ಬೆಳಗಾವಿ: ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರ ಹೇಳಿಕೆ ಬಗ್ಗೆ ಹೆಚ್ಚೇನೂ ಮಾತನಾಡಲ್ಲ. ಪಕ್ಷದ ತೀರ್ಮಾನಕ್ಕೆ ನಾವು ಬದ್ಧರಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.
ಅವರು ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕಾಶ ಹುಕ್ಕೇರಿ ವೈಯಕ್ತಿಕ ಅಭಿಪ್ರಾಯ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಪ್ರಕಾಶ ಹುಕ್ಕೇರಿ ಹೇಳಿಕೆ ಬಗ್ಗೆ ನಮ್ಮ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಹೇಳಿದ್ದಾರೆ. ವೈಯಕ್ತಿಕವಾಗಿ ಪ್ರಕಾಶ ಹುಕ್ಕೇರಿ ಏನು ನಿರ್ಧಾರ ತಗೆದುಕೊಳ್ಳುತ್ತಾರೋ ಮುಂದೆ ನೋಡೋಣ. ಪ್ರಕಾಶ ಹುಕ್ಕೇರಿ ಬಿಜೆಪಿ ಬಂದರೆ ತಗೆದುಕೊಳ್ಳೋದು ಬಿಡೋದು ವರಿಷ್ಠರ ತೀರ್ಮಾನವಾಗಿದೆ. ವೈಯಕ್ತಿಕವಾಗಿ ಪ್ರಕಾಶ ಹುಕ್ಕೇರಿ ನನ್ನ ಗೆಳೆಯ, ಅದರ ಬಗ್ಗೆ ಎರಡು ಮಾತಿಲ್ಲ. ಪ್ರಕಾಶ ಹುಕ್ಕೇರಿ ಬಿಜೆಪಿ ಸೇರ್ಪಡೆ ಬಗ್ಗೆ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ ಎಂದರು.
ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಹೈಕಮಾಂಡ್ ಯಾರಿಗೆ ನೀಡುತ್ತಾರೆ ಅವರನ್ನು ಗೆಲ್ಲಿಸಿ ತರುತ್ತೇವೆ. ಐದರಿಂದ ಆರು ಲಕ್ಷ ಲೀಡ್ ಮೂಲಕ ಗೆಲ್ಲುವ ವ್ಯವಸ್ಥೆ ನಾವು ಮಾಡಿದ್ದೇವೆ. ಲೋಕಸಭಾ ಉಪಚುನಾವಣೆಗೆ ಕಾರ್ಯಕರ್ತರ ದಂಡು ಈಗ ರೆಡಿ ಆಗಿದೆ. ಆದಷ್ಟು ಶೀಘ್ರ ಎಲೆಕ್ಷನ್ ಡಿಕ್ಲೇರ್ ಆಗಲಿ. ದಿ.ಸುರೇಶ ಅಂಗಡಿ ಮಾಡಿದ ಕೆಲಸ ಮುಂದುವರಿಸುವ ಅಭ್ಯರ್ಥಿ ಕೊಟ್ಟರೆ ಒಳ್ಳೆಯದು ಎಂದರು.
ಐವರು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆಂಬ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ರಮೇಶ್ ಜಾರಕಿಹೊಳಿ, ಡಿಸಿಎಂ ಲಕ್ಷ್ಮಣ್ ಸವದಿ ಹೇಳಿಕೆ ನೀಡಿದ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಅವರನ್ನೇ ಕೇಳಿದರೇ ಸೂಕ್ತ ಎಂದರು.
ಸುರೇಶ ಅಂಗಡಿ ಒಳ್ಳೆಯ ಕೆಲಸ ಮಾಡುತ್ತಿದ್ದರು, ನಾವು ಹೇಗೆ ತಡವಾಗಿ ಮಂತ್ರಿ ಆದೇವೋ ಹಾಗೇ ತಡವಾಗಿ ಮಂತ್ರಿ ಆದರೂ, ಒಳ್ಳೆಯ ಸ್ಥಾನ ಸಿಗುತ್ತಿತ್ತು, ದುರ್ದೈವದಿಂದ ಅಕಾಲಿಕ ನಿಧನರಾದರು. ಸುರೇಶ್ ಅಂಗಡಿ ನಿಧನದಿಂದ ವೈಯಕ್ತಿಕವಾಗಿ, ರಾಜ್ಯಕ್ಕೆ ಹಾನಿಯಾಗಿದೆ.
ಸುರೇಶ ಅಂಗಡಿ ಮಾವ ಲಿಂಗರಾಜ ಪಾಟೀಲ ಏನು ಹೇಳಿದ್ದಾರೆ ನಾನು ನೋಡಿಲ್ಲ. ಸುರೇಶ ಅಂಗಡಿ ಸಿಎಂ ಆಗುತ್ತಿದ್ದರು ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಅವರ ಭವಿಷ್ಯ ಒಳ್ಳೆಯದಿತ್ತು. ಎಲ್ಲರ ಮನಸ್ಸು ಗೆದ್ದಿದ್ದರು ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅನುದಾನ ಸಿಗುತ್ತಿಲ್ಲ ಎಂದು ಬಿಜೆಪಿ ಶಾಸಕರ ಅಸಮಾಧಾನ ಹಾಗೂ ಸಿಎಂ ಬಿಎಸ್ವೈ ಬಗ್ಗೆ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ರಮೇಶ ಜಾರಕಿಹೊಳಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲು, ಸಿಎಂ ಬಿಎಸ್ವೈ ಕರೆದು ಮಾತನಾಡಿ ಸರಿಪಡಿಸುತ್ತಾರೆ. ಅದೇನೂ ದೊಡ್ಡ ಸಮಸ್ಯೆ ಅಲ್ಲ ಎಂದರು.
ಮುಂದಿನ ಬಾರಿ ಬಿಜೆಪಿ ಸರ್ಕಾರ ಬಂದರೆ ಉತ್ತರ ಕರ್ನಾಟಕದವರು ಸಿಎಂ ಆಗುತ್ತಾರೆ ಎನ್ನುವ ವಿಷಯಕ್ಕೆ ಪ್ರತಿಕ್ರಿಯಿಸಿ, ನಾವು ಅಖಂಡ ಕರ್ನಾಟಕ ರಾಜಕೀಯದಲ್ಲಿ ವಿಶ್ವಾಸ ಇಟ್ಟವರು. ಅಖಂಡ ಕರ್ನಾಟಕದಲ್ಲಿ ಯಾರೇ ಸಿಎಂ ಆದರೂ ನಮ್ಮ ಮುಖ್ಯಮಂತ್ರಿನೇ. ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಯಕ್ತಿಕ ಅಭಿಪ್ರಾಯ ಹೇಳಿರಬಹುದು.
ಮುಂದೆ ಡಿಸಿಎಂ ಆಗತ್ತೀರಾ ಅಂತಾ ರಮೇಶ ಜಾರಕಿಹೊಳಿಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ನೋಡೋಣ ಈ ಸಂದರ್ಭದಲ್ಲಿ ಹೇಳೋದು ಸೂಕ್ತ ಅಲ್ಲ ಎಂದರು.