ಉಪಚುನಾವಣಾ ಪ್ರಚಾರ ಅಖಾಡಕ್ಕೆ ಯಡಿಯೂರಪ್ಪ

ಬೆಂಗಳೂರು: ಎರಡು ವಿಧಾನಸಭಾ ಕ್ಷೇತ್ರದ ಹಾಗೂ ನಾಲ್ಕು ವಿಧಾನ ಪರಿಷತ್ ಕ್ಷೇತ್ರದ ಉಪಚುನಾವಣೆ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿಯಲಿದ್ದು, ಕಾವು ಇನ್ನಷ್ಟು ಹೆಚ್ಚಿಸಲಿದೆ.
ವಿಧಾನಸಭಾ ಉಪಚುನಾವಣೆ ಸಂಬಂಧ ಪಕ್ಷಗಳಲ್ಲಿ ಬಿರುಸಿನ ಪ್ರಚಾರ ಆರಂಭವಾಗಿದ್ದು, ಆರ್.ಆರ್.ನಗರ ಹಾಗೂ ಶಿರಾದಲ್ಲಿ ಪ್ರಮುಖ ನಾಯಕರು ಹಾಗೂ ಮುಖಂಡರೊಂದಿಗೆ ಬಿಜೆಪಿ ಪ್ರಚಾರದಲ್ಲಿ ಮುಂದಿದೆ. ಇನ್ನು ಕಾಂಗ್ರೆಸ್‍ನಲ್ಲಿ ಬಣಗಳಾಗಿ ಪ್ರಚಾರ ಆರಂಭಿಸಿದ್ದು, ಮುಖಂಡರಲ್ಲಿ ಒಗ್ಗಟ್ಟು ಕಂಡುಬರುತ್ತಿಲ್ಲ. ಜೆಡಿಎಸ್ ಸ್ಥಳೀಯ ನಾಯಕರ ಓಡಾಟ ಹೆಚ್ಚಿದ್ದು ಪ್ರಮುಖ ಮುಖಂಡರು ಪ್ರಚಾರದಲ್ಲಿ ಅಷ್ಟಾಗಿ ತೊಡಗಿಕೊಂಡಿಲ್ಲ. ಇದೇ ವೇಳೆ ಸಿಎಂ ಯಡಿಯೂರಪ್ಪ ಪ್ರಚಾರಕ್ಕೆ ಧುಮುಕಲಿದ್ದು, ಕ್ಷೇತ್ರಗಳ ಚಿತ್ರಣ ಬದಲಾಗಲಿದೆ.
ಉಪಚುನಾವಣೆ ಹಿನ್ನೆಲೆ ಯಾರ್ಯಾರು, ಎಲ್ಲೆಲ್ಲಿ ಯಾವಾಗ ಪ್ರಚಾರ ನಡೆಸಬೇಕು ಎಂಬುದರ ಬಗ್ಗೆ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಅದರಂತೆ ಸಚಿವರು, ಸಂಸದರು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಇನ್ನು ಪ್ರತಿಷ್ಠೆಯ ಕಣವಾಗಿರುವ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ ಅವರ ಗೆಲುವಿಗೆ ಶ್ರಮಿಸಲಿರುವ ಯಡಿಯೂರಪ್ಪ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವೂ ಭರ್ಜರಿ ಪ್ರಚಾರ ನಡೆಸಲಿದ್ದಾರೆ.
ರಂಗೇರುತ್ತಿರುವ ಬಿಜೆಪಿ ಚುನಾವಣಾ ಪ್ರಚಾರ
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಚಾರಕ್ಕೆ ಇಳಿಯುತ್ತಿದ್ದಂತೆ ಪಕ್ಷಕ್ಕೆ ಇನ್ನಷ್ಟು ಬಲ ಸಿಕ್ಕಂತಾಗಲಿದೆ. ಈಗಾಗಲೇ ಸಿಎಂ ಸೂಚಿಸಿದಂತೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ಸೋಮಣ್ಣ, ಶ್ರೀರಾಮುಲು ಸೇರಿದಂತೆ ಇನ್ನಿತರ ಸಚಿವರುಗಳು ಸಕ್ರಿಯವಾಗಿ ತೊಡಗಿಸಿಕೊಂಡು ಆರ್.ಆರ್.ನಗರ ಹಾಗೂ ಶಿರಾ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಪ್ರಾರಂಭಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ