ಇಂದು ಸಾರಿಗೆ ನೌಕರರ ಪ್ರತಿಭಟನೆ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಮತ್ತು ಸರ್ಕಾರಿ ಸೌಲಭ್ಯಗಳನ್ನು ಕೊಡಬೇಕೆಂದು ಆಗ್ರಹಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮದ ನೌಕರರ ಸಂಘಗಳು ಗುರುವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಿವೆ. ಆದರೆ, ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಬಸ್‍ಗಳ ಸಂಚಾರ ಎಂದಿನಂತೆ ಇರಲಿವೆ.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ವಿಧಾನಸೌಧದವರೆಗೆ ಗುರುವಾರ ಬೆಳಗ್ಗೆ 11 ಗಂಟೆಗೆ ಪ್ರತಿಭಟನಾ ರ್ಯಾಲಿ ಹೋಗಲಿದ್ದು, ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಯಲಿದೆ. ಇದರಲ್ಲಿ ಕೆಎಸ್‍ಆರ್‍ಟಿಸಿ, ಎನ್‍ಡಬ್ಲೂಕೆಎಸ್‍ಆರ್‍ಟಿಸಿ, ಎನ್‍ಇಕೆಆರ್‍ಟಿಸಿ ಹಾಗೂ ಬಿಎಂಟಿಸಿಯ ನಾಲ್ಕು ನಿಗಮಗಳ ಮೂರರಿಂದ ನಾಲ್ಕು ಸಾವಿರ ನೌಕರರು ಹಾಗೂ ಅವರ ಕುಟುಂಬಸ್ಥರು ಪಾಲ್ಗೊಳ್ಳಲಿದ್ದಾರೆ.
ಕೊರೋನಾ ಸಂದರ್ಭದಲ್ಲಿ ನಿಗಮದ ನೌಕರರು ಕೊರೋನಾ ವಾರಿಯರ್ಸ್‍ಗಳಾಗಿ ಕರ್ತವ್ಯ ನಿರ್ವಹಿಸಿ ಮೃತಪಟ್ಟವರ ಕುಟುಂಬಕ್ಕೆ ಜೀವವಿಮಾವನ್ನು ಈ ಕೂಡಲೇ ಕೊಡಬೇಕೆಂದು ಒತ್ತಾಯಿಸಿ ಕೆಎಸ್‍ಆರ್‍ಟಿಸಿ ಯುನಿಯನ್‍ನ ಚಂದ್ರಶೇಖರ್ ಹಾಗೂ ಮಹಾಂತೇಶ್ ಒತ್ತಾಯಿಸಿದ್ದಾರೆ.
ಸಾರಿಗೆ ನೌಕರರ ಪ್ರತಿಭಟನೆಗೆ ರೈತ ಸಂಘ ಸಾಥ್: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಹಾಗೂ ಇನ್ನಿತರೆ ಬೇಡಿಕೆ ಈಡೇರಿಕೆಗಾಗಿ ಗುರುವಾರ ಸಾರಿಗೆ ನೌಕರರು ನಡೆಸುವ ಪ್ರತಿಭಟನೆಗೆ ರೈತಸಂಘ ಮತ್ತು ಹಸಿರು ಸೇನೆ ಬೆಂಬಲ ಸೂಚಿಸಿದೆ. ಬೆಳಗ್ಗೆ 11 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ವಿಧಾನಸೌಧದ ವರೆಗೆ ರ್ಯಾಲಿ ನಡೆಸಲಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ