ಈವರೆಗೆ ರಾಜೀನಾಮೆ ಕೇಳಿಲ್ಲ: ಬಿಎಸ್‍ವೈ ಸ್ಪಷ್ಟೋಕ್ತಿ ವರಿಷ್ಠರ ಸೂಚನೆ ಪಾಲನೆಗೆ ಬದ್ಧ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಇದುವರೆಗೆ ಯಾವುದೇ ಸಂದೇಶ ಬಂದಿಲ್ಲ. ಬಂದರೆ ಖಂಡಿತಾ ಕೊಡುತ್ತೇನೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಕಳೆದ ಕೆಲ ದಿನಗಳಿಂದ ಸಿಎಂ ಬದಲಾವಣೆ ಕುರಿತು ನಡೆಯುತ್ತಿದ್ದ ವದಂತಿಗಳಿಗೆ ತೆರೆ ಎಳೆದ ಸಿಎಂ, ಎರಡು ತಿಂಗಳ ಹಿಂದೆಯೇ ನಾನು ರಾಜೀನಾಮೆ ಕೊಡಲು ಸಿದ್ಧನಿದ್ದೆ. ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದಿದ್ದೆ. ಇತ್ತೀಚೆಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿ ಮಾಡಿದಾಗ ರಾಜೀನಾಮೆ ಬಗ್ಗೆ ಚರ್ಚೆಯಾಗಿಲ್ಲ. ಇದುವರೆಗೆ ಅಂತಹ ಯಾವುದೇ ಸಂದೇಶ ಬಂದಿಲ್ಲ. ಜು.25ಕ್ಕೆ ಬರಬಹುದೆಂದು ಕಾಯುತ್ತಿದ್ದೇನೆ. ಸೂಚನೆ ಬಂದರೆ ರಾಜೀನಾಮೆ ಕೊಟ್ಟು ಪಕ್ಷ ಸಂಘಟನೆಯಲ್ಲಿ ತೊಡಗುತ್ತೇನೆ ಎಂದರು.

ಗುರುವಾರ ಬೆಳಗ್ಗೆ ಬೆಂಗಳೂರಿನ ಕಾಚರಕನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, 75 ವರ್ಷ ದಾಟಿದ್ದರೂ ನನ್ನ ಮೇಲೆ ವಿಶ್ವಾಸವಿಟ್ಟು ಆಡಳಿತ ನಡೆಸಲು ಪಕ್ಷ ನನಗೆ ಸಹಕರಿಸಿದೆ. ಪಕ್ಷ ನನಗೆ ತಾಯಿ ಇದ್ದಂತೆ. ವರಿಷ್ಠರು ಏನು ಹೇಳುತ್ತಾರೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ಅಲ್ಲಿಯವರೆಗೂ ಮುಂದುವರಿಯುತ್ತೇನೆ. ಯಾರೂ ಪಕ್ಷಕ್ಕೆ ಅಗೌರವ ತರುವಂತೆ ನಡೆದುಕೊಳ್ಳಬಾರದು ಎಂದು ಹೇಳಿದರು.

ಸಿಎಂ ಹೇಳಿಕೆಗೆ ಸಚಿವರ ಸಮರ್ಥನೆ:
ಇದೇ ವೇಳೆ ಸಚಿವರಾದ ಬಸವರಾಜ ಬೊಮ್ಮಾಯಿ, ಆರ್.ಅಶೋಕ ಕೂಡ ಸಿಎಂ ಮಾತನ್ನು ಬೆಂಬಲಿಸಿದರು. ವರಿಷ್ಠರ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಿರಬೇಕು. ಇರುತ್ತೇವೆ. ಎಲ್ಲವನ್ನೂ ಸಿಎಂ ಹೇಳಿದ್ದಾರೆ. ರಾಜೀನಾಮೆ ಕೊಡಲು ಸಂದೇಶ ಬಂದಿಲ್ಲ ಎಂದ ಮೇಲೆ ಈ ಚರ್ಚೆಯೇ ಅನಾವಶ್ಯಕ ಎಂದು ಸಿಎಂ ಬೆನ್ನಿಗೆ ನಿಂತರು.

ಇದರ ಬೆನ್ನಲ್ಲೇ ಅನೇಕ ನಾಯಕರು ಸಿಎಂ ಭೇಟಿ ಮಾಡಿದರಲ್ಲದೆ, ಮಠಾೀಶರೂ ಭೇಟಿಯಾಗಿ ಸಮಾಲೋಚನೆ ನಡೆಸಿದರು. ಸಂಜೆ ಸಚಿವ ಸಂಪುಟ ಸಭೆಯನ್ನೂ ನಡೆಸಿದ ಸಿಎಂ, ಅನೇಕ ನಿರ್ಣಯಗಳನ್ನೂ ಕೈಗೊಂಡರು. ಶುಕ್ರವಾರದಂದು ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಯನ್ನೂ ನಡೆಸಲಿದ್ದಾರೆ. ಶನಿವಾರ ಶಿವಮೊಗ್ಗ ಜಿಲ್ಲೆಯ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಚಾಲನೆಯನ್ನು ವಚ್ರ್ಯುಯಲ್ ಮೂಲಕ ನೀಡಲಿದ್ದಾರೆ. ಸರ್ಕಾರಕ್ಕೆ 2 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕೈಪಿಡಿ ಬಿಡುಗಡೆ ಮಾಡಿ, ಸಾಧನೆಯನ್ನು ಜನರಿಗೆ ತಿಳಿಸಲಿದ್ದಾರೆ.

ಕೊನೆಯ ಕ್ಷಣದವರೆಗೆ ಕರ್ತವ್ಯ ನಿಭಾಯಿಸುವೆ:
ನಾನು ಅಕಾರ ಇರಲಿ, ಇಲ್ಲದೇ ಇರಲಿ ಬರುವ ಹತ್ತಾರು ವರ್ಷ ಬಿಜೆಪಿಯನ್ನು ಅಕಾರಕ್ಕೆ ತರಬೇಕು. ಸಂಘಟನೆಯನ್ನು ಬಲಪಡಿಸಲು ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡುತ್ತೇನೆ. ಸಿಎಂ ಆಗಿ ಎಷ್ಟು ದಿನ ಇರಬೇಕೋ ಎನ್ನುತ್ತಾರೋ ಅಷ್ಟು ದಿನ ಇರುತ್ತೇನೆ. ಯಾವತ್ತು ಬೇಡ ಎನ್ನುತ್ತಾರೋ ಅಂದಿನಿಂದ ಪಕ್ಷ ಸಂಘಟನೆ ಬಲಪಡಿಸಲು ಮುಂದಾಗುತ್ತೇನೆ. ಕೊನೆಯ ಕ್ಷಣದವರೆಗೆ ನನ್ನ ಕರ್ತವ್ಯ ನಿಭಾಯಿಸುತ್ತೇನೆ. ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲರೂ ಒಟ್ಟಾಗಿದ್ದೇವೆ. ಪ್ರಧಾನಿ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಅವರ ಸೂಚನೆ ಪಾಲಿಸುವುದು ನಮ್ಮ ಕರ್ತವ್ಯ ಅಷ್ಟೇ. ವರಿಷ್ಠರಿಗೆ ನಾನು ಯಾವುದೇ ಸಲಹೆಯನ್ನೂ ಕೊಡುವುದಿಲ್ಲ, ಒತ್ತಡವನ್ನೂ ಹೇರುವುದಿಲ್ಲ, ಅದ್ಯಾವುದರ ಅಗತ್ಯೆಯೂ ನನಗಿಲ್ಲ ಎಂದು ಸಿಎಂ ಹೇಳಿದರು.

ಸ್ವತಃ ಸಿಎಂ ಅವರೇ ಎಲ್ಲ ವಿಚಾರಗಳನ್ನೂ ಹೇಳಿದ್ದಾರೆ. ಪಕ್ಷದ ವರಿಷ್ಠರಿಂದ ಯಾವ ಸೂಚನೆಯೂ ಬಂದಿಲ್ಲ, ಬಂದರೆ ಪಾಲಿಸುತ್ತೇನೆ ಎಂದಿದ್ದಾರೆ. ಇದರಲ್ಲೇನಿದೆ?
ಬಸವರಾಜ ಬೊಮ್ಮಾಯಿ, ಗೃಹ ಸಚಿವ

ರಾಜೀನಾಮೆಯನ್ನೂ ಕೊಟ್ಟಿಲ್ಲ ಎಂಥದ್ದೂ ಇಲ್ಲ. ಸಚಿವರಾಗಿ ಸಿಎಂ ಅವರನ್ನು ಭೇಟಿ ಮಾಡಲು ಬಂದಿದ್ದಷ್ಟೇ.
ಶಿವರಾಂ ಹೆಬ್ಬಾರ್, ಕಾರ್ಮಿಕ ಸಚಿವ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ