ಅಡಿಕೆ ಬೆಳೆಗಾರರಲ್ಲಿ ಆತಂಕ ಭೂತಾನ್‍ನಿಂದ ಆಮದು ಮಾಡಿಕೊಳ್ಳಲು ಒಪ್ಪಂದ

ಶಿರಸಿ: ಒಂದೆಡೆ ಅಡಿಕೆ ದರ ಏರಿಕೆಯ ಖುಷಿಯಲ್ಲಿ ಬೆಳೆಗಾರರಿದ್ದರೆ, ಮತ್ತೊಂದೆಡೆ ಭೂತಾನ್‍ನಿಂದ ಆಮದು ಮಾಡಿಕೊಳ್ಳಲು ಏರ್ಪಟ್ಟಿರುವ ಒಪ್ಪಂದದ ಬಗ್ಗೆ ಚಿಂತೆಗೀಡಾಗಿದ್ದಾರೆ. ಆ ದೇಶದ ಮೂಲಕ ಇತರ ದೇಶಗಳ ಅಡಿಕೆ ಭಾರತದ ಮಾರುಕಟ್ಟೆ ಪ್ರವೇಶಿಸಿದರೆ ತೊಂದರೆ ತಪ್ಪಿದ್ದಲ್ಲ ಎಂಬ ಆತಂಕದಲ್ಲಿದ್ದಾರೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಈ ವರ್ಷ ಫೆಬ್ರುವರಿಯಲ್ಲಿ ಭೂತಾನ್‍ಗೆ ಭೇಟಿ ನೀಡಿದ್ದರು. ಆಗ, ಅಲ್ಲಿನ ಅಡಿಕೆ, ಮ್ಯಾಂಡರಿನ್ ಕಿತ್ತಳೆ, ಸೇಬು ಹಾಗೂ ಶುಂಠಿಗಳಿಗೆ ನಮ್ಮ ದೇಶದಲ್ಲೂ ಮಾರುಕಟ್ಟೆಗೆ ಅವಕಾಶ ನೀಡುವ ಬಗ್ಗೆ ಒಪ್ಪಂದ ಪ್ರಕ್ರಿಯೆ ಆರಂಭಿಸಲಾಗಿತ್ತು. ಅ.16ರಂದು ಇದು ಪೂರ್ಣಗೊಂಡಿದೆ.
‘ಭೂತಾನ್‍ನಲ್ಲಿ ಬೆಳೆಯುವ ಅಡಿಕೆಯ ಪ್ರಮಾಣ ಅತ್ಯಂತ ಕಡಿಮೆ. ಅಲ್ಲಿಂದ ಮಾತ್ರ ಆವಕವಾದರೆ ತೊಂದರೆಯಾಗದು. ಆದರೆ, ಆ ದೇಶದ ಮೂಲಕ ಮ್ಯಾನ್ಮಾರ್, ಬಾಂಗ್ಲಾದೇಶ, ಶ್ರೀಲಂಕಾ, ಮಲೇಷ್ಯಾ ಮುಂತಾದ ದೇಶಗಳಿಂದಲೂ ಆವಕ ಶುರುವಾದರೆ ನಮ್ಮ ಮಾರುಕಟ್ಟೆಗೆ ಹೊಡೆತ ಬೀಳುತ್ತದೆ. ಇದನ್ನು ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು’ ಎಂದು ಕುಮಟಾದ ಅಡಿಕೆ ಕೃಷಿಕ ವಿವೇಕ ಜಾಲಿಸತಿಗೆ ಒತ್ತಾಯಿಸಿದರು.
‘ಚೀನಾದಿಂದ ಎಲೆಕ್ಟ್ರಾನಿಕ್ ಉತ್ಪನ್ನಗಳ ಆಮದು ನಿಯಂತ್ರಿಸಲಾಗಿದೆ ಎಂದು ಹೇಳಿದ್ದರೂ ನಮ್ಮ ದೇಶದಲ್ಲಿ ಅಲ್ಲಿನ ಉತ್ಪನ್ನಗಳೇ ತುಂಬಿವೆ. ಅಡಿಕೆ ವಿಚಾರದಲ್ಲೂ ಹೀಗೇ ಆದರೆ ಬೆಳೆಗಾರ ಕಂಗಾಲಾಗುತ್ತಾನೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.
‘ಲಾಕ್‍ಡೌನ್ ಕಾರಣದಿಂದ ವಿದೇಶಗಳಿಂದ ಆಮದು ಆಗುವುದು ನಿಂತಿದೆ. ಇದರ ಪರಿಣಾಮವಾಗಿ ಅಡಿಕೆ ಧಾರಣೆ ಏರಿಕೆಯಾಗಿದೆ. ಇತರ ದೇಶಗಳಿಂದ ಭೂತಾನ್ ಮೂಲಕ ಅಡಿಕೆ ಬಂದರೆ ದರ ಮತ್ತೆ ಕುಸಿಯುತ್ತದೆ. ಇದನ್ನು ತಡೆಯಬೇಕಾದರೆ, ಈ ಒಪ್ಪಂದವನ್ನು ರದ್ದುಪಡಿಸಬೇಕು’ ಎನ್ನುವುದು ಕುಮಟಾ ತಾಲ್ಲೂಕಿನ ಮತ್ತಳ್ಳಿಯ ಬೆಳೆಗಾರ ರವಿ ಹೆಗಡೆ ಅಭಿಪ್ರಾಯಪಟ್ಟರು.
‘ಮಾಹಿತಿ ಹಂಚಿಕೊಳ್ಳಬೇಕು’:
ಸಾರ್ಕ್ ನಿಯಮದಡಿ ಒಪ್ಪಂದ ಮಾಡಿಕೊಂಡ ದೇಶಗಳು ಆಮದು ಮಾಡಿಕೊಳ್ಳುವ ಕೃಷಿ ಉತ್ಪನ್ನದ ಸಂಪೂರ್ಣ ಮಾಹಿತಿಗಳನ್ನು ಹಂಚಿಕೊಳ್ಳಬೇಕು. ಅದರ ಗುಣಮಟ್ಟ, ಬೆಳೆಯ ಪ್ರಮಾಣವನ್ನು ತಿಳಿಸಬೇಕು ಎಂಬ ಷರತ್ತು ಇದೆ. ಒಂದು ವೇಳೆ, ಆ ದೇಶದಲ್ಲಿ ಬೆಳೆಯುವ ಉತ್ಪನ್ನಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆವಕವಾದರೆ ಅದರ ಮಾರುಕಟ್ಟೆಗೆ ಅವಕಾಶ ನೀಡಲಾಗುವುದಿಲ್ಲ’ ಎಂದು ಶಿರಸಿಯಲ್ಲಿ ಈಚೆಗೆ ಸಂಸದ ಅನಂತಕುಮಾರ ಹೆಗಡೆ ತಿಳಿಸಿದ್ದರು.
ಅವರ ಜೊತೆಗಿದ್ದ ‘ಕ್ಯಾಂಪೆ’ ಅಧ್ಯಕ್ಷ ಸತೀಶ್ಚಂದ್ರ ಪ್ರತಿಕ್ರಿಯಿಸಿ, ‘ಭೂತಾನ್ ಮೂಲಕ ಬೇರೆ ದೇಶಗಳಿಂದ ಅಡಿಕೆ ಬಾರದಂತೆ ನಿಗಾ ವಹಿಸಬೇಕು ಎಂದು ಕೇಂದ್ರ ವಾಣಿಜ್ಯ ಸಚಿವರಿಗೆ ಮನವಿ ಮಾಡಲಾಗಿದೆ’ ಎಂದು ಹೇಳಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ