ಈ ಬಾರಿ ಹಸಿರು ದೀಪಾವಳಿ

ಬೆಂಗಳೂರು: ಕೊರೋನಾಹಾಗೂ ಮಾಲಿನ್ಯದ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳು ಪಟಾಕಿ ನಿಷೇಧಕ್ಕೆ ಗಂಭೀರ ಚಿಂತನೆ ನಡೆದಿದ್ದು, ಕರ್ನಾಟಕವೂ ಇದೇ ಚಿಂತನೆಯಲ್ಲಿದೆ. ಆದರೂ ಈ ಬಾರಿ ಸಣ್ಣದೊಂದು ವಿನಾಯ್ತಿ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ಹಸಿರು ಪಟಾಕಿ ಬಳಸಿ ಎಂದು ಕರೆ ನೀಡಿದೆ.
ಈಗಾಗಲೇ ರಾಷ್ಟ್ರೀಯ ಹಸಿರು ನ್ಯಾಯಪೀಠ ಹಾಗೂ ಕೇಂದ್ರ ಪರಿಸರ ಇಲಾಖೆಯ ಸೂಚನೆ ಮೇರೆಗೆ ರಾಜಸ್ಥಾನ, ಹೊಸದಿಲ್ಲಿ, ಒಡಿಶಾ, ಸಿಕ್ಕಿಂ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳು ಪಟಾಕಿ ನಿಷೇಧದ ಹಾದಿ ಹಿಡಿದಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಶುಕ್ರವಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಿರುವುದಾಗಿ ಪ್ರಕಟಿಸಿದರು.
ಕೊರೋನಾದಿಂದಾಗಿ ರಾಜ್ಯದಲ್ಲಿ ಜನರು ಆರೋಗ್ಯ ಸಂಬಂತ ಸಮಸ್ಯೆಳಿಂದ ಬಳಲುತ್ತಿದ್ದು ಪಟಾಕಿಯಿಂದ ಬಿಡುಗಡೆಯಾಗುವ ರಾಸಾಯನಿಕ ಅಂಶಗಳು ಉಸಿರಾಟ,ಶ್ವಾಸಕೋಶಗಳಿಗೆ ಹಾನಿಯುಂಟು ಮಾಡಬಲ್ಲವುಗಳಾಗಿವೆ. ಹೀಗಾಗಿ ಆರೋಗ್ಯ ಇಲಾಖೆಯಡಿ ತಾಂತ್ರಿಕ ಸಲಹಾ ಸಮಿತಿಯೂ ಪಟಾಕಿ ನಿಷೇಧದ ಬಗ್ಗೆ ಶಿಫಾರಸು ನೀಡಿದೆ.
ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಾಂಪ್ರದಾಯಿಕ ಪಟಾಕಿ ನಿಷೇಸಲು ನಿರ್ಧರಿಸಿರುವ ಸಿಎಂ ಯಡಿಯೂರಪ್ಪ, ಪಟಾಕಿ ನಿಷೇಧ ಕುರಿತು ಅನೇಕ ಸಲಹೆಗಳು ಸಾರ್ವಜನಿಕರಿಂದ ಬಂದಿರುವ ಹಿನ್ನೆಲೆ ಹಸಿರು ಪಟಾಕಿ ಬಳಸುವಂತೆ ಮನವಿ ಮಾಡಿದ್ದಾರೆ. ದೀಪಾವಳಿಯನ್ನು ಸರಳ ಹಾಗೂ ಸುಂದರವಾಗಿ ಆಚರಿಸಲು ಹಸಿರು ಪಟಾಕಿ ಬಳಸಿ ಎಂದು ಕರೆ ನೀಡಿದ್ದಾರೆ.
ಕೋಟ್ಯಂತರ ರೂ.ನಷ್ಟ
ದೀಪಾವಳಿಗೆ ಇನ್ನು 7 ದಿನಗಳಷ್ಟೇ ಬಾಕಿಯಿದ್ದು, ರಾಜ್ಯದಲ್ಲಿ ಪಟಾಕಿಯನ್ನು ತಮಿಳುನಾಡಿನ ಶಿವಕಾಶಿಯಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಒಂದು ತಿಂಗಳ ಮೊದಲೇ ಅನೇಕ ರೀತಿ ರಿವಾಜುಗಳನ್ನು ರೂಪಿಸಿ ಪಟಾಕಿ ಮಾರಾಟ ಮಾಡಲು ಅನುಮತಿ ನೀಡಲಾಗುತ್ತಿದ್ದು ಉದ್ಯಮಿಗಳು ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿರುತ್ತಾರೆ. ಒಂದು ವೇಳೆ ರಾಜ್ಯದಲ್ಲಿ ಪಟಾಕಿ ನಿಷೇಧವಾದರೆ 1000 ಕೋಟಿಗೂ ಹೆಚ್ಚು ನಷ್ಟವಾಗುವ ಸಾಧ್ಯತೆ ಇದೆ ಎಂದು ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ