವಣೆಯಾಗಿದ್ದು, ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಶೇ.70.11 ರಷ್ಟು ಮತದಾನವಾಗಿವೆ.
ಈ ನಾಲ್ಕೂ ಕ್ಷೇತ್ರಗಳಲ್ಲಿ 2014 ರಲ್ಲಿ ನಡೆದಿದ್ದ ಚುನಾವಣೆ ಸಂದರ್ಭದಲ್ಲಿ ಚಲಾವಣೆಯಾಗಿದ್ದ ಮತಗಳಿಗಿಂತ ಹೆಚ್ಚಿನ ಮತಗಳು ಚಲಾವಣೆಯಾಗಿವೆ. ಮಹಿಳಾ ಮತದಾರರು ಕೊಂಚ ಹಿಂದುಳಿದಿದ್ದು, ಪುರುಷ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿನ 11 ಇತರೆ ಮತದಾರರು ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿನ ಮೂವರು ಇತರೆ ಮತದಾರರ ಪೈಕಿ ತಲಾ ಒಬ್ಬೊಬ್ಬರು ಮಾತ್ರ ಮತ ಚಲಾಯಿಸಿದ್ದು, ಆಗ್ನೇಯ ಪದವೀಧರ ಮತ್ತು ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಯಾವೊಬ್ಬ ಇತರೆ ಮತದಾರರೂ ಹಕ್ಕು ಚಲಾಯಿಸಿಲ್ಲ.
ನಾಲ್ಕೂ ಕ್ಷೇತ್ರದ ಅಭ್ಯರ್ಥಿಗಳ ಹಣೆಬರಹವು ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ನ.2 ರವರೆಗೆ ಸ್ಟ್ರಾಂಗ್ ರೂಮ್ನಲ್ಲಿ ಭಾರೀ ಬಿಗಿ ಬಂದೋಬಸ್ತ್ನಲ್ಲಿ ಇರಲಿವೆ. ಸೋಮವಾರ ಮತ ಎಣಿಕೆ ನಡೆಯಲಿದ್ದು, ಅದೇ ದಿನ ಫಲಿತಾಂಶ ಹೊರಬೀಳಲಿದೆ.
ಇಷ್ಟು ದಿನ ಮತಪ್ರಚಾರದ ತಂತ್ರಗಳನ್ನು ರೂಪಿಸಿ, ಚುನಾವಣೆ ಎದುರಿಸಿರುವ ಅಭ್ಯರ್ಥಿಗಳಿಗೆ ಇನ್ನೀಗ ಸೋಲು-ಗೆಲುವಿನ ಚಿಂತೆ ಶುರುವಾಗಿದೆ. ಸದ್ಯ ನಾಲ್ಕು ದಿನಗಳವರೆಗೆ ಯಾವುದೇ ತಲೆನೋವಿಲ್ಲ.
ಮತಪರೀಕ್ಷೆಗೆ ಒಡ್ಡಿಕೊಂಡಿರುವ ಅನೇಕ ಅಭ್ಯರ್ಥಿಗಳಿಗೆ ಈಗಾಗಲೇ ಒಂದು ಹಂತಕ್ಕೆ ತಂತಮ್ಮ ಫಲಿತಾಂಶ ಗೊತ್ತಾಗಿದ್ದು, ಆದರೂ ಮತಗಳ ಲೆಕ್ಕಾಚಾರ ಹಾಕಲು ಶುರು ಮಾಡಿದ್ದಾರೆ. ಕೆಲವರು ಗೆಲುವಿನ ಭರವಸೆಯಲ್ಲಿದ್ದರೆ, ಹಲವರು ಸೋಲಿನ ಭಯದಲ್ಲಿದ್ದಾರೆ.
ರಾಜಕೀಯ ಪಕ್ಷಗಳ ನಾಯಕರು ತಮ್ಮ ಅಭ್ಯರ್ಥಿಯೇ ಗೆಲ್ಲುವುದು ಎಂದು ಖಚಿತವಾಗಿ ಹೇಳಿಕೊಳ್ಳಲಾರಂಭಿಸಿದ್ದಾರೆ. ಆದರೆ, ಸತ್ವಪರೀಕ್ಷೆಯ ಫಲಿತಾಂಶ ಹೊರಬಿದ್ದ ಬಳಿಕವಷ್ಟೇ ಗೆಲುವಿನ ಹಾರ ಯಾರ ಕೊರಳಿಗೆ ಬೀಳಲಿದೆ ಎಂಬುದು ಸ್ಪಷ್ಟವಾಗುತ್ತದೆ.