ಬೆಳಗಾವಿ: ಕಳೆದ ನಾಲ್ಕೈದು ದಿನದ ವರದಿ ಪ್ರಕಾರ ರಾಜ್ಯದಲ್ಲಿ ಮಳೆಯಿಂದ ಅಂದಾಜು ಮೂರು ಸಾವಿರ ಕೋಟಿ ರೂ. ಹಾನಿಯಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.
ಅವರು ಸೋಮವಾರ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮಳೆಯಿಂದ 10 ಜನ ಮೃತಪಟ್ಟಿದ್ದಾರೆ. ನೂರಕ್ಕೂ ಹೆಚ್ಚು ಜಾನುವಾರು ಮೃತಪಟ್ಟಿದ್ದು, ಸುಮಾರು 8 ಸಾವಿರ ಜನರಿಗೆ ಪರಿಹಾರ ಕೇಂದ್ರದಲ್ಲಿದ್ದಾರೆ. ಕೊರೋನಾ ಇರುವುದರಿಂದ ಅಲ್ಲಿರುವವರಿಗೆ ಮಾಸ್ಕ್, ಸ್ಯಾನಿಟೈಸರ್ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.
ಕೊರೋನಾ ಹಾಗೂ ಪ್ರವಾಹ ಸರ್ಕಾರಕ್ಕೆ ಸವಾಲಿನ ಪ್ರಶ್ನೆಯಾಗಿದೆ. ಇದನ್ನು ಸಮರ್ಥವಾಗಿ ಎದುರಿಸಿ ಹೊರಬರುವುದು ಸರ್ಕಾರ ಮಾಡುತ್ತದೆ. ಯಾವುದೇ ರೀತಿಯ ಹಣದ ಕೊರತೆ ಬರದಂತೆ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಭರವಸೆ ನೀಡಿದರು.
ಬೆಳಗಾವಿ ಜಿಲ್ಲಾಕಾರಿಯ ಖಾತೆಯಲ್ಲಿ 88 ಕೋಟಿ ರೂ. ಹಣವಿದೆ. ಅದು ಎಲ್ಲ ತಾಲೂಕಿಗೂ ಸಂಬಂಸಿದ್ದು, ಖಚಿತವಾಗಿ ಯಾವ ತಾಲೂಕಿಗೆ ಬೇಕೆಂದು ಹೇಳಿದರೆ ಬಿಡುಗಡೆ ಮಾಡುವುದಾಗಿ ಹೇಳಿದರು.
ಕಲಬುರಗಿಯಲ್ಲಿ 20 ಕೋಟಿ ರೂ., ಯಾದಗಿರಿಯಲ್ಲಿ 16 ಕೋಟಿ ರೂ., ಬಾಗಲಕೋಟನಲ್ಲಿ 33 ಕೋಟಿ ರೂ., ಕೊಡಗುನಲ್ಲಿ 68 ಕೋಟಿ ರೂ. ಹಣವಿದೆ. ನಾನು ಕಂದಾಯ ಸಚಿವನಾದ ಮೇಲೆ ಜಿಲ್ಲಾಕಾರಿಗಳು ಪಿ.ಡಿ.ಖಾತೆಯಲ್ಲಿ ಹಣ ಆದ ಮೇಲೆ ಪತ್ರ ಬರೆಯುತ್ತಿದ್ದರು. ಆ ಹಣ ಕಳುಹಿಸಿಕೊಡಲು ನಾಲ್ಕೈದು ತಿಂಗಳು ಆಗುತ್ತಿತ್ತು.
ಆದರೆ, ಈಗ ಹಾಗೆ ಆಗೋಲ್ಲ. 5 ಕೋಟಿ ರೂ. ಗಿಂತ ಕಡಿಮೆ ಇರುವ ಯಾವ ಯಾವ ಜಿಲ್ಲೆಯಲ್ಲಿ ಯಾವುದೇ ಡಿಸಿಯ ಅನುಮತಿ ಕೇಳದೆ ನಾವೇ ಹಣ ನೀಡುತ್ತೇವೆ. ಒಟ್ಟು 666 ಕೋಟಿ ರೂ. ಹಣ ಎಲ್ಲ ಜಿಲ್ಲಾಕಾರಿಗಳ ಖಾತೆಯಲ್ಲಿ ಹಣ ಇದೆ. ಹಣದ ಅಭಾವ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದಲ್ಲಿ ಮಳೆಯಿಂದ ಹಾನಿಯಾದ ಜಿಲ್ಲೆಗಳಿಗೆ ಸತತವಾಗಿ ಭೇಟಿ ನೀಡುತ್ತಿದ್ದೇನೆ. ಇತ್ತೀಚೆಗೆ ಕಲಬರುಗಿ ಮತ್ತು ಯಾದಗಿರಿಗೆ ಭೇಟಿ ಮಾಡಿ ಅಲ್ಲಿ ಪರಿಹಾರ ನೀಡುವುದನ್ನು ಚುರುಕಾಗಿ ಮಾಡಬೇಕೆಂದು ಜಿಲ್ಲಾಕಾರಿಗಳಿಗೆ ಸೂಚನೆ ನೀಡಿ ಬಂದಿದ್ದೇನೆ.
ಪ್ರವಾಹದಲ್ಲಿ ನೊಂದವರಿಗೆ ರಾಜ್ಯ ಸರ್ಕಾರದಿಂದ ಸಹಾಯ ಮಾಡುವುದು ನಮ್ಮ ಕರ್ತವ್ಯ. ಅದನ್ನು ಯಡಿಯೂರಪ್ಪ ನೇತೃತ್ವದ ಸರ್ಕಾರ ಮಾಡಿಯೇ ಮಾಡುತ್ತದೆ. ಯಾವುದೇ ಹಣದ ಕೊರತೆ ಸರ್ಕಾರದಲ್ಲಿ ಇಲ್ಲ. ಪರಿಹಾರ ಕಾರ್ಯ ಚುರುಕುಗೊಳಿಸಲು ನಾನು ಬಂದಿದ್ದೇನೆ. ಅಕಾರಿಗಳಿಗೂ ಸೂಚನೆ ನೀಡುತ್ತೇನೆ ಯಾವುದೇ ಕಾರಣಕ್ಕೂ ಸೋಮಾರಿತನ ಮಾಡದೆ ನೊಂದವರ ಸಂಕಷ್ಟಕ್ಕೆ ಮಿಡಬೇಕೆಂದು ತಿಳಿಸಿದ್ದೇನೆ ಎಂದು ಹೇಳಿದರು.
ಪರಿಹಾರ ಕೇಂದ್ರದಲ್ಲಿರುವ ಜನರಿಗೆ ಗುಣಮಟ್ಟದ ಆಹಾರ ನೀಡಬೇಕೆಂದು ಮಾನದಂಡ ನಿಗದಿ ಮಾಡಿದ್ದೇನೆ. ಕೆಲವು ಪರಿಹಾರ ಕೇಂದ್ರದಲ್ಲಿ ಜಾತಿ ತಾರತಮ್ಯ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅಂಥದ್ದು ಯಾರು ಮಾಡುತ್ತಾರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಾರೆ. ಪರಿಹಾರ ಕೇಂದ್ರದಲ್ಲಿರುವ ಎಲ್ಲರಿಗೂ ಸಮಾನ ರೀತಿಯಲ್ಲಿ ನೋಡಿಕೊಳ್ಳಬೇಕು ಅಲ್ಲದೆ, ಅವರಿಗೆ ಪೌಷ್ಠಿಕ ಆಹಾರ ನೀಡಬೇಕೆಂದು ಸರಕಾರದ ಕಟ್ಟುನಿಟ್ಟಿನ ಆದೇಶ. ಇದನ್ನು ಉಲ್ಲಂಘನೆ ಮಾಡಿದ ಅಕಾರಿಗಳಿಗೆ ಮುಲಾಜಿಲ್ಲದೆ ಮನೆಗೆ ಕಳುಹಿಸಿಕೊಡಲಾಗುವುದು ಎಂದು ಸಚಿವ ಆರ್.ಅಶೋಕ ಅಕಾರಿಗಳಿಗೆ ಎಚ್ಚರಿಕೆ ನೀಡಿದರು.
ಶಾಸಕ ಅಭಯ ಪಾಟೀಲ, ಜಿಲ್ಲಾಕಾರಿ ಮಹಾಂತೇಶ ಹಿರೇಮಠ ಉಪಸ್ಥಿತರಿದ್ದರು.